ಉಪವಾಸ ಮತ್ತು ಕ್ರೀಡಾ ತರಬೇತಿ

Update: 2019-05-19 10:53 GMT

ಜಗತ್ತಿನ ಎಲ್ಲಾ ದೇಶ-ಧರ್ಮ-ಜಾತಿ ಮಾನವರಲ್ಲೂ ಉಪವಾಸ ಎಂಬುದು ಬದುಕಿನ ಭಾಗವಾಗಿರುವುದು ಸತ್ಯ. ಮುಸಲ್ಮಾನರು ರಮಝಾನ್ ಮಾಸ ಬಂತೆಂದರೆ ತಮ್ಮ ಧಾರ್ಮಿಕ ಶ್ರದ್ಧೆ ಮತ್ತು ಪ್ರಾರ್ಥನೆಗಳೊಂದಿಗೆ ಸಂಭ್ರಮದಿಂದ ರಮಝಾನ್ ತಿಂಗಳನ್ನು ಕಳೆಯುವುದು ವಾಡಿಕೆ. ಉಪವಾಸವೆಂಬುದು ಮಾನವರಿಗೂ ದೈಹಿಕ ಮತ್ತು ಮಾನಸಿಕ ಪರಿಶುದ್ಧತೆಯನ್ನು ತಂದು ಕೊಡುವುದಲ್ಲದೆ ಬದುಕಿಗೆ ನವಚೈತನ್ಯವನ್ನು ತುಂಬುವುದರಲ್ಲಿ ಅನುಮಾನವೇ ಇಲ್ಲ. ಈಗಿಲ್ಲಿ ಚರ್ಚಿಸಲು ತೊಡಗಿರುವ ವಿಚಾರವೇನೆಂದರೆ ಉಪವಾಸ ವ್ರತ ಕೈಗೊಳ್ಳುವ ಕ್ರೀಡಾಪಟುಗಳಿಗೆ ಇದರಿಂದಾಗುವ ಲಾಭ-ನಷ್ಟಗಳೇನು ಎಂಬುದು. ಉಪವಾಸದ ಕಟ್ಟುನಿಟ್ಟಿನ ಕ್ರಮ ಏನೆಂದರೆ, ಬೆಳಗಿನ ಜಾವ ಸುಮಾರು 4:30ರ ಒಳಗೆ ಉಪಾಹಾರ ಸೇವಿಸಿದರೆ ಮತ್ತೆ ಉಪಾಹಾರ ಸೇವಿಸುವುದು ಸಂಜೆ ಸೂರ್ಯಾಸ್ಥದ ನಂತರವೇ. ಈ ಸಮಯದ ಮಧ್ಯೆ ಗುಟುಕು ನೀರೂ ಸಹ ಸೇವಿಸುವುದು ಇಸ್ಲಾಮಿನಲ್ಲಿ ನಿಷಿದ್ಧ. ಇಂಥ ಕಠಿಣ ಸಂದರ್ಭಗಳಲ್ಲಿ ಕ್ರೀಡಾಪಟುಗಳು ತಮ್ಮನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದೇ? ಹೌದು. ಕ್ರೀಡಾ ತರಬೇತಿ ಪಡೆಯುವುದು ಇಸ್ಲಾಮಿನಲ್ಲಿ ವರ್ಜ್ಯವೇನಲ್ಲ. ಆದರೆ, ಉಪವಾಸದ ನಡುವೆ ದಣಿವು-ಆಯಾಸ, ಹಸಿವು, ನೀರಡಿಕೆಗಳನ್ನು ಮೀರಿ ಕ್ರೀಡಾ ತರಬೇತಿ ಪಡೆಯುವುದು ಕಷ್ಟಸಾಧ್ಯವೇನಲ್ಲ. ಕೆಲವು ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಕ್ರೀಡಾಪಟುಗಳು ಸಂಜೆಯ ತರಬೇತಿಗೆ ಬದಲಾಗಿ ಮುಂಜಾನೆ ಒಂದು ಹೊತ್ತಿನ ತರಬೇತಿ ಪಡೆಯುವುದು ಸೂಕ್ತ ಎಂದು ಹೇಳಲಾಗಿದೆ. ಸಂಶೋಧನೆಯು ಹೇಳುವ ಏನೆಲ್ಲ ಅಂಶಗಳು ಮುಖ್ಯ ಎಂದು ತಿಳಿದುಕೊಳ್ಳೋಣ.

ಮೊದಲನೆಯದಾಗಿ, ಉಪವಾಸ ವ್ರತ ಕೈಗೊಂಡ ಕ್ರೀಡಾಪಟುಗಳು ಬೆಳಗಿನ ತರಬೇತಿ ಪಡೆಯುವಾಗ ಅವರ ದೇಹದ ರಕ್ತ ಪರಿಚಲನೆಯ ವೇಗ ಹೆಚ್ಚಾಗಿ ರಕ್ತದ ಒತ್ತಡ ನಿಯಂತ್ರಣದಲ್ಲಿರುತ್ತದೆ. ಎಡನೆಯದಾಗಿ ಸೇವಿಸಿದ ಆಹಾರವು ಗಟ್ಟಿಯಾಗಿದ್ದರೆ ಅದು ಜೀರ್ಣವಾಗಿ ದೇಹಕ್ಕೆ ಪೌಷ್ಟಿಕಾಂಶವು ದೊರಕುವಲ್ಲಿ ಸಹಕಾರಿಯಾಗುತ್ತದೆ. ಜೀರ್ಣವಾದ ಆಹಾರವು ಶಕ್ತಿಯಾಗಿ ಪರಿವರ್ತಿತವಾಗಲು ಅನುಕೂಲವಾಗುತ್ತದೆ. ಮೂರನೆಯದಾಗಿ ಮೂತ್ರಪಿಂಡಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ತೊಡಗುತ್ತವೆೆ. ನಾಲ್ಕನೆಯದಾಗಿ ಸ್ನಾಯುಗಳು ಬಿಗುವಾಗಿ ಮಾಂಸಖಂಡಗಳು ನವಚೈತನ್ಯ ಪಡೆಯುವಲ್ಲಿ ಯಶಸ್ವಿಯಾಗುತ್ತವೆ. ಜೊತೆಗೆ ಇಂಥ ತರಬೇತಿಯ ಸಮಯದಲ್ಲಿ ಮನಸ್ಸು ಜಡತ್ವದಿಂದ ಹೊರಬರುತ್ತದೆ. ಕಷ್ಟ ಸಹಿಷ್ಣುತೆಯನ್ನು ಅರಿಯುವುದರಲ್ಲಿ ಕ್ರೀಡಾಳುವಿಗೆ ಉಪವಾಸ ಮತ್ತು ತರಬೇತಿ ಎರಡೂ ಮಾದರಿಯಾಗುತ್ತವೆ. ಇದೇ ಕಾರಣದಿಂದಾಗಿ ಕ್ರೀಡೆಯಲ್ಲಿ ಲವಲವಿಕೆ ಮತ್ತು ಪ್ರಾಮಾಣಿಕತೆ ಮನೆಮಾಡುತ್ತವೆ. ಐದನೆಯದಾಗಿ ಉಪವಾಸ ಮಾಡುವುದರಿಂದ ದೇಹದಲ್ಲಿ ಸಹಜವಾಗಿ ಸಂಗ್ರಹಗೊಂಡಿರುವ ಅನಗತ್ಯ ಕೊಬ್ಬು ಮತ್ತು ಹಾನಿಕಾರಕ ಟಾಕ್ಸಿನ್‌ಗಳು ದೇಹದಿಂದ ಹೊರದೂಡಲ್ಪಡುತ್ತವೆ. ಕ್ರೀಡಾ ಚಟುವಟಿಕೆಯಿಂದಿರುವವರಲ್ಲಿ ಇದು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸಮಾಡಬಲ್ಲದು. ನಮಗೆ ಗೊತ್ತಾಗದಂತೆ ಕೆಲವು ಆಂತರಿಕ ರೋಗಗಳು ನಮ್ಮ ದೇಹವನ್ನು ಕಾಡಲಾರಂಭಿಸುತ್ತವೆ. ಉಪವಾಸದಿಂದ ಅಂಥ ರೋಗಲಕ್ಷಣಗಳು ಕ್ಷೀಣಿಸಿ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ಉದಾಹರಣೆಗೆ ಮಂಡಿನೊವು, ಕೀಲು ನೊವು, ಸ್ನಾಯು ಸೆಳೆತ, ಗ್ಯಾಸ್ಟ್ರಿಕ್‌ನಂಥ ಸಮಸ್ಯೆಗಳು ಅಲ್ಪಾವಧಿಯಲ್ಲೇ ಕಣ್ಮರೆಯಾಗುತ್ತವೆ.

ಉಪವಾಸದ ಸಮಯದಲ್ಲಿ ನಡೆಯುವ ಇಂಥ ತರಬೇತಿಗಳಿಂದ ದೇಹವು ವ್ಯಾಯಾಮದ ಮೂಲಕ ಹೆಚ್ಚಿನ ಆಮ್ಲಜನಕ ಹೀರಿಕೊಳ್ಳುತ್ತದೆ. ಇದರಿಂದಲೇ ಮಾಂಸಖಂಡಗಳು ಬಲಗೊಳ್ಳುವುದು. ಮುಖ್ಯ ಸಂಗತಿಯೊಂದನ್ನು ಇಲ್ಲಿ ಹಂಚಿಕೊಳ್ಳಬೇಕಿದೆ. ಉಪವಾಸದ ಸಂದರ್ಭದಲ್ಲಿ ಆಹಾರ ಸೇವಿಸುವಾಗ ಕ್ರೀಡಾಪಟುಗಳು ಪ್ರೊಟೀನ್ ಮತ್ತು ಮಿನರಲ್‌ಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸುವಂತೆ ನೋಡಿಕೊಳ್ಳಬೇಕು.

ದೈಹಿಕ ಮತ್ತು ಮಾನಸಿಕ ದೃಢತೆಗೆ ಇದು ಅತ್ಯವಶ್ಯಕವಾಗಿದೆ. ಮೆದುಳು ಚುರುಕುಗೊಳ್ಳುವುದು, ಮಾಂಸಖಂಡಗಳ ಬಲಿಷ್ಠತೆ, ಸುಗಮ ಉಸಿರಾಟ ಇವೆಲ್ಲ ಕ್ರೀಡಾ ಪಟುಗಳಿಗೆ ಕ್ರೀಯಾತ್ಮಕವಾಗಿಯೂ ಇರಲು ಪ್ರೇರೇಪಿಸುತ್ತದೆ.

 ಈ ಎಲ್ಲ ವೈಜ್ಞಾನಿಕ ಅಂಶಗಳನ್ನು ಕ್ರೀಡಾ ಪಟುಗಳು ತಿಳಿದುಕೊಳ್ಳುವುದು ಅತೀ ಜರೂರಿನ ವಿಷಯವಾಗಿದೆ. ಮುಂಜಾನೆಯ 6ಗಂಟೆಯಿಂದ ಮಧ್ಯಾಹ್ನ 12ರ ವರೆಗಿನ ಅವಧಿಯು ತರಬೇತಿ ಗಳಿಸಲು ಅತ್ಯುತ್ತಮವಾದ ಸಮಯವಾಗಿದೆ. ಈ ಅವಧಿಯ ತರಬೇತಿಯ ನಂತರ ಒಳ್ಳೆಯ ನಿದ್ರೆ, ವಿಶ್ರಾಂತಿ, ಏಕಾಗ್ರತೆ ಸಂಪಾದಿಸಿದರೆ ಕ್ರೀಡೆಗಳಲ್ಲಿ ಉತ್ತಮ ಫಲಿತಾಂಶ ಕಾಣಲು ಸಾಧ್ಯವೆಂಬುದನ್ನು ಸಂಶೋಧನೆ ದೃಢಪಡಿಸುತ್ತದೆ.

ಇದರ ಹೊರತಾಗಿ ಉಪವಾಸದ ಸಂದರ್ಭದಲ್ಲಿ ಸಂಜೆ ವೇಳೆಯು ತರಬೇತಿಗೆ ಪೂರಕವಾಗಲಾರದು. ಏಕೆಂದರೆ ಸೂರ್ಯೋದಯದ ಮುನ್ನ ಸೇವಿಸಿದ ಆಹಾರ ಸಂಜೆಯವರೆಗೆ ಜೀರ್ಣಗೊಂಡು ಕ್ರೀಡಾಳುಗಳ ದೈಹಿಕ ಸಾಮರ್ಥ್ಯ, ಲವಲವಿಕೆ ಕುಗ್ಗಿ ಹೋಗಿರುತ್ತದೆ.ಸಂಜೆಯ ಬಿಸಿಲು ಅವರನ್ನು ಮತ್ತಷ್ಟು ಆಯಾಸಗೊಳಿಸುತ್ತದೆ. ಯಾವ ರೀತಿಯಲ್ಲೂ ಈ ಸಂದರ್ಭ ಸಹಕಾರಿಯಾಗಿರುವುದಿಲ್ಲ. ಹೊರಾಂಗಣ ಕ್ರೀಡಾಂಗಣ ಬದಿಗಿರಲಿ, ಒಳಾಂಗಣವೂ ಸಂಜೆಗೆ ಉತ್ತಮವಲ್ಲ. ಬದಲಿಗೆ ಬೆಳಗಿನ ತರಬೇತಿಯನ್ನೇ ಒಳಾಂಗಣದಲ್ಲಿ ಕೈಗೊಂಡರೆ ಇನ್ನೂ ಒಳಿತು.

Similar News