ಸಿದ್ದರಾಮಯ್ಯರ ಮಾರ್ಗದರ್ಶನ ಇರುವವರೆಗೆ ನಮ್ಮನ್ನು ಯಾರಿಂದಲೂ ಅಲುಗಾಡಿಸಲಾಗದು: ಕುಮಾರಸ್ವಾಮಿ

Update: 2019-05-19 11:10 GMT

ಮೈಸೂರು, ಮೇ 19: ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯರ ನೇತೃತ್ವ ಮತ್ತು ಮಾರ್ಗದರ್ಶನದಲ್ಲೇ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ. ಹಾಗಾಗಿ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ದಕ್ಕೆ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ನಗರದ ಕಲಾಮಂದಿರದಲ್ಲಿ ರವಿವಾರ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ 'ಸಮುದಾಯ ನಾಯಕರು' ಮತ್ತು 'ಸಮಾಜಮುಖಿ ಶ್ರೀಸಾಮಾನ್ಯರು' ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಮಾಧ್ಯಮಗಳು ದಿನೇ ದಿನೇ ಮೈತ್ರಿ ಸರ್ಕಾರ ಪತನವಾಗುತ್ತದೆ ಎಂದು ಎಪಿಸೋಡ್ ಗಳ ಮುಖಾಂತರ ತಮ್ಮ ಊಹೆಗೆ ತಕ್ಕಂತೆ ತೋರಿಸುತ್ತಿವೆ. ಸಿದ್ದರಾಮಯ್ಯ ಅವರ ಮಾರ್ಗದರ್ಶನ ಮತ್ತು ರಾಹುಲ್ ಗಾಂಧಿಯವರ ಬೆಂಬಲ ಇರುವ ತನಕ ನಮ್ಮನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದರು.

ಮೇ 23ರ ನಂತರ ಸರ್ಕಾರ ಬೀಳುತ್ತದೆ ಎಂಬ ಕನಸನ್ನು ಬಿಜೆಪಿ ಕಾಣುತ್ತಿದೆ. ಈಗಾಗಲೆ ಬಿಜೆಪಿ ನಾಯಕರು ಸೂಟುಬೂಟು ಹೊಲಿಸಿಕೊಂಡು ಸಿದ್ದರಾಗಿದ್ದಾರೆ. ನಿಮ್ಮ ಆಸೆ ಯಾವುದೇ ಕಾರಣಕ್ಕೂ ಈಡೇರುವುದಿಲ್ಲ ಎಂದು ಸಿಎಂ ವ್ಯಂಗ್ಯವಾಡಿದರು.

ನಾನು ಮಾಧ್ಯಮಗಳಿಂದ ಮೌನವಹಿಸಿ ವಿಶ್ವನಾಥ್ ಮತ್ತು ಹೊರಟ್ಟಿ ಅವರಿಂದ ಹೇಳಿಕೆ ನೀಡಿಸುತ್ತಿದ್ದೇನೆ ಎಂದು ಯಡಿಯೂರಪ್ಪ ಹೇಳುತ್ತಾರೆ. ಆ ಸ್ಥಿತಿ ನಮಗೆ ಬಂದಿಲ್ಲ ಎಂದ ಕುಮಾರಸ್ವಾಮಿ, “ನಾನು ಮಾಧ್ಯಮಗಳಿಂದ ಬದುಕಿಲ್ಲ. ನಾನು ಮಾಧ್ಯಮಗಳನ್ನು  ಹತ್ತಿರಕ್ಕೆ ತೆಗೆದುಕೊಂಡಿದ್ದಷ್ಟು ಯಾವ ರಾಜಕಾರಣಿಯೂ ತೆಗೆದುಕೊಂಡಿರಲಿಲ್ಲ. ಅಂತಹದರಲ್ಲಿ ನಮ್ಮ ಬಗ್ಗೆ ವಿದ್ಯುನ್ಮಾನ ಮಾಧ್ಯಮಗಳು ಇಲ್ಲಸಲ್ಲದನ್ನು ತೋರಿಸಿ ಅಪಪ್ರಚಾರ ಮಾಡುತ್ತಿವೆ. ನಾನು ಮಾಧ್ಯಮಗಳಿಂದ ಬದುಕಿಲ್ಲ. ಈ ರಾಜ್ಯದ ಆರೂವರೆ ಕೋಟಿ ಜನರಿಂದ ಬದುಕಿದ್ದೇನೆ” ಎಂದರು.

ಇಂದು ಮಾಧ್ಯಮಗಳ ಮೇಲೆ ಗೌರವವಿದೆ ಎಂದರೆ ಅದು ಮುದ್ರಣ ಮಾಧ್ಯಮಗಳಿಂದ. ಅವು ಪತ್ರಿಕೋದ್ಯಮದ ಮೌಲ್ಯ ಬದ್ಧತೆಗಳನ್ನು ಉಳಿಸಿಕೋಂಡಿವೆ. ಆದರೆ ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಟಿ.ಆರ್.ಪಿ. ಹೆಚ್ಚಿಸಿಕೊಳ್ಳಲು ರಾಜಕಾರಣಿಗಳನ್ನು ಬಳಸಿಕೊಳ್ಳುತ್ತಿವೆ ಎಂದು ಕಿಡಿಕಾರಿದರು.

ನಿಮ್ಮ ಜೀವನ ನಡೆಸಲು ನಮ್ಮನ್ನೇಕೆ ತೋರಿಸುತ್ತೀರಿ. ನಿಮ್ಮ ಕೈಯಲ್ಲಿ ಆಗಲಿಲ್ಲ ಎಂದರೆ ಮುಚ್ಚಿಬಿಡಿ. ಅದು ಬಿಟ್ಟು ಇಲ್ಲದನ್ನು ತೋರಿಸಿ ರಾಜ್ಯವನ್ನೇಕೆ ಹಾಳು ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಕಳೆದ ಮೂರು ತಿಂಗಳಿಂದ ನೀವು ತೋರಿಸುತ್ತಿರುವ ಬ್ರೇಕಿಂಗ್ ನ್ಯೂಸ್ ಗಳನ್ನು ನೋಡಿ ಹೇಸಿಗೆಯಾಗುತ್ತಿದೆ. ಅದನ್ನು ನೆನೆಸಿಕೊಂಡರೆ ರಾತ್ರಿ ಹೊತ್ತು ನಿದ್ರೆ ಬರುವುದಿಲ್ಲ, ದಿನ ನಿತ್ಯ ಅದೇನೊ ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಎಪಿಸೋಡ್ ಗಳೇ. ಸರ್ಕಾರ ಬಿದ್ದೋಗಲಿದೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ ಎಂಬ ಎಪಿಸೋಡ್ ಗಳನ್ನು ದಿನನಿತ್ಯ ತೋರಿಸಲಾಗುತ್ತಿದೆ. ಇದರಿಂದ ರಾಜ್ಯದ ಜನರಿಗೆ ಏನು ಲಾಭ?, ಜನರಿಗೆ ಅನುಕೂಲವಾಗುವಂತಹ ಬೇಕಾದಷ್ಟು ವಿಷಯಗಳಿವೆ ಅದನ್ನು ತೋರಿಸಿ ಎಂದು ಹೇಳಿದರು.

ನನ್ನ ಮಗನನ್ನು ರಾಜಕೀಯಕ್ಕೆ ತರಬೇಕೆಂಬ ಆಸೆ ಇರಲಿಲ್ಲ, ನಮ್ಮ ಪಕ್ಷವನ್ನು ಉಳಿಸಬೇಕಿದ್ದರಿಂದ ಮತ್ತು ಮಂಡ್ಯದ ಜನರ ಮುಖಂಡರ ಒತ್ತಾಯಕ್ಕೆ ಮಣಿದು ರಾಜಕೀಯಕ್ಕೆ ತರಬೇಕಾಯಿತು. ಇದನ್ನು ಅರಿಯದ ಮಾಧ್ಯಮಗಳು ತಮ್ಮ ಊಹೆಗೆ ತಕ್ಕಂತೆ ತೋರಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಧ್ಯಮಗಳ ನಿಯಂತ್ರಣಕ್ಕೆ ಕಾನೂನು

 ನಿಮಗೆ ಇಷ್ಟ ಬಂದಹಾಗೆ ತೋರಿಸಲು ರಾಜಕಾರಣಿಗಳೇನು ಬಿಟ್ಟಿಬಿದ್ದಿಲ್ಲ. ಅವರ ವೈಯಕ್ತಿಕ ಬದುಕು ಸೇರಿದಂತೆ ಅನೇಕ ವಿಚಾರಗಳನ್ನು ತೋರಿಸಿ ಅವಮಾನಮಾಡುತ್ತಿದ್ದೀರಿ. ಹಾಗಾಗಿ ಮಾಧ್ಯಮಗಳ ನಿಯಂತ್ರಣಕ್ಕೆ ಕಾನೂನು ತರಲು ಮುಂದಾಗಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News