ಉಪ ಚುನಾವಣೆ: ಇವಿಎಂ ಸೇರಿದ ಅಭ್ಯರ್ಥಿಗಳ ಭವಿಷ್ಯ- ಮೇ 23ರ ಫಲಿತಾಂಶದತ್ತ ಎಲ್ಲರ ಚಿತ್ತ

Update: 2019-05-19 14:32 GMT

ಬೆಂಗಳೂರು, ಮೇ 19: ತೀವ್ರ ಪ್ರತಿಷ್ಠೆ-ಕುತೂಹಲ ಸೃಷ್ಟಿಸಿರುವ ಚಿಂಚೋಳಿ ಹಾಗೂ ಕುಂದುಗೋಳ ಕ್ಷೇತ್ರಗಳಿಗೆ ಇಂದು ನಡೆದ ಉಪಚುನಾವಣೆ ಕೆಲ ಸಣ್ಣ-ಪುಟ್ಟ ಗೊಂದಲಗಳನ್ನು ಹೊರತುಪಡಿಸಿದರೆ ಶಾಂತಿಯುತ ಅಂತ್ಯಕಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿದೆ.

ರವಿವಾರ ಬೆಳಗ್ಗೆ 7ಗಂಟೆಯಿಂದಲೇ ಎರಡೂ ಕ್ಷೇತ್ರಗಳಲ್ಲಿಯೂ ಬಿರುಸಿನಿಂದಲೇ ಆರಂಭವಾದ ಮತದಾನ ಸಂಜೆಯ ವೇಳೆಗೆ ಮತ್ತಷ್ಟು ವೇಗ ಪಡೆದುಕೊಂಡಿತು. ಚಿಂಚೋಳಿ ಕ್ಷೇತ್ರದಲ್ಲಿ ಶೇ. 70.30 ಹಾಗೂ ಕುಂದಗೋಳ ಕ್ಷೇತ್ರದಲ್ಲಿ ಶೇ.81.33 ರಷ್ಟು ಮತದಾನವಾಗಿದೆ. ಯುವ ಮತದಾರರು ಸೇರಿದಂತೆ ಮಹಿಳೆಯರು, ವೃದ್ಧರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು.

ಚಿಂಚೋಳಿ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸುಭಾಷ್ ರಾಥೋಡ್, ಬಿಜೆಪಿಯ ಅವಿನಾಶ್ ಜಾಧವ್ ಸೇರಿ 17ಮಂದಿ ಅಭ್ಯರ್ಥಿಗಳಿದ್ದಾರೆ. ಅತ್ತ ಕುಂದುಗೋಳ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಹಾಗೂ ಬಿಜೆಪಿಯ ಚಿಕ್ಕನಗೌಡರ ಸೇರಿ 8 ಮಂದಿ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಬರೆದಿದ್ದಾನೆ.

ಹಕ್ಕು ಚಲಾಯಿಸಿದ ಅಭ್ಯರ್ಥಿಗಳು: ಚಿಂಚೋಳಿ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸುಭಾಷ್ ರಾಥೋಡ್ ಬಡಿಶೇರಿ ತಾಂಡಾದಲ್ಲಿ ಹಕ್ಕು ಚಲಾಯಿಸಿದರೆ, ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಕುಟುಂಬದ ಸದಸ್ಯರೊಂದಿಗೆ ಕ್ಷೇತ್ರದ ಬೆಡಸೂರ ಗ್ರಾಮದ ಮತಗಟ್ಟೆ ಸಂಖ್ಯೆ-79ರಲ್ಲಿ ಮತ ಚಲಾವಣೆ ಮಾಡಿದರು.

ಮತ್ತೊಂದೆಡೆ ಕುಂದುಗೋಳ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪತ್ನಿ ಸಮಾಧಿಗೆ ಕುಟುಂಬದ ಸದಸ್ಯರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಯರಗುಪ್ಪಿ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಚಿಕ್ಕಗೌಡರ ಅವರು ಅದರಗುಂಚಿ ಗ್ರಾಮದ ಸರಕಾರಿ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಓಟು ಹಾಕಿದರು.

ಹಕ್ಕು ಚಲಾಯಿಸಿದ ಶತಾಯುಷಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಕಾಳಗಿ ಮತಗಟ್ಟೆಯಲ್ಲಿ 105 ವರ್ಷದ ಶತಾಯುಷಿ ಬಸಮ್ಮ ಅವರು ಮತದಾನ ಮಾಡಿದರು. ಸಂಬಂಧಿಕರ ನೆರವಿನೊಂದಿಗೆ ವ್ಹೀಲ್‌ಚೇರ್‌ನಲ್ಲಿ ಆಗಮಿಸಿದ ಅವರು ತಮ್ಮ ಹಕ್ಕು ಚಲಾವಣೆ ಮಾಡಿ ಗೆಲುವಿನ ನಗೆ ಬೀರಿದರು.

ಗೊಂದಲ: ಉಭಯ ಕ್ಷೇತ್ರಗಳಲ್ಲಿನ ವಿವಿಧ ಮತಗಟ್ಟೆಗಳಲ್ಲಿ ಇವಿಎಂ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಕೆಲಕಾಲ ಮತದಾನಕ್ಕೆ ಕೊಂಚ ವಿಳಂಬವಾಗಿತ್ತು. ಕೂಡಲೇ ದೋಷ ಸರಿಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿತು. ಕೆಲವು ಕಡೆಗಳಲ್ಲಿ ಮತದಾರರಿಗೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ಆಮಿಷವೊಡ್ಡುತ್ತಿದ್ದಾರೆಂಬ ಆರೋಪವೂ ಕೇಳಿಬಂತು.

ಚಿಂಚೋಳಿ ಕ್ಷೇತ್ರದಲ್ಲಿ 1.93 ಲಕ್ಷಕ್ಕೂ ಅಧಿಕ ಮಂದಿ ಮತದಾರರಿದ್ದು, ಒಟ್ಟು 241 ಮತಗಟ್ಟೆ ಸ್ಥಾಪಿಸಲಾಗಿತ್ತು. ಅತ್ತ ಕುಂದುಗೋಳ ಕ್ಷೇತ್ರದಲ್ಲಿ 1.89 ಲಕ್ಷಕ್ಕೂ ಅಧಿಕ ಮಂದಿ ಮತದಾರರಿದ್ದು, 214 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಹಾಗೂ ವಿಪಕ್ಷ ಬಿಜೆಪಿಯ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ಉಪ ಚುನಾವಣೆ ಫಲಿತಾಂಶ ಸರಕಾರದ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಫಲಿತಾಂಶದತ್ತ ಚಿತ್ತ: ಲೋಕಸಭೆ ಚುನಾವಣೆ ಮತ ಎಣಿಕೆಯ ದಿನವೇ ಉಪ ಚುನಾವಣೆ ಮತ ಎಣಿಕೆ ಕಾರ್ಯವೂ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ. ಅಭ್ಯರ್ಥಿಗಳಲ್ಲಿ ಎದೆ ನಡುಕವನ್ನಂತೂ ಸೃಷ್ಟಿಸಿದ್ದು, ಎಲ್ಲರ ಚಿತ್ತ ಮೇ 23ರ ಫಲಿತಾಂಶದತ್ತ ನೆಟ್ಟಿದೆ.

ಪ್ರತಿಭಟನೆ: ಚಿಂಚೋಳಿ ಕ್ಷೇತ್ರದ ಖಾನಾಪುರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಹಣ ಹಂಚಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ಉಮೇಶ್ ಜಾಧವ್, ಪೊಲೀಸ್ ವಾಹನವನ್ನು ಅಡ್ಡಗಟ್ಟಿ ಧರಣಿ ಸತ್ಯಾಗ್ರಹ ನಡೆಸಿದರು. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಾಧವ್ ಆಗ್ರಹಿಸಿದರು.

‘ಹಣ ಹಂಚಿಕೆ ಆರೋಪದ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕೆ ಧಾವಿಸಿ ಖುದ್ದು ಪರಿಶೀಲನೆ ನಡೆಸಿದ್ದೇನೆ. ಈ ಸಂಬಂಧ ಸಮಗ್ರ ತನಿಖೆ ನಡೆಸಲಾಗುವುದು. ಪೊಲೀಸರು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದು, ಯಾರ ಕೈಗೊಂಬೆಯಂತೆ ನಾವು ವರ್ತಿಸುವುದಿಲ್ಲ’

-ಯಡಾ ಮಾರ್ಟಿನ್, ಕಲಬುರಗಿ ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News