ರಾಜ್ಯ' ಕೈ' ನಾಯಕರೊಂದಿಗೆ ರಾಹುಲ್‌ ಚರ್ಚೆ: ಮೈತ್ರಿ ಸರಕಾರಕ್ಕೆ ಧಕ್ಕೆಯಾಗುವ ಹೇಳಿಕೆ ನೀಡದಂತೆ ಕಟ್ಟುನಿಟ್ಟಿನ ಸೂಚನೆ

Update: 2019-05-19 14:37 GMT

ಬೆಂಗಳೂರು, ಮೇ 19: ಮೈತ್ರಿ ಸರಕಾರಕ್ಕೆ ಧಕ್ಕೆ ಬರುವಂತಹ ಯಾವುದೆ ರೀತಿಯ ಹೇಳಿಕೆಗಳನ್ನು ಕಾಂಗ್ರೆಸ್ ನಾಯಕರು ನೀಡದಂತೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರವಿವಾರ ಹೊಸದಿಲ್ಲಿಯಲ್ಲಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್, ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ರವರು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯನ್ನು ಭೇಟಿ ಮಾಡಿ, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಮೈತ್ರಿ ಸರಕಾರಕ್ಕೆ ಸಮಸ್ಯೆ ಮಾಡುವ ಉದ್ದೇಶದಿಂದಲೇ ಮಾತನಾಡುವ ಕೆಲ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಿಡಾಯಿಸಿದೆ. ಹೀಗಾಗಿ ಇನ್ನು ಮುಂದೆ ಇಂತಹ ನಾಯಕರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ರಾಹುಲ್‌ಗಾಂಧಿ ಕೆಪಿಸಿಸಿ ದಿನೇಶ್‌ಗುಂಡೂರಾವ್‌ಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಮೈತ್ರಿ ಸರಕಾರವನ್ನು ಮಾಡಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ನ ಎಲ್ಲ ನಾಯಕರಿಗೂ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನತೆಗೆ ಒಳ್ಳೆಯ ಸರಕಾರವನ್ನು ನೀಡಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಇದರ ನಡುವೆ ಕೆಲ ನಾಯಕರು ಮೈತ್ರಿ ಸರಕಾರದ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಾದ ನಡುವಳಿಕೆಯಲ್ಲವೆಂದು ರಾಹುಲ್‌ ಗಾಂಧಿ ರಾಜ್ಯ ನಾಯಕರ ಮುಂದೆ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ಮಾತನಾಡಿ, ಮೈತ್ರಿ ಸರಕಾರ ಮುಂದುವರೆಯುವ ನಿಟ್ಟಿನಲ್ಲಿ ಜೆಡಿಎಸ್ ನಾಯಕರೊಂದಿಗೆ ಸಮನ್ವಯದಿಂದ ಇರುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ. ಇದಕ್ಕೆ ಎಲ್ಲರೂ ಬದ್ದರಾಗಿ ನಡೆದುಕೊಳ್ಳುವುದು ನಮ್ಮ ಜವಾಬ್ದಾರಿಯೆಂದು ತಿಳಿಸಿದರು.

ಮೈತ್ರಿಯ ಕುರಿತು ಕಾಂಗ್ರೆಸ್ ಮುಖಂಡರು ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದನ್ನು ಸಹಿಸಲು ಸಾಧ್ಯವಿಲ್ಲವೆಂದು ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ನೀಡಿದೆ. ಹೀಗಾಗಿ ಮೈತ್ರಿ ಸರಕಾರಕ್ಕೆ ಮುಂದಿನ ನಾಲ್ಕು ವರ್ಷಗಳ ಕಾಲ ಯಾವುದೆ ಸಮಸ್ಯೆಯಾಗದು. ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಹೋಗಲಿದೆ. ಸಮಸ್ಯೆಗಳು ತಲೆದೂರಿದರೆ ಅಲ್ಲಿಯೆ ಪರಸ್ಪರ ಮಾತುಕತೆಯ ಮೂಲಕ ಬಗೆ ಹರಿಸಿಕೊಂಡು ಹೋಗಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News