ಗೋಡ್ಸೆ ಸಮರ್ಥನೆಯ ಹಿಂದೆ ಮೋದಿ ಕೈವಾಡ: ಪ್ರೊ.ಜಿ.ಕೆ.ಗೋವಿಂದ ರಾವ್ ಆರೋಪ

Update: 2019-05-19 15:27 GMT

ಬೆಂಗಳೂರು, ಮೇ.19: ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಣಕ್ಯ ಬುದ್ಧಿ ತೋರಿಸುವ ಮೂಲಕ ಸಂವಿಧಾನದ ವಿರುದ್ಧ ಮಾತನಾಡಲು ತನ್ನ ಪಕ್ಷದ ಸಂಸದರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದ ರಾವ್ ಇಂದಿಲ್ಲಿ ಆರೋಪ ಮಾಡಿದ್ದಾರೆ.

ರವಿವಾರ ಹಂಪಿನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ವಿಜಯನಗರ ಮತ್ತು ಗೋವಿಂದರಾಜನಗರ ನಿವಾಸಿಗಳ ವಿಶ್ವ ಮಾನವ ವೇದಿಕೆ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ 128ನೆ ಜಯಂತಿಯಲ್ಲಿ ಮಾತನಾಡಿದ ಅವರು, ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಸಮರ್ಥಿಸಿಕೊಳ್ಳುತ್ತಿರುವವರು ದೇಶದಲ್ಲಿ ದಿನೇದಿನೇ ಅಧಿಕವಾಗುತ್ತಿದ್ದು, ಇದೆಲ್ಲದರ ಹಿಂದೆ ಮೋದಿಯ ಕೈವಾಡವಿದೆ ಎಂದು ದೂರಿದರು.

ಅಂಬೇಡ್ಕರ್‌ಗೆ ಸಂವಿಧಾನ ರಚಿಸಲು ಅವಕಾಶ ದೊರೆತಿದ್ದು ದೇಶದ ಪುಣ್ಯ. ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯ ವರ್ಗಕ್ಕೆ ಎಲ್ಲ ಅವಕಾಶಗಳು ಸಿಗುತ್ತಿದ್ದ ಸಮಯದಲ್ಲಿ ದಲಿತರಿಗೂ ಅವಕಾಶ ಸಿಗುವಂತೆ ಅಂಬೇಡ್ಕರ್ ಮಾಡಿದ್ದಾರೆ. ಅಲ್ಲದೆ, ಅವರು ರಚಿಸಿದ ಸಂವಿಧಾನ ಜಗತ್ತಿನಲೇ ಸರ್ವ ಶ್ರೇಷ್ಠವಾದುದು ಎಂದು ಜಗತ್ತಿನ ಪ್ರಖ್ಯಾತ ಚಿಂತಕರೆಲ್ಲ ಹೇಳಿದ್ದಾರೆ ಎಂದರು.

ನಮ್ಮ ಅದೃಷ್ಠಕ್ಕೆ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದು ಓಳ್ಳೆದಾಗಿದೆ. ಒಂದು ವೇಳೆ ಆ ಕಾಲದ ಮನುವಾದಿಗಳು ಸಂವಿಧಾನ ರಚನೆ ಮಾಡಿದ್ದರೆ ಏನು ಮಾಡಬೇಕಿತ್ತು. ಅಲ್ಲದೆ, ಆ ಸಮಯದಲ್ಲಿ ಮನು ತರಹ ಯೋಚನೆ ಮಾಡುವವರು ಕಡಿಮೆ ಇರಲಿಲ್ಲ. ಇಂತಹ ಸಮಯದಲ್ಲೂ ಸಂವಿಧಾನ ರಚನೆ ಹಿಂದೆ ಪ್ರೇರಕ ಶಕ್ತಿಗಳಿದ್ದವು. ಹಾಗಾಗಿಯೇ ಅಂಬೇಡ್ಕರ್ ಚಿಂತನೆಗಳಿಗೆ ವಿವಿಧ ಆಯಾಮಗಳು ದೊರೆತವು ಎಂದು ತಿಳಿಸಿದರು.

ಪ್ರಜಾತಂತ್ರ ಎಂದರೆ ನನ್ನನ್ನೂ ಮೀರಿದ ಶಕ್ತಿಯಿದೆ. ಆ ಶಕ್ತಿಯೇ ಜನರ ಸೇವೆ ಎಂದು ಜನನಾಯಕರು ತಿಳಿಯಬೇಕು. ಅಲ್ಲದೆ, ಪೇಜಾವರ ಸ್ವಾಮಿ ಅತ್ಯಂತ ನೀಚ ಮನುಷ್ಯನಾಗಿದ್ದು, ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಣುಬಾಂಬ್ ಪ್ರಯೋಗ ಮಾಡಿದಾಗ, ಅದನ್ನು ಅರ್ಜುನ ಪಾಶುಪತಾಸ್ತ್ರ ತಂದ ರೀತಿಯಲ್ಲಿ ನೀನೂ ತಂದಿದ್ದೀಯಾ ಎಂದು ಹೇಳಿದರು ಎಂದು ನೆನೆದರು.

ದಲಿತ ಕವಿ ಡಾ.ಸಿದ್ದಲಿಂಗಯ್ಯ ಮಾತನಾಡಿ, ಅಂಬೇಡ್ಕರ್ ಜಯಂತಿಯನ್ನು ರಾಜ್ಯ, ದೇಶವಲ್ಲದೇ ಇಡೀ ಜಗತ್ತೆ ಆಚರಿಸುತ್ತಿದೆ. ವಿದೇಶಗಳಲ್ಲಿ ಅಂಬೇಡ್ಕರ್ ಜೀವನ ಸಾಧನೆ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಪರಿನಿರ್ವಾಣದ ನಂತರವಂತೂ ಅವರ ಕೀರ್ತಿ ಅಧಿಕವಾಗುತ್ತಿದೆ. ಅಲ್ಲದೆ, ಸಮಾಜಕ್ಕೆ ಓಳ್ಳಿತು ಮಾಡುವವರಿಗೆಲ್ಲ ಅಂಬೇಡ್ಕರ್ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.

ಮಾಧ್ಯಮದ ಸಮೀಕ್ಷೆ: ಮಹಾತ್ಮ ಗಾಂಧಿ ನಂತರದ ಶ್ರೇಷ್ಠ ವ್ಯಕ್ತಿ ಯಾರು ಎಂಬುದನ್ನು ದೃಶ್ಯ ಮಾಧ್ಯಮವೊಂದು ಸಮೀಕ್ಷೆ ಮಾಡಿದಾಗ, ಜವಾಹರಲಾಲ್ ನೆಹರೂಗೆ 8 ಸಾವಿರ, ಇಂದಿರಾ ಗಾಂಧಿಗೆ 19 ಸಾವಿರ ಹಾಗೂ ಡಾ.ಅಂಬೇಡ್ಕರ್‌ಗೆ 19 ಲಕ್ಷ ಮತದಾನ ಬಂದಿರುತ್ತದೆ. ಇದರಿಂದಲೇ ತಿಳಿಯುತ್ತದೆ ಅವರು ಒಂದು ಸಮುದಾಯದ ನಾಯಕನಲ್ಲ. ಎಲ್ಲ ವರ್ಗಗಳ ನಾಯಕ ಎಂದು ಅವರು ತಿಳಿಸಿದರು.

ದಲಿತರು ಬಿಜೆಪಿಗೆ ಬೆಂಬಲ ನೀಡುವುದು ದೇಶದ ದೊಡ್ಡ ದುರಂತವಾಗಿದ್ದು, ಮೋದಿ ಕೆಳ ಸಮುದಾಯದ ಪ್ರತಿನಿಧಿಯಲ್ಲ ಎಂಬುದನ್ನು ಯೋಚಿಸುವ ಅಗತ್ಯವಿದೆ.

- ಪ್ರೊ.ಜಿ.ಕೆ.ಗೋವಿಂದ ರಾವ್, ವಿಚಾರವಾದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News