ಬನಶಂಕರಿಯ ರಸ್ತೆಗೆ ಮಾಸ್ಟರ್ ಹಿರಣ್ಣಯ್ಯ ಹೆಸರು: ಆರ್.ಅಶೋಕ್

Update: 2019-05-19 15:39 GMT

ಬೆಂಗಳೂರು, ಮೇ 19: ಬನಶಂಕರಿಯ ಎರಡನೆ ಹಂತದ 24ನೆ ಅಡ್ಡರಸ್ತೆಗೆ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಹೆಸರನ್ನು ಇಡಲಾಗುವುದು ಎಂದು ಶಾಸಕ ಆರ್.ಅಶೋಕ್ ತಿಳಿಸಿದ್ದಾರೆ.

ರವಿವಾರ ಮಾಸ್ಟರ್ ಹಿರಣ್ಣಯ್ಯ ಅಭಿಮಾನಿಗಳ ಬಳಗ ನಗರದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ತಲೆಮಾರಿಗೂ ಮಾಸ್ಟರ್ ಹಿರಣ್ಣಯ್ಯರ ನೆನಪನ್ನು ಜೀವಂತವಾಗಿಡುವ ಸದುದ್ದೇಶದಿಂದ ಬನಶಂಕರಿಯ ರಸ್ತೆವೊಂದಕ್ಕೆ ಅವರ ಹೆಸರನ್ನು ಇಡಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಕಾರ್ಯಯೋಜನೆಗಳನ್ನು ಶೀಘ್ರವೆ ಪೂರ್ಣಗೊಳಿಸಲಾಗುವುದು ಎಂದರು.

ಹಿರಿಯ ಸಾಹಿತಿ ಅ.ರಾ.ಮಿತ್ರ ಮಾತನಾಡಿ, ಮಾಸ್ಟರ್ ಹಿರಣ್ಣಯ್ಯ ಕನ್ನಡ ರಂಗಭೂಮಿಗೆ ಅಪಾರವಾದ ಕೊಡುಗೆಯನ್ನು ನೀಡಿ ಹೋಗಿದ್ದಾರೆ. ಅವರು ಕೇವಲ ವ್ಯಕ್ತಿಮಾತ್ರ ಆಗಿರಲಿಲ್ಲ. ರಂಗಭೂಮಿ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯದಂತೆ ಕಾರ್ಯನಿರ್ವಹಿಸಿದವರು ಎಂದು ಸ್ಮರಿಸಿದರು.

ಕವಿ ಎಚ್.ಎಸ್.ವೆಂಕಟೇಶ ಮೂರ್ತಿ, ನಿರ್ದೇಶಕ ಬಿ.ವಿ.ರಾಜಾರಾಮ್, ವೈ.ವಿ.ಗುಂಡೂರಾವ್ ನುಡಿನಮನ ಸಲ್ಲಿಸಿದರು. ಈ ವೇಳೆ ಮಾಸ್ಟರ್ ಹಿರಣ್ಣಯ್ಯ ಕುಟುಂಬಸ್ಥರು ಪೊಲೀಸ್ ಕಲ್ಯಾಣ ನಿಧಿಗೆ ಒಂದು ಲಕ್ಷ ರೂ. ದೇಣಿಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News