ಮತ್ತೆ ಕಲ್ಯಾಣ ಚಳವಳಿಗೆ ಸಾಹಿತಿಗಳು, ಪ್ರಗತಿಪರ ಸಂಘಟನೆಗಳಿಂದ ಒಕ್ಕೊರಲ ಬೆಂಬಲ

Update: 2019-05-19 15:43 GMT

ಬೆಂಗಳೂರು, ಮೇ 19: ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ಅನುಭವ ಮಂಟಪದ ಮೂಲಕ ಕಟ್ಟಿದ ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮತ್ತೆ ಕಲ್ಯಾಣ ಎಂಬ ಚಳವಳಿಗೆ ಹಿರಿಯ ಸಾಹಿತಿಗಳು, ಪ್ರಗತಿಪರ ಸಂಘಟನೆಗಳ ನಾಯಕರು ಒಕ್ಕೊರಲಿನಿಂದ ಬೆಂಬಲ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಬಸವ ಸಮಿತಿ ಸಭಾಂಗಣದಲ್ಲಿ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಮತ್ತೆ ಕಲ್ಯಾಣ ಚಳವಳಿಯ ರೂಪರೇಷೆಗಳ ಕುರಿತು ಆಯೋಜಿಸಿದ್ದ ಚಿಂತಕರು ಮತ್ತು ಸಂಘಟಕರ ರಾಜ್ಯ ಮಟ್ಟದ ಸಭೆಯಲ್ಲಿ, ವೈದಿಕಶಾಯಿ ಮೌಢ್ಯತೆಗಳಿಂದ ದಿಕ್ಕುತಪ್ಪುತ್ತಿರುವ ಯುವಜನತೆ ಸರಿಯಾದ ಮಾರ್ಗದೆಡೆಗೆ ಸಾಗಲು ವಚನಕಾರರ ಚಿಂತನೆಗಳು ದಾರಿ ದೀಪವಾಗಲಿವೆ. ಹೀಗಾಗಿ ಮತ್ತೆ ಕಲ್ಯಾಣ ಚಳವಳಿ ಅಗತ್ಯವಾಗಿ ಆಗಬೇಕಾದ ಕಾರ್ಯವಾಗಿದೆ ಎಂದು ಚಿಂತಕರು, ಸಾಹಿತಿಗಳು, ಪ್ರಗತಿಪರ ಸಂಘಟನೆಗಳ ಮುಖಂಡರು ಅಭಿಪ್ರಾಯಿಸಿದರು.

ಸಭೆಯಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್, ಹಿರಿಯ ಪತ್ರಕರ್ತರಾದ ಇಂದೂಧರ ಹೊನ್ನಾಪುರ, ವಿಜಯಮ್ಮ, ಲೀಲಾಸಂಪಿಗೆ, ರಂಜಾನ್‌ ದರ್ಗಾ ಸೇರಿದಂತೆ ಹಲವು ಮುಖಂಡರು, ಮತ್ತೆ ಕಲ್ಯಾಣ ಚಳವಳಿ ಸಾಗಬೇಕಾದ ಚಿಂತನೆಯ ಮಾರ್ಗಗಳ ಕುರಿತು ಚರ್ಚೆ ನಡೆಸಿದರು.

ಮೂಲಭೂತ ಶಕ್ತಿಗಳು ನಮ್ಮ ವಿದ್ಯಾರ್ಥಿ ಹಾಗೂ ಯುವಜನತೆಯ ಕೈಯಲ್ಲಿಯೆ ವಿಕೃತ ಕೆಲಸಗಳನ್ನು ಮಾಡಿಸುವ ಮೂಲಕ ಹಟ್ಟಹಾಸ ಮೆರೆಯುತ್ತಿವೆ. ತಮ್ಮ ಸ್ವಾರ್ಥ ಸಾಧನೆಗಾಗಿ ಅಮಾಯಕ ಯುವ ಜನತೆ ಬಲಿಪಶು ಆಗುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳೊಂದಿಗೆ ಮಾನವೀಯತೆ, ವೈಚಾರಿಕತೆಯ, ಸಮಾನತೆಯ ವಿಷಯಗಳು ಕುರಿತು ಸಂವಾದ ನಡೆಸಿ ಅವರನ್ನು ಸಮಾಜಪರ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಏಕೈಕ ಉದ್ದೇಶದಿಂದ ಮತ್ತೆ ಕಲ್ಯಾಣವೆಂದು ವಿನೂತವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ ಸ್ಪಷ್ಟ ಪಡಿಸಿದರು.

ಸಂಸದ ಡಾ.ಎಲ್.ಹನುಮಂತಯ್ಯ ಮಾತನಾಡಿ, ಕಳೆದ 40ವರ್ಷಗಳಿಂದ ಇಂತಹ ಅನೇಕ ಸಭೆಗಳನ್ನು ನಡೆಸಿದ್ದೇವೆ. ಇದರಲ್ಲಿ ಒಂದೇ ತರಹದ ಮಾತುಗಳು ಕೇಳುತ್ತಿದ್ದೇವೆ. ಇದರಿಂದ ಪರಿಣಾಮಕಾರಿ ಬದಲಾವಣೆ ಸಾಧ್ಯವಾಗಿಲ್ಲ. ಹೀಗಾಗಿ ಹೊಸ ತಲೆಮಾರಿಗೆ ಚಳವಳಿಯ ನೇತೃತ್ವವನ್ನು ನೀಡುವ ಮೂಲಕ ಭಿನ್ನ ಮಾರ್ಗಗಳತ್ತ ಸಾಗಬೇಕಿದೆ. ಸಿದ್ಧಾಂತಗಳ ಮಡಿವಂತಿಕೆಯನ್ನು ಬಿಟ್ಟು ಎಲ್ಲರನ್ನು ಮುಕ್ತವಾಗಿ ತೆಗೆದುಕೊಳ್ಳುತ್ತಾ ಮುಂದುವರೆಯಬೇಕಾಗಿದೆ. ನಮ್ಮ ದಾರಿಯನ್ನು ಮೆಚ್ಚಿ ಆರೆಸ್ಸೆಸ್ ಕಾರ್ಯಕರ್ತರು ಬಂದರು ಅವರನ್ನು ಜೊತೆಯಾಗಿಸಿ ಮುನ್ನಡೆಯಬೇಕಾಗಿದೆ ಎಂದು ತಿಳಿಸಿದರು.

ಈ ವೇಳೆ ಮಾಜಿ ಶಾಸಕ ವೈ.ಎಸ್.ವಿ.ದತ್ತ, ಮಾಜಿ ಸಚಿವೆ ಲಲಿತಾ ನಾಯಕ್, ಬಿ.ಎಲ್.ಶಂಕರ್, ಪತ್ರಕರ್ತ ಅಗ್ನಿ ಶ್ರೀಧರ್, ಕರ್ನಾಟಕ ಜನಶಕ್ತಿ ಮಲ್ಲಿಗೆ, ಪತ್ರಕರ್ತ ನರಸಿಂಹಮೂರ್ತಿ ದೊಡ್ಡಿಪಾಳ್ಯ, ಡಾ.ವಾಸು, ಅಲಿಬಾಬಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಆಗಸ್ಟ್ 1ರಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮವು ಪ್ರಾರಂಭವಾಗಲಿದೆ. ಪ್ರತಿದಿನ ಪ್ರತಿ ಜಿಲ್ಲೆ, ತಾಲೂಕಿನ ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಗುತ್ತದೆ. ಸಂಜೆ ವೇಳೆಗೆ ಬಹಿರಂಗ ಕಾರ್ಯಕ್ರಮ ಆಯೋಜಿಸಿ ಚಿಂತಕರಿಂದ ವಿಶೇಷ ಉಪನ್ಯಾಸ ಮಾಡಿಸಲಾಗುವುದು. ಹಾಗೂ ಶರಣರ ಆಶಯಗಳನೊಳಗೊಂಡ ನಾಟಕ ಇರುತ್ತದೆ. ಆ.29ರಂದು ಶರಣರ ಕಾರ್ಯಕ್ಷೇತ್ರ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮುಕ್ತಾಯಗೊಳ್ಳಲಿದೆ. ಈ ಯಾತ್ರೆಯಲ್ಲಿ ವೇಳೆ ಕೆಲವು ಆಸಕ್ತಿ ವಿದ್ಯಾರ್ಥಿಗಳನ್ನು ಗುರುತಿಸಿ ಸಾಣೇಹಳ್ಳಿ ಮಠದಲ್ಲಿ ತರಬೇತಿ ನೀಡಲಾಗುತ್ತದೆ.

-ಪಂಡಿತಾರಾಧ್ಯ ಸ್ವಾಮೀಜಿ, ಸಾಣೇಹಳ್ಳಿ ಮಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News