ಆಸಕ್ತ ವಿಷಯಗಳ ಬೆಳವಣಿಗೆಯನ್ನು ವಿದ್ಯಾರ್ಥಿಗಳು ಗಮನಿಸಬೇಕು:ಡಾ.ಖಿಂಚಾ

Update: 2019-05-19 15:47 GMT

ಬೆಂಗಳೂರು, ಮೇ 19: ವಿದ್ಯಾರ್ಥಿಗಳು ಪ್ರತಿನಿತ್ಯ ಎರಡು ಗಂಟೆಯನ್ನು ಓದಿಗೆ ಮೀಸಲಿಡಬೇಕು. ಅವರ ಆಸಕ್ತ ವಿಷಯಗಳಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಪ್ರತಿನಿತ್ಯವೂ ಗಮನಿಸುತ್ತಾ, ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ರಾಜ್ಯ ಆವಿಷ್ಕಾರ ಮಂಡಳಿಯ ಅಧ್ಯಕ್ಷ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ.ಖಿಂಚಾ ಕರೆ ನೀಡಿದರು.

ನಗರದ ಕೆ.ಆರ್.ಪುರದಲ್ಲಿರುವ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಆವಿಷ್ಕಾರದ ವಸ್ತು ಪ್ರದರ್ಶನ ಮೇಳ ‘ಇನ್‌ಟ್ಯೂಟ್-2019’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಪ್ರಪಂಚದಲ್ಲಿ ನ್ಯಾನೋ ಟೆಕ್ನಾಲಜಿ, ಬೃಹತ್ ಯೋಜನೆಗಳು, ಸಂಕೀರ್ಣತೆ, ಸಂವೇದನೆ ಮತ್ತು ಇವುಗಳ ಹೊಂದಾಣಿಕೆಯ ತಂತ್ರಜ್ಞಾನವಾಗಿದೆ ಎಂದು ಉದಾಹರಣೆಗಳ ಸಹಿತ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಅವರು ವಿವರಿಸಿದರು.

ಐಟಿಸಿ ಇನ್ಫೋಟೆಕ್‌ನ ಕ್ಯಾಪಬಿಲಿಟಿ ಬಿಲ್ಡಿಂಗ್ ಅಂಡ್ ನಾಲೇಜ್ ಮ್ಯಾನೇಜ್‌ಮೆಂಟ್ ಉಪಾಧ್ಯಕ್ಷ ಸಂಜಯ್ ಕುಮಾರ್ ಮಾತನಾಡಿ, ತಂತ್ರಜ್ಞಾನ ಇಂದು ಜನಸಾಮಾನ್ಯರ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ಇದರ ಮೂಲಕ ಜನಸಾಮಾನ್ಯರ ಜೀವನವನ್ನು ತಂತ್ರಜ್ಞಾನದ ಮೂಲಕ ಇನ್ನಷ್ಟು ಸುಗಮಗೊಳಿಸ ಬಹುದು ಎಂದರು.

ವಿದ್ಯಾರ್ಥಿಗಳು ಯಾವುದೇ ಕೆಲಸವಾದರೂ ಧೈರ್ಯದಿಂದ ಮಾಡಿ, ಏನನ್ನಾದರೂ ಸರಿ ದೊಡ್ಡದಾಗಿ ಮಾಡುವ ಕನಸು ಕಾಣಿ, ನಿಮ್ಮ ಕನಸನ್ನು ಸಾಕಾರಗೊಳಿಸಲು ಪ್ರಯತ್ನಿಸಿ, ನಿಮ್ಮ ಗುರಿಯನ್ನು ಎಂದಾದರೂ ಮುಟ್ಟಿಯೇ ಮುಟ್ಟುತ್ತೀರಿ ಎಂದು ಅವರು ಹೇಳಿದರು.

ಆಧ್ಯ ಏರೋಸ್ಪೇಸ್‌ನ ವ್ಯಾಪಾರ ಅಭಿವೃದ್ಧಿ ವಿಭಾಗದ ನಿರ್ದೇಶಕ ಅರುಣ್ ಸಾಲಿಗ್ರಾಮ ಮಾತನಾಡಿ, ವಿದ್ಯಾರ್ಥಿಗಳು ಇಂದಿನ ಔದ್ಯೋಗಿಕ ಉದ್ದೇಶಕ್ಕೆ ತಕ್ಕಂತೆ ಕಲಿಕೆಯನ್ನು ರೂಢಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಕೇಂಬ್ರಿಡ್ಜ್ ಸಮೂಹ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಡಿ.ಕೆ.ಮೋಹನ್, ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯವು ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯಗಳನ್ನು ಒದಗಿಸಿದ್ದು, ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.

ಈ ವಸ್ತು ಪ್ರದರ್ಶನವನ್ನು ಏರ್ಪಡಿಸಿರುವ ಉದ್ದೇಶವೇ ಅದಾಗಿದ್ದು, ಇಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಆಸಕ್ತ ವಿಷಯದಲ್ಲಿ ತನ್ನ ಬೌದ್ಧಿಕ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಇದೊಂದು ವೇದಿಕೆಯನ್ನು ಸಂಸ್ಥೆ ನೀಡಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ತಜ್ಞರ ಆಯ್ಕೆಯಂತೆ ಉತ್ತಮ ಆವಿಷ್ಕಾರ, ಉತ್ತಮ ವಿನ್ಯಾಸ ಮತ್ತು ಸಾಮಾಜಿಕ ಕಳಕಳಿಯುಳ್ಳ ಉತ್ತಮ ಪ್ರಾಜೆಕ್ಟ್ ಎಂದು ವಿಂಗಡಿಸಿ, ಆಯ್ಕೆಯಾದ ಸುಮಾರು 150 ಪ್ರಾಜೆಕ್ಟ್‌ಗಳಿಗೆ ಫಲಕದೊಂದಿಗೆ ನಗದು ಬಹುಮಾನವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಕೇಂಬ್ರಿಡ್ಜ್ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸುರೇಶ್ ಎಲ್., ನಿರ್ದೇಶಕ ಡಾ.ಡಿ.ಎಚ್.ರಾವ್, ವಿಭಾಗಗಳ ಮುಖಸ್ಥ ಡಾ.ಶಶಿಕುಮಾರ್, ಡಾ.ಇಂದುಮತಿ, ಡಾ.ಪದ್ಮನಾಭ, ಡಾ.ಶ್ರೀಧರ್, ಡಾ.ಸುನೀಲ್ ಕುಲಕರ್ಣಿ, ಡಾ.ಶಂಕರಯ್ಯ ಸಾಲಿಮಠ, ಡಾ.ಅರುಣಾದೇವಿ, ಡಾ.ಬಸಣ್ಣ ಪಟಗುಮಡಿ, ಡಾ.ಉಷಾರಾಣಿ ರಾಮನಾಥನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News