ಬ್ರಿಟಿಷರ ಒಡೆದು ಆಳುವ ನೀತಿಯಿಂದ ಇಂದಿಗೂ ದ್ವೇಷದ ಕಿಡಿ: ಡಾ.ಭೈರಮಂಗಲ ರಾಮೇಗೌಡ

Update: 2019-05-19 15:55 GMT

ಬೆಂಗಳೂರು, ಮೇ 19: ದೇಶದಲ್ಲಿ ಹಿಂದೂ ಮುಸ್ಲಿಂ ಸಾಮರಸ್ಯದ ಭಾವೈಕ್ಯತೆಗೆ ಬೆಂಕಿ ಇಟ್ಟ ಬ್ರಿಟೀಷರ ಒಡೆದು ಆಳುವ ನೀತಿಯಿಂದ ದೇಶ ಇಬ್ಬಾಗವಾಗಿ ಇಂದಿಗೂ ದ್ವೇಷದ ಕಿಡಿ ಆಗಿಂದಾಗ್ಗೆ ಭುಗಿಲೇಳುತ್ತಿದೆ ಎಂದು ಸಾಹಿತಿ ಡಾ.ಭೈರಮಂಗಲ ರಾಮೇಗೌಡ ವಿಷಾದ ವ್ಯಕ್ತಪಡಿಸಿದರು.

ರವಿವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಡಾ. ಸಿ. ನಂದಿನಿ ಅವರ ‘1947 ನೆನಪು - ಅಂದು - ಇಂದು’ ಹಾಗೂ ‘ಶ್ಯಾಮನಿಲ್ಲದ ಸಂಜೆ’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸ್ವಾತಂತ್ರಕ್ಕಾಗಿ ಹಿಂದೂ ಮುಸ್ಲಿಮರು ಒಗ್ಗಟ್ಟಿನಿಂದ ಹೋರಾಟ ಮಾಡಿ ಸ್ವಾತಂತ್ರ ಪಡೆದರಾದರು ಬ್ರಿಟೀಷರ ಒಡೆದು ಆಳುವ ನೀತಿಯಿಂದ ಎರಡು ಸಮುದಾಯಗಳ ನಡುವೆ ಬೆಂಕಿ ಇಟ್ಟ ಬ್ರಿಟೀಷರು ದೇಶ ವಿಬ್ಭಾಗವಾಗಲು ಕಾರಣೀಭೂತರಾದರು. ಅಂದು ಬ್ರಿಟೀಷರು ಭಾವೈಕ್ಯತೆಗೆ ಇಟ್ಟ ಬೆಂಕಿ ಇಂದಿನವರೆಗೂ ಆಗಿಂದಾಗ್ಗೆ ಭುಗಿಲೇಳುತ್ತಲೇ ಇದೆ. ಸಹೋದರರಂತೆ ಬಾಳುತ್ತಿದ್ದ ಹಿಂದೂ ಮುಸ್ಲಿಮರು ಇಂದು ಶತ್ರುಗಳಾಗಿ ಬದಲಾಗಿದ್ದಾರೆ ಎಂದು ಬೇಸರಪಟ್ಟರು.

ದೇಶದ ಇಬ್ಬಾಗದಿಂದ ಎರಡು ಧರ್ಮಗಳ ಜನರು ಎದುರಿಸುವ ಸಮಸ್ಯೆ ಹಾಗೂ ಸಂಕಷ್ಟಗಳು, ಮಾನವೀಯ ಮೌಲ್ಯಗಳು ಕುರಿತು 1947 ನೆನಪು- ಅಂದು - ಇಂದು ಕೃತಿಯಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಹಾಗೆಯೇ ಅನಾಥ ಹೆಣ್ಣು ಮಗಳೊಬ್ಬಳ ಸಾಧನೆಯ ಜತೆ ಜತೆಗೆ ಸಮಾಜ ಹೆಣ್ಣನ್ನು ನೋಡುವ ದೃಷ್ಟಿಕೋನ, ಅದರಲ್ಲೂ ನೃತ್ಯ ಕಲಾವಿದರ ಬಗ್ಗೆ ಹೊಂದಿರುವ ಭಾವನೆಗಳ ಕುರಿತು ಶ್ಯಾಮನಿಲ್ಲದ ಸಂಜೆ ಕೃತಿಯಲ್ಲಿ ತಿಳಿಸಿದ್ದಾರೆ. ಎರಡೂ ಕೃತಿಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಬಲ್ಲವು ಎಂದರು.

ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಪ್ಲಾಸ್ಟಿಕ್‌ನಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವಿದ್ದರೂ, ಬಳಕೆ ಮಾಡುತ್ತಿದ್ದೇವೆ. ಹೀಗಾಗಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಹಲವಾರು ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಸಿರು ಭಾನುವಾರ ಕಾರ್ಯಕ್ರಮದ ಮೂಲಕ ಪ್ರತಿ ವಾರ ಒಂದೊಂದು ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗುತ್ತಿದೆ ಎಂದು ವಿವರಿಸಿದರು.

ನಗರದಲ್ಲಿನ ಕೊಳಗೇರಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಹಸಿವಿನ ಆಹಾಕಾರ, ಅಕ್ಷರ ಜ್ಞಾನದ ಕೊರತೆ ಕಂಡು ಬಂತು. ಅದನ್ನು ತೊಲಗಿಸಲು ಅನಂತಕುಮಾರ್ ಅವರು ಅದಮ್ಯ ಚೇತನ ಸಂಸ್ಥೆ ಆರಂಭಿಸಿ ಅನ್ನದಾಸೋಹದ ಮೂಲಕ ಹಸಿವು ನೀಗಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ನಗರದಲ್ಲಿ ಪರಿಸರ ಉಳಿಸಲು ಹಸಿರು ಭಾನುವಾರ ಹೀಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಆರಂಭಿಸಿದರು. ದೇಶಕ್ಕಾಗಿ ಹೋರಾಟ ಮಾಡುವುದು ಎಂದರೆ ಬೀದಿಗಿಳಿದು ಧ್ವಜ ಹಿಡಿದು ಹೋರಾಟ ಮಾಡುವುದಲ್ಲ. ವ್ಯವಸ್ಥೆಯನ್ನು ಬದಲಿಸಿ ಉತ್ತಮ ವಾತಾವರಣ ನಿರ್ಮಿಸುವ ಗುರಿ ಹೊಂದಿರಬೇಕು. ಉತ್ತಮ ದೇಶ ನಿರ್ಮಾಣದಲ್ಲಿ ಸಾಹಿತ್ಯ ಹಾಗೂ ಅಕ್ಷರ ಮಹತ್ವದ ಪಾತ್ರ ವಹಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಲೇಖಕಿ ಡಾ. ಸಿ.ನಂದಿನಿ ಅವರನ್ನು ಅಭಿನಂದಿಸಲಾಯಿತು. ಕಸಾಪ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್‌ಕುಮಾರ್ ಹೊಸಮನಿ, ಕರ್ನಾಟಕ ಲೇಖಕಿಯರ ಸಂಘದ ಆಧ್ಯಕ್ಷೆ ವನಮಾಲ ಸಂಪನ್ನಕುಮಾರ್, ಎಸ್‌ಎಲ್‌ಎನ್ ಪಬ್ಲಿಷಿಂಗ್ ಹೌಸ್ ಮಾಲಕ ಎನ್.ಆರ್.ರಾಮಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News