ನೀವೆಂದೂ ಸ್ಪರ್ಶಿಸಬಾರದ ಶರೀರದ ಈ 5 ಅಂಗಗಳು ನಿಮಗೆ ಗೊತ್ತೇ?

Update: 2019-05-19 15:58 GMT

ನಮ್ಮ ದೈಹಿಕ ಮತ್ತು ಆಂತರಿಕ ಆರೋಗ್ಯ ಎರಡಕ್ಕೂ ನಾವೇ ಹೊಣೆಗಾರರಾಗಿರುತ್ತೇವೆ. ಶರೀರದ ಕೆಲವು ಭಾಗಗಳ ಬಗ್ಗೆ ನಾವು ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಶರೀರದ ಕೆಲವು ಭಾಗಗಳಲ್ಲಿ ಸ್ಪರ್ಶಿಸುವುದು ಅಪಾಯಕಾರಿಯಾಗಬಹುದು ಎನ್ನುವುದು ನಿಮಗೆ ಗೊತ್ತೇ? ನಾನು ನಮ್ಮ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಂಡಿರಬಹುದು,ಆದರೆ ಆಗಲೂ ಅವು ಸೂಕ್ಷ್ಮಜೀವಿಗಳ ವರ್ಗಾವಣೆಯ ಕೆಲಸವನ್ನು ಮಾಡಬಹುದು. ನಾವು ಸ್ಪರ್ಶಿಸಬಾರದ ಕೆಲವು ಭಾಗಗಳ ಮಾಹಿತಿ ಇಲ್ಲಿದೆ......

ಕಣ್ಣುಗಳು

ಕಣ್ಣುಗಳು ಅತ್ಯಂತ ಸೂಕ್ಷ್ಮವಾಗಿದ್ದು,ಅವುಗಳಲ್ಲಿ ಬಿದ್ದಿರುವ ಕಸ ಅಥವಾ ಇತರ ಏನಾದರೂ ವಸ್ತುವನ್ನು ಹೊರತೆಗೆಯಲು ಕಣ್ಣುಗಳನ್ನು ತೊಳೆಯುವಾಗ ಬಿಟ್ಟರೆ ಇತರ ಸಂದರ್ಭಗಳಲ್ಲಿ ಕೈಗಳು ನಮ್ಮ ಕಣ್ಣುಗಳಿಂದ ದೂರವೇ ಇರಬೇಕು. ಸೂಕ್ಷ್ಮಜೀವಿಗಳಿಂದ ತುಂಬಿರುವ ಕೈಗಳಿಂದ ಕಣ್ಣುಗಳನ್ನು ಸ್ಪರ್ಶಿಸಿದರೆ ಸೂಕ್ಷ್ಮಜೀವಿಗಳು ಕಣ್ಣುಗಳಿಗೆ ವರ್ಗಾವಣೆಯಾಗಲು ನಾವೇ ನೆರವಾದಂತಾಗುತ್ತದೆ. ಕೆಂಪು ವರ್ಣದ ಕಣ್ಣು ಅಥವಾ ಇತರ ಸೋಂಕುಗಳಿಗೆ ಈ ಸೂಕ್ಷ್ಮಜೀವಿಗಳು ಕಾರಣವಾಗುತ್ತವೆ.

ಕಿವಿಯ ಕಾಲುವೆ

ಯಾವಾಗಲೂ ಕಿವಿಗಳಲ್ಲಿ ಬೆರಳು ಅಥವಾ ಇನ್ನೇನಾದರೂ ತುರುಕುವ ಚಟ ನಿಮಗಿದ್ದರೆ ಅದನ್ನು ಬಿಟ್ಟುಬಿಡಿ. ಕಿವಿಯ ಕಾಲುವೆಯಲ್ಲಿ ಏನನ್ನಾದರೂ ತೂರಿಸಿದಾಗ ಅದು ಅಲ್ಲಿಯ ತೆಳುವಾದ ಚರ್ಮ ಹರಿಯಲು ಕಾರಣವಾಗಬಹುದು. ಕಿವಿಗಳಲ್ಲಿ ತುರಿಸುತ್ತಿದ್ದರೆ ಇನ್ನೇನು ಮಾಡಬೇಕು ಎಂದು ನೀವು ಪ್ರಶ್ನಿಸಬಹುದು. ವೈದ್ಯರನ್ನು ಸಂಪರ್ಕಿಸಿ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ನಿಮಗೆ ಮತ್ತು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

ಉಗುರುಗಳ ಸುತ್ತಲಿನ ಚರ್ಮ

 ಸ್ಟಾಫ್‌ನಂತಹ ಬ್ಯಾಕ್ಟೀರಿಯಾಗಳು ನಿಮ್ಮ ಉಗುರುಗಳ ಅಡಿಯ ಚರ್ಮವನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡಿರಬಹುದು. ಇಂತಹ ಬ್ಯಾಕ್ಟೆರಿಯಾಗಳನ್ನು ಹೊಂದಿರುವುದನ್ನು ತಪ್ಪಿಸಲು ಉಗುರುಗಳನ್ನು ಉದ್ದ ಬಿಡದೇ ಆಗಾಗ್ಗೆ ಕತ್ತರಿಸಿಕೊಳ್ಳುತ್ತಿರಬೇಕು.

ಮುಖ

ನೀವು ಮುಖವನ್ನು ತೊಳೆದುಕೊಳ್ಳುವಾಗ ಅಥವಾ ಕ್ರೀಂ ಲೇಪಿಸಿಕೊಳ್ಳುವಾಗ ಮಾತ್ರ ನಿಮ್ಮ ಕೈಗಳಿಂದ ನಿಮ್ಮ ಮುಖವನ್ನು ಸ್ಪರ್ಶಿಸಿ. ಇತರ ವೇಳೆಗಳಲ್ಲಿ ಅನಗತ್ಯವಾಗಿ ಮುಖವನ್ನು ಮುಟ್ಟಿಕೊಳ್ಳುತ್ತಿರಬೇಡಿ. ನಿಮ್ಮ ಕೈಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೂಕ್ಷ್ಮಜೀವಿಗಳಿರುತ್ತವೆ ಮತ್ತು ಇಂತಹ ಕೈಗಳಿಂದ ಮುಖವನ್ನು ಮುಟ್ಟಿಕೊಂಡಾಗ ಅವು ಚರ್ಮಕ್ಕೆ ಅಂಟಿಕೊಳ್ಳುತ್ತವೆ ಮತ್ತು ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಮೂಗಿನ ಒಳಭಾಗ

ಕಿವಿ,ಮೂಗು ಮತ್ತು ಗಂಟಲು ರೋಗಿಗಳ ಕುರಿತು ನಡೆಸಲಾದ ವಿವಿಧ ಅಧ್ಯಯನಗಳಲ್ಲಿ ಮೂಗಿನಲ್ಲಿ ಆಗಾಗ್ಗೆ ಬೆರಳುಗಳನ್ನು ತೂರಿಸುತ್ತಲೇ ಇರುವವರು ಇತರರಿಗೆ ಹೋಲಿಸಿದರೆ ತಮ್ಮ ಮೂಗಿನ ಒಳಭಾಗದಲ್ಲಿ ಶೇ.51ರಷ್ಟು ಹೆಚ್ಚು ಸ್ಟಾಫ್ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತಾರೆ ಎನ್ನುವುದು ಬೆಳಕಿಗೆ ಬಂದಿದೆ. ಇದು ಆರೋಗ್ಯಕ್ಕೆ ತುಂಬ ಅಪಾಯಕಾರಿಯಾಗಿರುವುದರಿಂದ ಈ ಅಭ್ಯಾಸವನ್ನು ಹೊಂದಿರುವವರು ತಕ್ಷಣ ಅದನ್ನು ಬಿಡುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News