ನಾವು ರೈಲು ನಿಲ್ದಾಣ ಸ್ಫೋಟಿಸಲಿದ್ದೆವು ಎಂದು ಮಾಧ್ಯಮಗಳು ಸುಳ್ಳು ಹರಡಿದವು

Update: 2019-05-20 06:23 GMT
ನಿಝಾಮುದ್ದೀನ್

‘ಜೈಲಿನಿಂದ ಹಿಂದಿರುಗಿದ ನಮಗೆ ಜನರು ನೀಡಿದ ಅಭೂತಪೂರ್ವ ಸ್ವಾಗತದಿಂದಾಗಿ ನನಗೆ ತುಂಬಾ ಸಂತಸವಾಗಿದೆ’’ ಎಂದು 41 ವರ್ಷ ವಯಸ್ಸಿನ ರಾಝಿಕ್ ಹೇಳುತ್ತಾರೆ. ‘‘ಆದರೆ ನಮ್ಮ ವಿರುದ್ಧ ತಪ್ಪಾಗಿ ದೋಷಾರೋಪ ಹೊರಿಸಿದ್ದುದು ನನಗೆ ತುಂಬಾ ನೋವು ಹಾಗೂ ಆಕ್ರೋಶವನ್ನುಂಟು ಮಾಡಿದ್ದು, ಆ ನೋವಿನಿಂದ ಹೊರಬರಲು ತುಂಬಾ ಸಮಯವೇ ಬೇಕಾದೀತು’’ ಎಂದು ಆತ ಹೇಳುತ್ತಾರೆ. ಏನೇ ಇದ್ದರೂ, ಜೈಲಿನಲ್ಲಿ ಕಳೆದುಹೋದ ಅವರ ಬದುಕಿನ ಅಮೂಲ್ಯ ವರ್ಷಗಳು ಅವರಿಗೆ ಮತ್ತೆಂದೂ ದೊರಕಲಾರವು ಎಂಬುದಂತೂ ಸತ್ಯ.

2019ರ ಎಪ್ರಿಲ್ 13. ಬರೋಬ್ಬರಿ ಮೂರು ವರ್ಷ ಹಾಗೂ ಐದು ತಿಂಗಳುಗಳನ್ನು ಜೈಲಿನಲ್ಲಿ ಕಳೆದ ಬಳಿಕ ನಿಝಾಮುದ್ದೀನ್‌ರನ್ನು ಕೊನೆಗೂ ಕೇರಳ ಹೈಕೋರ್ಟ್ ಭಯೋತ್ಪಾದನೆಯ ಆರೋಪ ದಿಂದ ಮುಕ್ತಗೊಳಿಸಿತು. ಆದರೆ ಕೇರಳದ ಎರ್ನಾಕುಲಂ ಜಿಲ್ಲೆಯ ಪನ್ನೈಕುಳಂನಲ್ಲಿರುವ ತನ್ನ ಮನೆಗೆ ಮರಳಿದ ಆತ ಒಂದೇ ಸಮನೆ ರೋದಿಸತೊಡಗಿದರು. ಯಾಕೆಂದರೆ, ನಿಝಾಮುದ್ದೀನ್ ಜೈಲಿನಲ್ಲಿದ್ದಾಗ ಆತನ ತಾಯಿ ಹಾಗೂ ಸಹೋದರಿ ಕ್ಯಾನ್ಸರ್ ರೋಗದಿಂದ ಸಾವನ್ನಪ್ಪಿದ್ದರು.
‘‘ನನ್ನ ಕುಟುಂಬದ ಏಕೈಕ ಬದುಕುಳಿದಿರುವ ಸದಸ್ಯ ನಾನಾಗಿದ್ದೇನೆ’’ ಎಂದು 37 ವರ್ಷ ವಯಸ್ಸಿನ ನಿಝಾಮುದ್ದೀನ್ ಹೇಳುತ್ತಾರೆ. ‘‘ನಾನು ಎಲ್ಲರನ್ನೂ ಕಳೆದುಕೊಂಡೆ. ನಾನು ಜೊತೆಗಿರುತ್ತಿದ್ದರೆ, ಅವರು ಹೆಚ್ಚು ಕಾಲ ಬದುಕಿರುತ್ತಿದ್ದರೇನೋ’’ ಎಂದವರು ಹೇಳುತ್ತಾರೆ.
2006ರಲ್ಲಿ ಪನ್ನೈಕ್ಕುಳಂ ನಿಷೇಧಿತ ಸಿಮಿ ಸಂಘಟನೆಯ ರಹಸ್ಯ ಸಭೆಯನ್ನು ಆಯೋಜಿಸಿದ ಆರೋಪದಲ್ಲಿ ರಾಝಿಕ್ ರಹೀಂ, ಅನ್ಸಾರ್ ಹಾಗೂ ಪಿ.ಎ. ಶಾದೂಲಿ ಅವರೊಂದಿಗೆ ನಿಝಾಮುದ್ದೀನ್‌ರನ್ನು ಕೂಡಾ ಬಂಧಿಸಲಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆಗೊಳಗಾಗಲಿರುವ ಕೇರಳದ ಪ್ರಪ್ರಥಮ ಭಯೋತ್ಪಾದನಾ ಪ್ರಕರಣ ಎಂಬ ನೆಲೆಯಲ್ಲಿ ಈ ಪ್ರಕರಣ ವ್ಯಾಪಕ ಗಮನವನ್ನು ಸೆಳೆದಿತ್ತು. ವಿಚಾರಣೆ ನಡೆಸಿದ ವಿಶೇಷ ಎನ್‌ಐಎ ನ್ಯಾಯಾಲಯವು 2015ರಲ್ಲಿ ಅನ್ಸಾರ್ ಹಾಗೂ ರಾಝಿಕ್‌ಗೆ ದೇಶದ್ರೋಹದ ಆರೋಪದಲ್ಲಿ 14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಇತರ ಆರೋಪಿಗಳಾದ ಶಮ್ಮಾಸ್, ಶಾದೂಲಿ ಹಾಗೂ ನಿಝಾಮುದ್ದೀನ್ ಅವರಿಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ತಲಾ 12 ವರ್ಷ ಜೈಲು ಶಿಕ್ಷೆ ಘೋಷಿಸಿತ್ತು.
 ಇದಾದ ನಾಲ್ಕು ವರ್ಷಗಳ ಬಳಿಕ, ಅಂದರೆ ಎಪ್ರಿಲ್ 12ರಂದು ಕೇರಳ ಹೈಕೋರ್ಟ್ ಆರೋಪಿಗಳ ವಿರುದ್ಧ ಯಾವುದೇ ಪುರಾವೆಯಿಲ್ಲವೆಂದು ಪ್ರತಿಪಾದಿಸಿ ಎಲ್ಲಾ ಐದು ಮಂದಿಯನ್ನು ದೋಷಮುಕ್ತಗೊಳಿಸಿತ್ತು. ನಿಝಾಮುದ್ದೀನ್, ನಿರ್ಜನವಾದ ತನ್ನ ಮನೆಗೆ ವಾಪಸಾದರೆ ರಾಝಿಕ್ ಹಾಗೂ ಶಮ್ಮಾಸ್ ಅವರನ್ನು ಕೊಟ್ಟಾಯಂ ಜಿಲ್ಲೆಯ ಎರಟ್ಟುಪೆಟ್ಟಾದ ಪಟ್ಟಣದ ನಿವಾಸಿಗಳು ಹಾರ್ದಿಕ ಸ್ವಾಗತ ನೀಡಿದರು.
‘ಜೈಲಿನಿಂದ ಹಿಂದಿರುಗಿದ ನಮಗೆ ಜನರು ನೀಡಿದ ಅಭೂತಪೂರ್ವ ಸ್ವಾಗತದಿಂದಾಗಿ ನನಗೆ ತುಂಬಾ ಸಂತಸವಾಗಿದೆ’’ ಎಂದು 41 ವರ್ಷ ವಯಸ್ಸಿನ ರಾಝಿಕ್ ಹೇಳುತ್ತಾರೆ. ‘‘ಆದರೆ ನಮ್ಮ ವಿರುದ್ಧ ತಪ್ಪಾಗಿ ದೋಷಾರೋಪ ಹೊರಿಸಿದ್ದುದು ನನಗೆ ತುಂಬಾ ನೋವು ಹಾಗೂ ಆಕ್ರೋಶವನ್ನುಂಟು ಮಾಡಿದ್ದು, ಆ ನೋವಿನಿಂದ ಹೊರಬರಲು ತುಂಬಾ ಸಮಯವೇ ಬೇಕಾದೀತು’’ ಎಂದು ಆತ ಹೇಳುತ್ತಾರೆ. ಏನೇ ಇದ್ದರೂ, ಜೈಲಿನಲ್ಲಿ ಕಳೆದುಹೋದ ಅವರ ಬದುಕಿನ ಅಮೂಲ್ಯ ವರ್ಷಗಳು ಅವರಿಗೆ ಮತ್ತೆಂದೂ ದೊರಕಲಾರವು ಎಂಬುದಂತೂ ಸತ್ಯ.
ಪನ್ನೈಕುಳಂ ಭಯೋತ್ಪಾದನಾ ಪ್ರಕರಣ
2006ರ ಆಗಸ್ಟ್ 15ರಂದು ಕೇರಳ ಪೊಲೀಸರು, ಪನ್ನೈಕುಳಂನಲ್ಲಿ ಸಭೆಯೊಂದನ್ನು ಆಯೋಜಿಸಿದ ಆರೋಪದಲ್ಲಿ 17 ಮಂದಿಯನ್ನು ಬಂಧಿಸಿದ್ದರು. ಭಾರತ ಸರಕಾರ ಹಾಗೂ ಭಾರತೀಯ ಸೇನೆಯ ವಿರುದ್ಧ ಭಾಷಣ ಮಾಡಿದ ಮತ್ತು ಸಿಮಿ ಸಂಘಟನೆಯ ಸಾಹಿತ್ಯಗಳನ್ನು ವಿತರಿಸಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು. ಅವರಲ್ಲಿ 12 ಮಂದಿಯನ್ನು ಬಂಧನದ ಮಾರನೆಯ ದಿನವೇ ಬಿಡುಗಡೆಗೊಳಿಸಲಾಯಿತು. ಇತರ ಐದು ಮಂದಿಗೆ ಜಾಮೀನು ದೊರೆಯುವ ಮೊದಲು ಅವರು 64 ದಿನಗಳನ್ನು ನ್ಯಾಯಾಂಗ ಕಸ್ಟಡಿಯಲ್ಲಿಯೇ ಕಳೆಯಬೇಕಾಯಿತು. ಪನ್ನೈಕುಳಂ ಭಯೋತ್ಪಾದನಾ ಶಿಬಿರ ಪ್ರಕರಣವೆಂದೇ ಇದು ಹೆಸರು ಪಡೆದಿತ್ತು.
2008ರಲ್ಲಿ ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸುವವರೆಗೂ ಸುಮಾರು ಎರಡು ವರ್ಷಗಳ ಕಾಲ ಅದು ಶೀತಲಾವಸ್ಥೆಯಲ್ಲಿದ್ದಿತ್ತು. ತನಿಖಾ ಧಿಕಾರಿಗಳು ಮತ್ತೊಮ್ಮೆ ಆರೋಪಿಗಳನ್ನು ಪ್ರಶ್ನಿಸಿದರು ಹಾಗೂ ಹೊಸ ಪುರಾವೆಗಳನ್ನು ಸಂಗ್ರಹಿಸಿದರು. ಆದರೆ 2010ರಲ್ಲಿ ವಿಶೇಷ ತನಿಖಾ ತಂಡವು ದೋಷಾರೋಪ ಪಟ್ಟಿಯನ್ನು ಸಲ್ಲಿಸಲಿದ್ದ ಒಂದು ದಿನ ಮೊದಲು ಕೇರಳ ಸರಕಾರವು ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಿತು.
ಇದಾದ ಒಂದು ವರ್ಷದ ಆನಂತರ, ಎನ್‌ಐಎಯು ಪನ್ನೈಕುಳಂ ಸಭೆಯಲ್ಲಿ ಪಾಲ್ಗೊಂಡಿದ್ದರೆಂದು ತಾನು ಆರೋಪಿಸಿರುವ 16 ಮಂದಿಯ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತು. ಅಪ್ರಾಪ್ತ ವಯಸ್ಸಿನ ಆರೋಪಿಯ ವಿರುದ್ಧ ಬಾಲ ನ್ಯಾಯ ಮಂಡಳಿ ಪ್ರತ್ಯೇಕ ದೋಷಾರೋಪಪಟ್ಟಿಯನ್ನು ಸಲ್ಲಿಸಿತ್ತು. 2015ರ ನವೆಂಬರ್ 29ರಂದು ವಿಶೇಷ ಎನ್‌ಐಎ ನ್ಯಾಯಾಲಯವು 16 ಮಂದಿಯ ಪೈಕಿ ಐವರಿಗೆ ಪರೋಲ್ ರಹಿತವಾದ ದೀರ್ಘಾವಧಿಯ ಜೈಲು ಶಿಕ್ಷೆ ವಿಧಿಸಿತು ಹಾಗೂ ಉಳಿದವರನ್ನು ದೋಷಮುಕ್ತಗೊಳಿಸಿತು.
ಎನ್‌ಐಎ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ, ಜೈಲು ಶಿಕ್ಷೆಗೊಳಗಾದ ಆರೋಪಿಗಳು ಕೇರಳ ಹೈಕೋರ್ಟ್‌ನ ಮೊರೆ ಹೋದರು. ಅವರು ದೇಶದ್ರೋಹದ ಭಾಷಣಗಳನ್ನು ಮಾಡಿದ್ದಾರೆಂಬುದನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳು ಇಲ್ಲವೆಂದು ನ್ಯಾಯಾಲಯ ಅಭಿಪ್ರಾಯಿಸಿತು.
 ಪನ್ನೈಕುಳಂನಲ್ಲಿ ನಡೆದ ಸಭೆಯಲ್ಲಿ ಆರೋಪಿ ರಾಝಿಕ್ ತನ್ನ ಭಾಷಣದಲ್ಲಿ‘‘ ಕಾಶ್ಮೀರದಲ್ಲಿ ಭಾರತೀಯ ಸೇನೆಯು ತನ್ನ ವಿರುದ್ಧ ಜಿಹಾದ್‌ನಲ್ಲಿ ತೊಡಗಿರುವ ಮುಸ್ಲಿಮರನ್ನು ಕೊಲ್ಲುತ್ತಿದೆ. ಭಾರತದಲ್ಲಿನ ಇತರ ಮುಸ್ಲಿಮರು ಟಾಡಾದಂತಹ ಕಾನೂನುಗಳ ಅಡಿಯಲ್ಲಿ ಚಿತ್ರಹಿಂಸೆಗೊಳಗಾಗುತ್ತಿದ್ದು, ಇವುಗಳ ವಿರುದ್ಧ ಸಿಮಿಯ ನಾಯಕತ್ವದಲ್ಲಿ ನಾವು ಹೋರಾಡಬೇಕಾಗಿದೆ’’ ಎಂದು ಹೇಳಿದ್ದಾನೆಂದು ಪ್ರಾಸಿಕ್ಯೂಶನ್ ಆಪಾದಿಸಿತ್ತು.
ಇನ್ನೋರ್ವ ಆರೋಪಿ ಅನ್ಸಾರ್ ‘‘ ಭಾರತದಲ್ಲಿ ನಾವೇನು ಕಾಣುತ್ತಿದ್ದೇವೆಯೋ ಅವೆಲ್ಲವೂ ಬ್ರಿಟಿಷರಿಂದ ನಿರ್ಮಿತವಾದುದಾಗಿದೆ. ನಿಜಾಮರು ಹಾಗೂ ಮೊಗಲರು ಆಳಿದ ಪ್ರಾಚೀನ ಭಾರತದ ಯುಗಕ್ಕೆ ನಾವು ಮರಳಬೇಕಾಗಿದೆ. ಇದಕ್ಕಾಗಿ ನೀವು ಸಿಮಿ ಜೊತೆಗೂಡಿ ಹೋರಾಡಬೇಕು ಹಾಗೂ ಯಾರಿಗೂ ಸಿಮಿಯನ್ನು ನಾಶಪಡಿಸಲು ಸಾಧ್ಯವಿಲ್ಲ’’ ಎಂದು ಹೇಳಿದ್ದಾಗಿ ಪ್ರಾಸಿಕ್ಯೂಶನ್ ಆರೋಪಿಸಿತ್ತು.
ರಾಝಿಕ್, ಶಮ್ಮಾಸ್ ಹಾಗೂ ನಿಝಾಮುದ್ದೀನ್ ಈಗ ಬಂಧಮುಕ್ತರಾಗಿದ್ದರೆ, ಅನ್ಸಾರ್ ಹಾಗೂ ಶಾದೂಲಿ ಈಗಲೂ ಇಂದೋರ್ ಜೈಲಿನಲ್ಲಿದ್ದಾರೆ. ಯಾಕೆಂದರೆ 2008ರ ಜೈಪುರ ಸ್ಫೋಟ ಹಾಗೂ ವಾಗಾಮೊನ್ ಸಿಮಿ ತರಬೇತಿ ಶಿಬಿರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿಯೂ ಅವರು ಆರೋಪಿಗಳಾಗಿದ್ದಾರೆ.
 ‘ಪೊಲೀಸರು ನಮ್ಮ ಭಾಷಣಗಳನ್ನು ತಿರುಚಿದ್ದಾರೆ’
2006ರಲ್ಲಿ ರಾಝಿಕ್ ಬಂಧಿತನಾಗಿದ್ದಾಗ, ಆತ ವಿವಾಹವಾಗಿ ಕೇವಲ ನಾಲ್ಕು ತಿಂಗಳುಗಳಷ್ಟೇ ಕಳೆದಿತ್ತು. ಸಿಮಿ ಶಿಬಿರವೆಂದು ಬಣ್ಣಿಸಲಾದ ಪನ್ನೈಕುಳಂ ಭೆಯು, ವಾಸ್ತವವಾಗಿ, ‘ಭಾರತದ ಸ್ವಾತಂತ್ರದಲ್ಲಿ ಮುಸ್ಲಿಮರ ಪಾತ್ರ’ದ ಕುರಿತಾಗಿ ನಡೆದ ವಿಚಾರಸಂಕಿರಣವಾಗಿತ್ತು. ಅದು ಆರಂಭಗೊಳ್ಳುವ ಮೊದಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು, ಅಲ್ಲಿದ್ದ ಎಲ್ಲರನ್ನೂ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗುವಂತೆ ತಿಳಿಸಿದರು. ಪೊಲೀಸರು ನಮ್ಮ ಭಾಷಣಗಳನ್ನು ತಿರುಚಿದ್ದಾರೆ ಹಾಗೂ ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆಂದು ರಾಝಿಕ್ ತಿಳಿಸಿದ್ದಾರೆ.
ಈ ಬಂಧನವು ರಾಝಿಕ್‌ರ ಬದುಕನ್ನು ಬುಡಮೇಲುಗೊಳಿಸಿತು. ‘‘ಆವರೆಗೆ ನಾನು ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೆ. ಆ ಬಳಿಕ ನನ್ನ ಜೀವನವು ಪೊಲೀಸ್ ಅಧಿಕಾರಿಗಳ ಮುಂದೆ ಹಾಜರಾಗುವುದು, ಅವರ ದುರುದ್ದೇಶಪೂರಿತ ಪ್ರಶ್ನೆಗಳಿಗೆ ಉತ್ತರಿಸುವುದು, ವಕೀಲರನ್ನು ಭೇಟಿಯಾಗುವುದು ಹಾಗೂ ಕಪೋಲಕಲ್ಪಿತ ಪ್ರಕರಣದಿಂದ ನನ್ನ ರಕ್ಷಿಸೆಂದು ದೇವರಲ್ಲಿ ಮೊರೆಯಿಡುವುದು ಇವುಗಳಲ್ಲೇ ಸಾಗಿಹೋಯಿತು’’ ಎಂದು ರಾಝಿಕ್ ಹೇಳುತ್ತಾರೆ.
ಆರ್ಥಿಕವಾಗಿಯೂ ಪೊಲೀಸರು ತನ್ನನ್ನು ಜರ್ಝರಿತಗೊಳಿಸಿದ್ದಾರೆಂದು ರಾಝಿಕ್ ಹೇಳುತ್ತಾರೆ. ‘‘ ಎರಟ್ಟುಪೆಟ್ಟಾದಲ್ಲಿರುವ ಬಾಡಿಗೆ ಕಟ್ಟಡವೊಂದರಲ್ಲಿ ಇಬ್ಬರು ಪಾಲುದಾರರೊಂದಿಗೆ ಬ್ಯಾಗ್ ತಯಾರಿಕಾ ಘಟಕವನ್ನು ಆರಂಭಿಸಿದ್ದೆ. ಆದರೆ ಪೊಲೀಸರು ಆ ಕಟ್ಟಡದ ಮಾಲಕನಿಗೆ ನಾನೊಬ್ಬ ಭಯೋತ್ಪಾದಕ ಹಾಗೂ ನನಗೆ ಕಟ್ಟಡವನ್ನು ಬಾಡಿಗೆಗೆ ನೀಡಕೂಡದು ಎಂದು ತಾಕೀತು ಮಾಡಿದ್ದರು. ತದನಂತರ ಕಟ್ಟಡದ ಮಾಲಕನು ಬಲವಂತವಾಗಿ ನನ್ನನ್ನು ಜಾಗ ಖಾಲಿ ಮಾಡಲು ಹೇಳಿದ. ಪೊಲೀಸರು ತಮ್ಮ ಕೊಳಕು ಆಟ ಆಡುವುದನ್ನು ಮುಂದುವರಿಸಿದಾಗ, ನಾನು ಉದ್ಯಮದ ಪಾಲುದಾರಿಕೆಯಿಂದ ಹೊರಬಿದ್ದೆ. ಇದರಿಂದ ಆರ್ಥಿಕವಾಗಿ ನನಗೆ ಭಾರೀ ದೊಡ್ಡ ಹೊಡೆತ ಉಂಟಾಯಿತು.
ರಾಝಿಕ್ ಬಂಧಿತನಾದ ಎರಡು ವರ್ಷಗಳ ಬಳಿಕ ಆತನ ತಂದೆ ಮೃತಪಟ್ಟರು. ಈ ಪ್ರಕರಣವು ಅವರ ಮೇಲೆ ದೊಡ್ಡದೊಂದು ಕಳಂಕವನ್ನು ಮೂಡಿಸಿತ್ತು ಎಂದು ರಾಝಿಕ್ ನೋವಿನಿಂದ ಹೇಳುತ್ತಾರೆ.
ನಿಝಾಮುದ್ದೀನ್‌ಗೂ ತನ್ನ ಹೆತ್ತವರು ಹಾಗೂ ಸಹೋದರಿಯ ಸಾವಿನ ನೋವಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ‘‘2012ರಲ್ಲಿ ನನ್ನ ತಂದೆ ಹಾಗೂ 2016ರ ಮೇನಲ್ಲಿ ನನ್ನ ತಾಯಿ ನಿಧನರಾದರು. ಇದಾದ ಐದು ತಿಂಗಳುಗಳ ಬಳಿಕ, ನನ್ನ ಸಹೋದರಿ ಕೊನೆಯುಸಿರೆಳೆದರು’’ ಎಂದು ಆತ ದುಃಖಿಸುತ್ತಾರೆ.
ನಿಝಾಮುದ್ದೀನ್‌ಗೆ, ಆತನ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತಾದರೂ, ಸಹೋದರಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅನುಮತಿ ನಿರಾಕರಿಸಲಾಗಿತ್ತು. ‘‘ನನ್ನನ್ನು ಭಯೋತ್ಪಾದನೆ ಪ್ರಕರಣದಲ್ಲಿ ಪೊಲೀಸರು ಸಿಲುಕಿಸಿರುವ ನೋವಿನಿಂದಾಗಿ ಅವರೆಲ್ಲರೂ ಸಾವಿಗೀಡಾದರು’’ ಎಂದು ನಿಝಾಮುದ್ದೀನ್ ಹೇಳುತ್ತಾರೆ.
ತನ್ನ 13 ವರ್ಷಗಳ ಅಗ್ನಿಪರೀಕ್ಷೆಗೆ ಕೇರಳ ಪೊಲೀಸ್ ಅಧಿಕಾರಿಗಳಲ್ಲಿರುವ ‘ಇಸ್ಲಾಮೊಫೊಬಿಯಾ’ ಕಾರಣವೆಂದು ಆತನಿಗೆ ಈಗ ಮನವರಿಕೆಯಾಗಿದೆ. ‘‘ ಒಂದು ವೇಳೆ ಇದು ಇಸ್ಲಾಮೊಫೊಬಿಯಾ ಅಲ್ಲವಾದರೆ, ಕೇರಳ ಪೊಲೀಸ್ ಅಧಿಕಾರಿಗಳು ಯಾಕೆ ನನ್ನ ವಿರುದ್ಧ ಆರೋಪಗಳನ್ನು ಸೃಷ್ಟಿಸಿದರು?’’ ಎಂದು ಆತ ವಾದಿಸುತ್ತಾರೆ. ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವಾಗ, ಆಗಿನ ಕಮ್ಯುನಿಸ್ಟ್ ಸರಕಾರ ಕೂಡಾ ‘ಇಸ್ಲಾಮೊಫೊಬಿಯಾ’ವನ್ನು ಪ್ರದರ್ಶಿಸಿತ್ತು ಎಂದು ನಿಝಾಮುದ್ದೀನ್ ಹೇಳುತ್ತಾರೆ.
 ಮಾಧ್ಯಮಗಳಿಂದ ಅಪ್ಪಟ ಸುಳ್ಳುಗಳ ಪ್ರಸಾರ
ಮಾಧ್ಯಮಗಳು ಕೂಡಾ ಪೊಲೀಸರ ಮುಖವಾಣಿಗಳಾಗಿ ವರ್ತಿಸುತ್ತಿರುವುದು ದೋಷಮುಕ್ತ ಯುವಕರಿಗೆ ಆಘಾತವುಂಟು ಮಾಡಿತ್ತು. ಆಧಾರವಿಲ್ಲದೆ ಹಾಗೂ ಕಾಲ್ಪನಿಕ ವರದಿಗಳನ್ನು ಪ್ರಕಟಿಸುವ ಮೂಲಕ ಮಾಧ್ಯಮಗಳು ನಮ್ಮ ಬದುಕನ್ನು ಅಸಹನೀಯವಾಗಿ ಮಾಡಿವೆ ಎಂದು ರಾಝಿಕ್ ಹೇಳುತ್ತಾರೆ. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಶಿಕ್ಷಣ ಪಡೆದಿರುವ ರಾಝಿಕ್, ಮಲಯಾಳಂ ಭಾಷೆ ಹಾಗೂ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರನಾಗಿದ್ದಾರೆ.
ಈ ಐದು ಮಂದಿ ಬಂಧಿತರಾದ ಮರುದಿನವೇ ಮಲಯಾಳಂ ಸುದ್ದಿಪತ್ರಿಕೆಗಳಾದ ಮಂಗಳಂ ಹಾಗೂ ಕೇರಳ ಕೌಮುದಿ, ಆರೋಪಿಗಳು ಅಲುವ ರೈಲು ನಿಲ್ದಾಣವನ್ನು ಸ್ಫೋಟಿಸಲು ಸಂಚು ಹೂಡಿದ್ದರೆಂದು ಅನಾಮಧೇಯ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದವು. ‘‘ ನಮ್ಮಿಂದ ಅಲುವ ರೈಲು ನಿಲ್ದಾಣ ನಕ್ಷೆ ಹಾಗೂ ಕಾಶ್ಮೀರ ರಹಿತವಾದ ಭಾರತದ ನಕ್ಷೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆಂದು ಈ ಎರಡೂ ದಿನಪತ್ರಿಕೆಗಳು ವರದಿ ಮಾಡಿದ್ದವು. ಪಾಕಿಸ್ತಾನದ ಪೊಲೀಸ್ ಸಂಶೋಧನಾ ಸಂಸ್ಥೆ ಪ್ರಕಟಿಸಿರುವ Mass resistance in kashmir (ಕಾಶ್ಮೀರದಲ್ಲಿ ಸಾಮೂಹಿಕ ಪ್ರತಿರೋಧ) ಎಂಬ ಪುಸ್ತಕವನ್ನು ಕೂಡಾ ಪೊಲೀಸರು ನಮ್ಮಿಂದ ವಶಪಡಿಸಿಕೊಂಡಿದ್ದಾರೆ ಎಂದು ಅವು ಹೇಳಿದ್ದವು. ಈ ದಿನಪತ್ರಿಕೆಗಳು ಅಪ್ಪಟ ಸುಳ್ಳುಗಳನ್ನು ಹರಡಿದ್ದವು ’’ ಎಂದವರು ಆಕ್ರೋಶದಿಂದ ಹೇಳುತ್ತಾರೆ.
ಮಾಧ್ಯಮಗಳು ತನ್ನ ಪತ್ನಿಯನ್ನು ಕೂಡಾ ಅಂತರ್‌ರಾಷ್ಟ್ರೀಯ ನಂಟು ಹೊಂದಿರುವ ಭಯೋತ್ಪಾದಕಿ ಎಂದು ಬಿಂಬಿಸಿದ್ದವು ಎಂದು ರಾಝಿಕ್ ಹೇಳುತ್ತಾರೆ.
2006ರ ಅಕ್ಟೋಬರ್ 29ರಂದು ಕೇರಳ ಕೌಮುದಿ ದಿನಪತ್ರಿಕೆಯು, ಬೆಂಗಳೂರಿನ ಸಾಫ್ಟ್‌ವೇರ್ ದಿಗ್ಗಜ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿರುವ ರಾಝಿಕ್ ಪತ್ನಿಗೆ, ಪಾಕ್ ಭಯೋತ್ಪಾದಕರ ಜೊತೆ ನಿಕಟವಾದ ನಂಟಿದೆ ಹಾಗೂ ಆಕೆ ಕೆಲಸ ಮಾಡುತ್ತಿರುವ ಸಾಫ್ಟ್ ವೇರ್ ಸಂಸ್ಥೆಯ ಸರ್ವರ್‌ಗಳನ್ನು ಬಳಸಿಕೊಳ್ಳಲು ಭಯೋತ್ಪಾದಕರಿಗೆ ನೆರವಾಗುತ್ತಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆಂದು ವರದಿ ಮಾಡಿತ್ತು.
‘‘ನನ್ನ ಪತ್ನಿ ಹಾಗೂ ನಾನು ಭಯೋತ್ಪಾದಕರೆಂದು ತೋರಿಸಲು ಪೊಲೀಸರು ಈ ಕಥೆಯನ್ನು ಹುಟ್ಟುಹಾಕಿದ್ದರೆಂದು ರಾಝಿಕ್ ಹೇಳುತ್ತಾರೆ. ಬೇಜವಾಬ್ದಾರಿಯ ಪತ್ರಕರ್ತರು ಹಾಗೂ ಮಾಧ್ಯಮಸಂಸ್ಥೆಗಳ ಮಾಲಕರಿಂದಾಗಿ, ನನ್ನ ಪತ್ನಿಯು ಕಷ್ಟ ಪಟ್ಟು ಪಡೆದಿದ್ದ, ಒಳ್ಳೆಯ ಸಂಪಾದನೆಯಿದ್ದ ಹಾಗೂ ಭರವಸೆದಾಯಕ ಉದ್ಯೋಗವನ್ನು ಕಳೆದುಕೊಳ್ಳಬೇಕಾಯಿತು. ಇದರಿಂದಾಗಿ ನಮ್ಮ ಅರ್ಥಿಕ ಪರಿಸ್ಥಿತಿ ಇನ್ನಷ್ಟು ದುಸ್ತರವಾಯಿತು’’ ಎಂದವರು ಹೇಳುತ್ತಾರೆ.
ಹೈಕೋರ್ಟ್ ತೀರ್ಪಿನ ಬಳಿಕವೂ ತಮ್ಮ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಿದ್ದ ಈ ಮಾಧ್ಯಮಸಂಸ್ಥೆಗಳ್ಯಾವುವೂ ಕ್ಷಮಾಯಾಚನೆಯನ್ನು ಪ್ರಕಟಿಸಲಿಲ್ಲವೆಂದು ರಾಝಿಕ್ ದೂರುತ್ತಾರೆ. ‘‘2010ರಲ್ಲಿ ಆಸ್ಟ್ರೇಲಿಯದ ಸರಕಾರವು ಭಯೋತ್ಪಾದನೆಯ ಆರೋಪದಲ್ಲಿ ತಪ್ಪಾಗಿ ಬಂಧಿಸಿದ್ದಕ್ಕಾಗಿ ಭಾರತೀಯ ವೈದ್ಯರೊಬ್ಬರಲ್ಲಿ ಕ್ಷಮೆಯಾಚಿಸಿತ್ತು’’ ಎಂದವರು ಹೇಳುತ್ತಾರೆ. ಸಾವರ್ಜನಿಕವಾಗಿ ನಮ್ಮ ವರ್ಚಸ್ಸಿಗೆ ಕಳಂಕ ತಂದ ಮಾಧ್ಯಮ ಸಂಸ್ಥೆಗಳು ಕ್ಷಮಾಪಣೆಯನ್ನು ಪಡೆದುಕೊಳ್ಳಲು ನಮಗೆ ಹಕ್ಕಿಲ್ಲವೇ’’ ಎಂದು ರಾಝಿಕ್ ಪ್ರಶ್ನಿಸುತ್ತಾರೆ.
ಘೋರ ಅನ್ಯಾಯ
 ತಾವು ಐದು ಮಂದಿ ಜಾಮೀನಿನಲ್ಲಿರುವಾಗ, ಕೇರಳದಲ್ಲಿ ಯಾವುದೇ ಭಯೋತ್ಪಾದಕ ಚಟುವಟಿಕೆ ವರದಿಯಾದರೂ, ನಮ್ಮನ್ನು ಬಲವಂತವಾಗಿ ಕಸ್ಟಡಿಗೆ ಕೊಂಡೊಯ್ಯುತ್ತಿದ್ದರು ಹಾಗೂ ತಾಸುಗಟ್ಟಲೆ ವಿಚಾರಣೆ ನಡೆಸುತ್ತಿದ್ದರು ಎಂದು ರಾಝಿಕ್ ಹೇಳುತ್ತಾರೆ.
2009ರಲ್ಲಿ ಎರ್ನಾಕುಲಂನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೈಪ್ ಬಾಂಬ್ ಸ್ಫೋಟ ನಡೆದಾಗ,, ಪೊಲೀಸರು ಮಧ್ಯರಾತ್ರಿಯಲ್ಲೇ ರಾಝಿಕ್‌ರ ಮನೆ ಮೇಲೆ ದಾಳಿ ನಡೆಸಿದರು. ‘‘ನಾನೊಬ್ಬ ಪಕ್ಕಾ ಕ್ರಿಮಿನಲ್ ಎಂಬ ಹಾಗೆ ನನ್ನನ್ನು ಮನೆಯಿಂದ ಎಳೆದೊಯ್ದರು ಹಾಗೂ ಹಲವಾರು ತಾಸುಗಳ ಕಾಲ ನನ್ನನ್ನು ಪ್ರಶ್ನಿಸಿದರು’’ ಎಂದವರು ನೆನಪಿಸುತ್ತಾರೆ.
ಕೋಝಿಕ್ಕೋಡ್‌ನಲ್ಲಿ ಕೆಲವು ಅಂಗಡಿಗಳಿಗೆ ಬೆಂಕಿ ಬಿದ್ದ ಘಟನೆಯ ಬಳಿಕ ನಿಝಾಮುದ್ದೀನ್‌ನನ್ನು ಪೊಲೀಸರು ಪ್ರಶ್ನಿಸಿದ್ದರು. ‘‘ ಅಗ್ನಿ ಅನಾಹುತದ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲವೆಂದು ಅವರಿಗೆ ತಿಳಿದಿತ್ತು ಹಾಗೂ ಶಾರ್ಟ್ ಸರ್ಕಿಟ್‌ನಿಂದಾಗಿಯೇ ಬೆಂಕಿತಗಲಿರುವುದು ಸ್ಪಷ್ಟವಾಗಿತ್ತು. ಆದಾಗ್ಯೂ ಅವರು ನನ್ನನ್ನು ಸಿಲುಕಿಸಲು ಯತ್ನಿಸಿದ್ದರೆಂದು’’ ಆತ ಹೇಳುತ್ತಾರೆ.
 ಜೈಲಿಗೆ ತಳ್ಳಲ್ಪಟ್ಟ ಬಳಿಕವೂ ನಮಗೆ ‘ಸ್ಪೆಶಲ್ ಟ್ರೀಟ್‌ಮೆಂಟ್’ ಮುಂದುವರಿದಿತ್ತು. ಯಾಕೆಂದರೆ ನಮ್ಮನ್ನು ಆಗಲೇ ಅಪಾಯಕಾರಿ ಭಯೋತ್ಪಾದಕರೆಂಬುದಾಗಿ ಬಿಂಬಿಸಲಾಗಿತ್ತು ಹಾಗೂ ನಮ್ಮ ವಿರುದ್ಧ ದೇಶದ್ರೋಹದ ಆರೋಪವನ್ನು ಹೊರಿಸಲಾಗಿತ್ತೆಂದು ರಾಝಿಕ್ ಹಾಗೂ ನಿಝಾಮುದ್ದೀನ್ ಹೇಳುತ್ತಾರೆ. ಜೈಲಿನಲ್ಲಿ ನಮ್ಮನ್ನು ಇತರ ಕೈದಿಗಳಿಗಿಂತ ಹೆಚ್ಚು ಕಠಿಣವಾಗಿ ನಡೆಸಿಕೊಳ್ಳಲಾಗುತ್ತಿತ್ತು. ‘‘ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳ ಅಪರಾಧಿಗಳು ತಮ್ಮ ಕುಟುಂಬಿಕರನ್ನು ಭೇಟಿಯಾಗಲು ಆಗಾಗ್ಗೆ ಪರೋಲ್ ಪಡೆದುಕೊಳ್ಳುತ್ತಿದ್ದರೆ, ನಮಗೆ ಒಮ್ಮೆಯೂ ಕೂಡಾ ಜೈಲಿನಿಂದ ಹೊರಬರಲು ಅನುಮತಿ ನೀಡಲಾಗುತ್ತಿರಲಿಲ್ಲ’’ ಎಂದು ರಾಝಿಕ್ ದೂರಿದ್ದಾರೆ. ‘‘ ಇದೊಂದು ಘೋರ ಅನ್ಯಾಯವಾಗಿದೆ. ಮೂರು ವರ್ಷ, ಐದು ತಿಂಗಳುಗಳ ಕಾಲ ನಾನು ಒಮ್ಮೆ ಕೂಡಾ ನನ್ನ ಮನೆಗೆ ಭೇಟಿ ನೀಡಿರಲಿಲ್ಲ’’ ಎಂದು ಅವರು ಹೇಳುತ್ತಾರೆ. ಆದಾಗ್ಯೂ ಜೈಲಿನಲ್ಲಿದ್ದ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಅವರು ಪ್ರಯತ್ನಿಸಿದ್ದರು. ರಾಝಿಕ್, ಜೈಲಿನ ಗ್ರಂಥಪಾಲನಾಗಿ ಕೆಲಸ ಮಾಡಿದ್ದರು ಹಾಗೂ ಜೈಲ್ ಮ್ಯಾಗಝಿನ್‌ನನ್ನು ಸಂಪಾದಿಸಲು ನೆರವಾಗಿದ್ದರು. ಅದರಲ್ಲಿ ಅವರು ಸ್ವಪ್ನಂ ಎಂಬ ಕವಿತೆಯನ್ನು ಕೂಡಾ ಬರೆದಿದ್ದರು. ‘‘ಜೈಲಿನ ಸಂಗೀತ ಬ್ಯಾಂಡ್ ಹಾಗೂ ಬಾನುಲಿ ನಿಲಯವನ್ನು ಸ್ಥಾಪಿಸುವಲ್ಲಿಯೂ ನಾನು ಪ್ರಮುಖ ಪಾತ್ರ ವಹಿಸಿದ್ದೆ’’ ಎಂದು ರಾಝಿಕ್ ಹೇಳುತ್ತಾರೆ. ಕಾರಾಗೃಹದೊಳಗೆ ನಡೆಯುವ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾನೇ ನಿರೂಪಕನಾಗಿರುತ್ತಿದ್ದೆ’’ ಎಂದವರು ಹೇಳುತ್ತಾರೆ.
ಜೈಲಿನಲ್ಲಿರುವಾಗಲೇ ಶಮ್ಮಾಸ್ ಸಮಾಜಶಾಸ್ತ್ರ ಹಾಗೂ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪೂರ್ತಿಗೊಳಿಸಿದ್ದರು. ಆಹಾರ ಹಾಗೂ ಪೌಷ್ಟಿಕತೆ ಕುರಿತಾಗಿ ಸರ್ಟಿಫಿಕೆಟ್ ಕೋರ್ಸ್ ಮಾಡಿದ್ದರು.
ನಿರಪರಾಧಿತ್ವ ಸಾಬೀತುಪಡಿಸಲು  ತೆರಬೇಕಾಯಿತು ದುಬಾರಿ ಬೆಲೆ
ರಾಝಿಕ್, ಶಮ್ಮಾಸ್ ಹಾಗೂ ನಿಝಾಮುದ್ದೀನ್ ಅವರು ಕಳೆದ 13 ವರ್ಷಗಳಲ್ಲಿ ತಾವು ನಿರಪರಾಧಿಗಳೆಂದು ಸಾಬೀತುಪಡಿಸಲು, ನ್ಯಾಯವಾದಿಗಳಿಗಾಗಿ ಭಾರೀ ಮೊತ್ತದ ಹಣವನ್ನೇ ವ್ಯಯಿಸಬೇಕಾಗಿಬಂತು. ‘ಅದೊಂದು ಮಾಡು ಇಲ್ಲವೇ ಮಡಿ’ ಎಂಬಂತಹ ಸನ್ನಿವೇಶವಾಗಿತ್ತು ಎಂದು ನಿಝಾಮುದ್ದೀನ್ ನೆನಪಿಸಿಕೊಳ್ಳುತ್ತಾರೆ.
‘‘ನಾನು ಹಣದ ಬಗ್ಗೆ ಹೆಚ್ಚಾಗಿ ಯೋಚಿಸಲಿಲ್ಲ. ನನಗೆ ನನ್ನ ನಿರ್ದೋಷಿತ್ವವನ್ನು ಸಾಬೀತುಪಡಿಸುವುದಷ್ಟೇ ಬೇಕಾಗಿತ್ತು. ಅದು ನನ್ನ ಅರ್ಥಿಕ ಪರಿಸ್ಥಿತಿಗೆ ಅಪಾರ ಹಾನಿ ಉಂಟು ಮಾಡಿತ್ತು’’ ಎಂದವರು ಹೇಳುತ್ತಾರೆ.
 ಎನ್‌ಐಎ ನ್ಯಾಯಾಲಯದ ತೀರ್ಪು ನಮಗೆ ಘೋರ ಆಘಾತವನ್ನುಂಟು ಮಾಡಿತ್ತು. ಈ ಕಾರಣಕ್ಕಾಗಿಯೇ ನಮ್ಮ ನಿರಪರಾಧಿತ್ವವನ್ನು ಸಾಬೀತುಪಡಿಸಲು ಅನುಭವಿ ನ್ಯಾಯವಾದಿಗಳನನ್ನು ನಾವು ನೇಮಿಸಿಕೊಂಡೆವು. ಅವರಿಗಾಗಿ ನಾವು ಬಹಳಷ್ಟು ಹಣ ಖರ್ಚು ಮಾಡಿದೆವು’’ ಎಂದು ರಾಝಿಕ್ ಹೇಳುತ್ತಾರೆ.
 ಕೃಪೆ: scroll.in

Writer - ಟಿ.ಎ. ಅಮೀರುದ್ದೀನ್

contributor

Editor - ಟಿ.ಎ. ಅಮೀರುದ್ದೀನ್

contributor

Similar News