ಮೂರನೇ ವಿಶ್ವಕಪ್ ಎತ್ತಿದ ಆಸ್ಟ್ರೇಲಿಯ: ಭಾರತಕ್ಕೆ ನಿರಾಸೆ

Update: 2019-05-19 18:42 GMT

ಎಂಟನೇ ಆವೃತ್ತಿಯ ವಿಶ್ವಕಪ್ 2003ರಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆಯಿತು. ಆದರೆ ತನ್ನ ನೆಲದಲ್ಲೂ ಬಲಿಷ್ಠ ದಕ್ಷಿಣ ಆಫ್ರಿಕ ತಂಡಕ್ಕೆ ಪ್ರಶಸ್ತಿ ಎತ್ತಲು ಸಾಧ್ಯವಾಗಲಿಲ್ಲ.

2003ರ ಫೆಬ್ರವರಿ 10ರಿಂದ ಮಾರ್ಚ್ 23ರ ತನಕ ನಡೆದ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ತನ್ನ ಕಪ್ ಗೆಲ್ಲುವ ಅಭಿಯಾನವನ್ನು ಮತ್ತೆ ಮುಂದುವರಿಸಿ, ಫೈನಲ್‌ನಲ್ಲಿ ಭಾರತವನ್ನು ಭಾರೀ ಅಂತರದಿಂದ ಮಣಿಸಿ ಮೂರನೇ ಬಾರಿ ವಿಶ್ವ ಚಾಂಪಿಯನ್ ಎನಿಸಿಕೊಂಡಿತು. ಈ ಮೊದಲು ಆಸ್ಟ್ರೇಲಿಯ 1987, 1999ರಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. ದಕ್ಷಿಣ ಆಫ್ರಿಕ, ಝಿಂಬಾಬ್ವೆ ಮತ್ತು ಕೀನ್ಯ ತಂಡಗಳು ಜಂಟಿ ಆತಿಥ್ಯ ವಹಿಸಿದ್ದ 8ನೇ ಆವೃತ್ತಿಯ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ 14 ತಂಡಗಳು ಭಾಗವಹಿಸಿದ್ದವು. ಎರಡು ಗುಂಪುಗಳಲ್ಲಿ ಈ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದ್ದವು. ಪ್ರತಿಯೊಂದು ಗುಂಪಿನ ಮೂರು ತಂಡಗಳು ಸೂಪರ್ ಸಿಕ್ಸ್‌ಗೆ ಏರುವ ಅವಕಾಶ ಪಡೆದಿದ್ದವು. ಆಡಲು ಬಹಿಷ್ಕಾರ ಮತ್ತು ಮಳೆಯ ಕಾರಣದಿಂದಾಗಿ ಕೆಲವು ತಂಡಗಳಿಗೆ ಪ್ರಶಸ್ತಿಯ ಸುತ್ತಿಗೆ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ.

ಆಸ್ಟ್ರೇಲಿಯ , ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಕೀನ್ಯ, ನ್ಯೂಝಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕ, ಶ್ರೀಲಂಕಾ, ವೆಸ್ಟ್ ಇಂಡೀಸ್, ಝಿಂಬಾಬ್ವೆ, ಕೆನಡಾ, ನಮೀಬಿಯ ಹಾಗೂ ಹಾಲೆಂಡ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು. ಟೂರ್ನಿಯಲ್ಲಿ ಒಟ್ಟು 54 ಪಂದ್ಯಗಳನ್ನು ಆಡಲಾಗಿತ್ತು.

  ಫೆ.9ರಂದು ಕೂಟದ ಮೊದಲ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕವನ್ನು ಚೊಚ್ಚಲ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ 3 ರನ್‌ಗಳಿಂದ ಮಣಿಸಿ ಕೂಟದಲ್ಲಿ ಶುಭಾರಂಭ ಮಾಡಿತ್ತು. ಬ್ರಿಯಾನ್ ಲಾರಾ ಶತಕ ಬಾರಿಸಿ ವಿಂಡೀಸ್‌ಗೆ ಗೆಲುವಿಗೆ ಕೊಡುಗೆ ನೀಡಿದ್ದರು. ಪ್ರಶಸ್ತಿ ಬಾಚಿಕೊಂಡ ಆಸ್ಟ್ರೇಲಿಯ ಮೊದಲ ಪಂದ್ಯ(ಫೆ.11)ದಲ್ಲಿ ಪಾಕಿಸ್ತಾನದ ವಿರುದ್ಧ 82 ರನ್‌ಗಳ ಜಯ ಸಾಧಿಸಿತ್ತು. ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದ ಭಾರತ 1983ರ ಬಳಿಕ ಮತ್ತೊಮ್ಮೆ ಫೈನಲ್‌ಗೇರಿತ್ತು.

  ಪ್ರತಿಭಟನೆ, ಬಹಿಷ್ಕಾರ, ಡ್ರಗ್ ನಿಷೇಧ, ಖ್ಯಾತ ಆಟಗಾರರ ವಿದಾಯ ಈ ವಿಶ್ವಕಪ್‌ನಲ್ಲಿ ಕಂಡು ಬಂತು.ಆಸ್ಟ್ರೇಲಿಯದ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಡ್ರಗ್ ಸೇವಿಸಿ ಸಿಕ್ಕಿ ಬಿದ್ದು, ಕೂಟದಿಂದ ಹೊರದಬ್ಬಲ್ಪಟ್ಟರು. ಇದು ಅವರ ಕ್ರಿಕೆಟ್ ಬದುಕಿಗೆ ಕೊನೆಯಾಯಿತು. ಅನಂತರ ಅವರಿಗೆ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವ ಅವಕಾಶ ಸಿಗಲಿಲ್ಲ. ಶೇನ್ ವಾರ್ನ್ ತಂಡದಿಂದ ಹೊರಗುಳಿದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯ ತಂಡದ ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ರಿಕಿ ಪಾಂಟಿಂಗ್ ನೇತೃತ್ವದ ಆಸೀಸ್ ತಂಡ ಕಠಿಣ ಪರಿಸ್ಥಿತಿಯಲ್ಲೂ, ಸೆಟೆದು ನಿಂತು ಹೋರಾಡಿ ಕಪ್ ಜಯಿಸಿತು. ಸ್ಫೋಟಕ ಬ್ಯಾಟ್ಸ್‌ಮನ್ ಆ್ಯಂಡ್ರೂ ಸೈಮಂಡ್ಸ್ ಮತ್ತು ಆಲ್‌ರೌಂಡರ್ ಆ್ಯಂಡಿ ಬಿಚೆಲ್ ತಂಡಕ್ಕೆ ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವಾದರು.

ಇಂಗ್ಲೆಂಡ್ ತಂಡ ಝಿಂಬಾಬ್ವೆ ಎದುರಿನ ಪಂದ್ಯವನ್ನು ಬಹಿಷ್ಕರಿಸಿತ್ತು, ರಾಜಕೀಯ ಮತ್ತು ಭದ್ರತೆಯ ಕಾರಣಕ್ಕಾಗಿ ನ್ಯೂರಿಲ್ಯಾಂಡ್ ತಂಡ ಕೀನ್ಯ ವಿರುದ್ಧದ ಪಂದ್ಯವನ್ನು ಆಡಲು ಹಿಂದೇಟು ಹಾಕಿತು. ಇದರ ಲಾಭ ಪಡೆದ ಝಿಂಬಾಬ್ವೆ ಮತ್ತು ಕೀನ್ಯ ಸೂಪರ್ ಹಂತಕ್ಕೆ ಪ್ರವೇಶ ಪಡೆಯಿತು. ಕೀನ್ಯ ತಂಡ ಸೆಮಿಫೈನಲ್‌ಗೆ ಏರಿ ಅಚ್ಚರಿ ಮೂಡಿಸಿದ್ದರೂ, ಭಾರತವನ್ನು ಮಾ.20ರಂದು ನಡೆದ ಸೆಮಿಫೈನಲ್‌ನಲ್ಲಿ ಮಣಿಸಲು ಸಾಧ್ಯವಾಗಲಿಲ್ಲ. ಭಾರತ 91 ರನ್ ಗಳ ಜಯ ದಾಖಲಿಸಿ ಸೆಮಿಫೈನಲ್‌ಗೇರಿತ್ತು.

ಆಸ್ಟ್ರೇಲಿಯ ಪ್ರಥಮ ಸೆಮಿಫೈನಲ್(ಮಾ.18)ನಲ್ಲಿ ಶ್ರೀಲಂಕಾ ವಿರುದ್ಧ ಡಕ್‌ವರ್ತ್‌ನಿಯಮದಡಿ 125 ರನ್‌ಗಳ ವಿಜಯ ಸಾಧಿಸಿತು.

► ಫೈನಲ್ ಸಮರ : ಜೋಹಾನ್ಸ್‌ಬರ್ಗ್‌ನಲ್ಲಿ ಮಾ.23ರಂದು ನಡೆದ ಫೈನಲ್‌ನಲ್ಲಿ ಟಾಸ್ ಗೆದ್ದ ಸೌರವ್ ಗಂಗುಲಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಇದರ ಲಾಭ ಪಡೆದ ಆಸ್ಟ್ರೇಲಿಯ ತಂಡದ ದಾಂಡಿಗರು ಭಾರತದ ಬೌಲರ್‌ಗಳ ಬೆವರಿಳಿಸಿ ನಿಗದಿತ 50 ಓವರ್‌ಗಳಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡು 359 ರನ್‌ಗಳನ್ನು ಕಲೆ ಹಾಕಿದರು. ಆರಂಭಿಕ ಬ್ಯಾಟ್ಸ್‌ಮನ್ ಗಿಲ್‌ಕ್ರಿಸ್ಟ್ (57) ಮತ್ತು ಹೇಡನ್ 37 ರನ್ ಬಾರಿಸಿ ಔಟಾದರು. ಅಷ್ಟು ಹೊತ್ತಿಗೆ ಆಸ್ಟ್ರೇಲಿಯ 19.5 ಓವರ್‌ಗಳಲ್ಲಿ 125 ರನ್‌ಗಳನ್ನು ಸಂಪಾದಿಸಿತ್ತು. ಮೂರನೇ ವಿಕೆಟ್‌ಗೆ ನಾಯಕ ರಿಕಿ ಪಾಂಟಿಂಗ್ (ಔಟಾಗದೆ 140) ಮತ್ತು ಡಾಮಿನಿನ್ ಮಾರ್ಟಿನ್ (ಔಟಾಗದೆ 88) ಮುರಿಯದ ಜೊತೆಯಾಟದಲ್ಲಿ 234 ರನ್‌ಗಳ ಕಾಣಿಕೆಯನ್ನು ನೀಡಿ ಭಾರತಕ್ಕೆ ಸುಲಭದಲ್ಲಿ ಬೆನ್ನಟ್ಟಲು ಸಾಧ್ಯವಾಗದ ರೀತಿಯಲ್ಲಿ ರನ್ ಕೂಡಿ ಹಾಕಿದರು. ಸ್ಪಿನ್ನರ್ ಹರ್ಭಜನ್ ಸಿಂಗ್ 49ಕ್ಕೆ 2 ವಿಕೆಟ್ ಗಳಿಸಿದ್ದು ಬಿಟ್ಟರೆ,ಇತರ ಬೌಲರ್‌ಗಳು ಕೈಸುಟ್ಟುಕೊಂಡರು.

  ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ್ದ ಭಾರತದ ಮೊತ್ತ ಕೇವಲ 4 ರನ್ ತಲುಪುವಷ್ಟರ ಹೊತ್ತಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್(4)ರನ್ನು ವೇಗಿ ಮೆಗ್ರಾತ್ ಪೆವಿಲಿಯನ್‌ಗೆ ಅಟ್ಟಿದರು. ಅನಂತರ ವೀರೇಂದ್ರ ಸೆಹ್ವಾಗ್ (82), ನಾಯಕ ಸೌರವ್ ಗಂಗುಲಿ(24), ರಾಹುಲ್ ದ್ರಾವಿಡ್ (47) ಮತ್ತು ಯುವರಾಜ್ ಸಿಂಗ್ (24) ಪ್ರಯತ್ನ ನಡೆಸಿದರೂ, ವೇಗಿ ಮೆಗ್ರಾತ್, ಬ್ರೆಟ್ ಲೀ ಮತ್ತು ಸೈಮಂಡ್ಸ್ ದಾಳಿಗೆ ತತ್ತರಿಸಿ 39.2 ಓವರ್‌ಗಳಲ್ಲಿ 234 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಭಾರತ 125 ರನ್‌ಗಳ ಸೋಲು ಅನುಭವಿಸಿ ವಿಶ್ವ ಚಾಂಪಿಯನ್‌ಗೇರುವ ಅವಕಾಶವನ್ನು ಕಳೆದುಕೊಂಡಿತ್ತು.

ರಿಕಿ ಪಾಂಟಿಂಗ್ (ಆಸ್ಟ್ರೇಲಿಯ) ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಮತ್ತು ಸಚಿನ್ ತೆಂಡುಲ್ಕರ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹಂಚಿಕೊಂಡರು. ಸಚಿನ್ ತೆಂಡುಲ್ಕರ್ ಈ ಟೂರ್ನಮೆಂಟ್‌ನಲ್ಲಿ ಗರಿಷ್ಠ ರನ್(673) ಮತ್ತು ಶ್ರೀಲಂಕಾದ ಚಾಮಿಂಡ ವಾಸ್ ಸರಣಿಯಲ್ಲಿ ಗರಿಷ್ಠ (23) ವಿಕೆಟ್‌ಗಳನ್ನು ಕಬಳಿಸಿದ್ದರು.

 ಈ ವಿಶ್ವಕಪ್ ಮುಗಿದ ಬೆನ್ನಲ್ಲೇ ದಕ್ಷಿಣ ಆಫ್ರಿಕದ ಜಾಂಟಿ ರೋಡ್ಸ್, ಆ್ಯಲನ್ ಡೊನಾಲ್ಡ್ ಮತ್ತು ಗ್ಯಾರಿ ಕರ್ಸ್ಟನ್ ,ಪಾಕಿಸ್ತಾನದ ಬೌಲರ್ ವಸೀಮ್ ಅಕ್ರಮ್ ಮತ್ತು ಶ್ರೀಲಂಕಾದ ಬ್ಯಾಟ್ಸ್‌ಮನ್ ಅರವಿಂದ ಡಿ‘ಸಿಲ್ವ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News