ಕನ್ನಡ ಸಾಹಿತ್ಯಕ್ಕೆ ಹೃದಯ ವೈಶಾಲ್ಯತೆಯಿದೆ: ವಿಮರ್ಶಕ ಕೆ.ವೈ.ನಾರಾಯಣಸ್ವಾಮಿ

Update: 2019-05-20 16:47 GMT

ಬೆಂಗಳೂರು, ಮೇ 20: ಕನ್ನಡ ಸಾಹಿತ್ಯಕ್ಕೆ ಹೃದಯ ಸಂಸ್ಕಾರದ ವೈಶಾಲ್ಯ ಭಾವನೆಯಿದ್ದು, ಅದರ ಮೂಲಕ ಸಮಾಜವನ್ನು ಮುನ್ನಡೆಸಬಹುದು ಎಂದು ವಿಮರ್ಶಕ ಕೆ.ವೈ.ನಾರಾಯಣಸ್ವಾಮಿ ಅವರು ಹೇಳಿದರು.

ಸೋಮವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಕನ್ನಡ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ವಿಶೇಷ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಕನ್ನಡ ಸಾಹಿತ್ಯ ಪರಂಪರೆಯು ದಮನಿತರು ಮತ್ತು ಹೆಣ್ಣು ಮಕ್ಕಳನ್ನು ಮುನ್ನಲೆಗೆ ತಂದಿದ್ದು, ವಿದ್ಯಾರ್ಥಿಗಳು ಬೇರೆ ಬೇರೆ ದೇಶದ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ಆಗ ಹೆಚ್ಚು ತಿಳಿಯಲು ಸಾಧ್ಯ ಎಂದು ಸಲಹೆ ನೀಡಿದರು.

ಶೈಕ್ಷಣಿಕ ಸಾಹಿತ್ಯವನ್ನು ಬಿಟ್ಟು ಹೊರಗಡೆ ಬಂದು ಇಡೀ ಕನ್ನಡ ಸಾಹಿತ್ಯವನ್ನು ಓದಿ. ಸಾಹಿತ್ಯ ಸುಡುಗಾಡು ಅಲ್ಲ, ಅದು ಹಸಿ ಮಣ್ಣುನಂತೆ ಹೊಸ ಜೀವ ಸೃಷ್ಟಿಗೆ ಕಾರಣವಾಗುತ್ತದೆ. ಅಲ್ಲದೆ, ಕತ್ತೆಯಂತೆ ಕನ್ನಡ ಸಾಹಿತ್ಯ ಅಭ್ಯಾಸಿಗಳು ಇರಬೇಕು. ಕತ್ತೆ ತನ್ನ ಮೇಲೆ ಹೊರಿಸಿದೆಲ್ಲವನ್ನೂ ಹೊರುತ್ತದೆ. ಅದೇ ರೀತಿ ಸಾಹಿತ್ಯದ ವಿದ್ಯಾರ್ಥಿಗಳು ತಮಗೆ ಸಿಕ್ಕ ಎಲ್ಲ ಪುಸ್ತಕ, ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಇದರಿಂದ ಕನ್ನಡ ಸಾಹಿತ್ಯ ಪರಂಪರೆಯನ್ನು ಉಳಿಸಬಹುದು ಎಂದು ಹೇಳಿದರು.

ಸಾಹಿತಿ ಎಚ್.ದಂಡಪ್ಪ ಶಿವರಾಮ ಕಾರಂತರ ಬದುಕು-ಬರಹದ ಬಗ್ಗೆ ಮಾತನಾಡಿ, ಕಾರಂತರು ಯಾವುದೇ ಸಂಪ್ರದಾಯ, ಕಟ್ಟುಪಾಡುಗಳಿಗೆ ಕಟ್ಟುಬಿದ್ದವರಲ್ಲ. ಅವರು ಪರಂಪರೆ ನೆರಳಿನಲ್ಲಿ ಹೊಸದನ್ನು ಹೇಳಹೊರಟವರು. ಸಂಪ್ರದಾಯ ಮತ್ತು ಪರಂಪರೆಗೆ ಬಹಳ ವ್ಯತ್ಯಾಸವಿದೆ. ಸಂಪ್ರದಾಯ ಜಡವಾದುದು. ಪರಂಪರೆ ಹರಿಯುವ ನೀರಿನಂತೆ ಎಂದರು.

ಅವರ ಅನುಭವಗಳು ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿದ್ದು, ಅದನ್ನು ಸಾರಾಸಗಟಾಗಿ ಬರೆಯುತ್ತಿರಲಿಲ್ಲ. ತಮ್ಮ ವಿವೇಚನೆಗೆ ತೆಗೆದುಕೊಂಡು ಜನರಿಗೆ ಮುಟ್ಟಿಸುವಂತೆ ಕೃತಿಗಳನ್ನು ರಚಿಸಿದ್ದಾರೆ. ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಕಲೆ, ಜ್ಞಾನ, ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಪತ್ರಕರ್ತರು ಆಗಿ ಎಲ್ಲದರ ಬಗ್ಗೆ ಲೇಖನಗಳನ್ನು ರಚಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ್, ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ರಾಜಶೇಖರ ಹತಗುಂದಿ ಮತ್ತಿತರರು ಇದ್ದರು.

ಸಾಹಿತ್ಯ ಪ್ರಪಂಚದ ಅದ್ಭುತಗಳಲ್ಲಿ ವಚನವೂ ಒಂದಾಗಿದ್ದು, ಅನಕ್ಷರಸ್ಥರು, ಮಹಿಳೆಯರು ವಚನಗಳನ್ನು ರಚಿಸುವ ಮೂಲಕ ಎಲ್ಲ ಭಾಷೆಗಳು ಅಸೂಯೆ ಪಡುವಂತೆ ಮಾಡಿದ್ದಾರೆ.

-ಕೆ.ವೈ.ನಾರಾಯಣಸ್ವಾಮಿ, ವಿಮರ್ಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News