ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಹೈಕೋರ್ಟ್ ತಡೆ

Update: 2019-05-20 16:50 GMT

ಬೆಂಗಳೂರು, ಮೇ 20: ಬೆಂಗಳೂರು ನಗರದಲ್ಲಿ ವಾಹನ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದ ವಿವಾದಾತ್ಮಕ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಯೋಜನೆಗೆ ಹೈಕೋರ್ಟ್ ತಡೆಯೊಡ್ಡಿದೆ.

ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಮೇಕ್ರಿ ಸರ್ಕಲ್ ಮಾರ್ಗವಾಗಿ ಸಿಲ್ಕ್‌ಬೊರ್ಡ್‌ವರೆಗೆ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ಸರಕಾರ ಟೆಂಡರ್ ಕರೆದಿದೆ. ಯೋಜನೆಗೆ ಕರೆದಿರುವ ಟೆಂಡರ್ ಸರಕಾರ ಅಂತಿಮಗೊಳಿಸುವಂತಿಲ್ಲ. ಒಂದು ವೇಳೆ ಅಂತಿಮಗೊಳಿಸಿದರೂ ಮುಂದಿನ ವಿಚಾರಣೆವರೆಗೆ ಯಾವುದೇ ಕಾಮಗಾರಿಯನ್ನು ಕೈಗೆತ್ತಿಗೊಳ್ಳುವಂತಿಲ್ಲ ಎಂದು ನ್ಯಾಯಪೀಠ ಮಧ್ಯಂತರ ಆದೇಶ ನೀಡಿದೆ.

ನಮ್ಮ ಬೆಂಗಳೂರು ಫೌಂಡೇಷನ್ ಮತ್ತು ಸಿಟಿಜನ್ ಆ್ಯಕ್ಷನ್ ಫೋರಂ ಮತ್ತಿತರ ಸಂಸ್ಥೆಗಳು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಆಲಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿ ವಿಚಾರಣೆಯನ್ನು ಜೂ.3ಕ್ಕೆ ಮುಂದೂಡಿದೆ.

ಅರ್ಜಿದಾರರ ಪರ ವಕೀಲ ಬಿ.ಎನ್.ಹರೀಶ್ ಅವರು, ಬೆಂಗಳೂರು ಮಹಾನಗರ ಯೋಜನಾ ಸಮಿತಿ(ಬಿಎಂಪಿಸಿ) ರಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್‌ನ ವಿಭಾಗೀಯ ಪೀಠ 2017ರ ಅ.16ರಂದೇ ಈ ವಿಷಯದಲ್ಲಿ ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು ಎಂದು ಮಧ್ಯಂತರ ಆದೇಶ ನೀಡಿದೆ. ಆದರೆ, ಸರಕಾರ ಮೇಲುಸೇತುವೆ ಸೇರಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಟೆಂಡರ್ ಕರೆದು, ಅವುಗಳನ್ನು ಅಂತಿಮಗೊಳಿಸುವ ಸಿದ್ಧತೆಯಲ್ಲಿದೆ ಎಂದರು. ಆಗ ಕೋರ್ಟ್ ಆ ಬಗ್ಗೆ ಪ್ರಶ್ನಿಸಿದಾಗ ಸರಕಾರಿ ವಕೀಲ ಡಿ.ನಾಗರಾಜ್, ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಮಧ್ಯಂತರ ಆದೇಶ ನೀಡುವ ಮುನ್ನವೇ ಟೆಂಡರ್ ಕರೆಯಲಾಗಿತ್ತು ಎಂದು ಉತ್ತರಿಸಿದರು. ಆಗ ನ್ಯಾಯಪೀಠ, ಹಾಗಿದ್ದರೆ ಮುಂದಿನ ವಿಚಾರಣೆವರೆಗೆ ಯಾವುದೇ ಕಾಮಗಾರಿ ಕೈಗೊಳ್ಳಬಾರದೆಂದು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News