ಕೇಂದ್ರ ಸರಕಾರದ ಯೋಜನೆ ಹೆಸರಿನಲ್ಲಿ ಕೋಟ್ಯಾಂತರ ರೂ. ವಂಚನೆ !

Update: 2019-05-20 17:02 GMT

ಬೆಂಗಳೂರು, ಮೇ 20: ಉನ್ನತ ಮಟ್ಟದ ಹಿರಿಯ ಐಎಎಸ್ ಅಧಿಕಾರಿಗಳ ಪರಿಚಯವಿದೆ ಎಂದು ನಂಬಿಸಿರುವ ವಂಚಕನೋರ್ವ ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಯೋಜನೆ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸುವುದಾಗಿ ನಂಬಿಸಿ 15ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಪ್ರಕರಣವೊಂದು ತಡವಾಗಿ ತಿಳಿದುಬಂದಿದೆ.

ಪೀಣ್ಯ ನಿವಾಸಿ ವಿನಯ್ ಎಂಬಾತ ಡಿಜಿಟಲ್ ಇಂಡಿಯಾ ಯೋಜನೆ ಅಡಿ ಹಲವು ಪ್ರಾಜೆಕ್ಟ್‌ಗಳಿವೆ. ಹಣ ಹೂಡಿಕೆ ಮಾಡಿಸುವುದಾಗಿ ನಂಬಿಸಿ ಸುಮಾರು 15 ಜನರಿಂದ 10 ಕೋಟಿ ರೂ. ಅಧಿಕ ಹಣ ಪಡೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಗೆ ಆತನ ಪತ್ನಿ ಸಹಕರಿಸಿದ್ದಾಳೆ ಎನ್ನಲಾಗಿದ್ದು, ಈ ಸಂಬಂಧ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿರುವ ವಂಚನೆಗೆ ಒಳಗಾದ 15ಕ್ಕೂ ಹೆಚ್ಚು ಜನರು ಕೋಡಿಗೆಹಳ್ಳಿ ಮತ್ತು ಹೈಗ್ರೌಂಡ್ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿದ್ದಾರೆ.

ಆರೋಪಿ ವಿನಯ್ ತನಗೆ ಸರಕಾರದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಪರಿಚಯವಿದೆ ಎಂದು ಹೇಳಿಕೊಳ್ಳುತ್ತಿದ್ದ. ಐಎಎಸ್ ಅಧಿಕಾರಿಗಳ ಹೆಸರಿನಲ್ಲಿ ಅನ್ಯರ ನಕಲಿ ಮೊಬೈಲ್ ನಂಬರ್‌ಗಳನ್ನು ಇಟ್ಟುಕೊಂಡಿದ್ದ. ಅಧಿಕಾರಿಗಳ ಜೊತೆ ಸಂಭಾಷಣೆ ನಡೆಸುವ ರೀತಿ ವರ್ತಿಸಿ, ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ಸಾಕಷ್ಟು ಪ್ರಾಜೆಕ್ಟ್‌ಗಳಿವೆ. ಹಣ ಹೂಡಿದರೆ ದುಪ್ಪಟ್ಟು ಲಾಭ ಸಿಗುತ್ತದೆ ಎಂದು ಹೇಳಿ ಹಣ ಪಡೆದು ಯಾಮಾರಿಸಿದ್ದಾನೆ. ಈ ಸಂಬಂಧ ಪ್ರಕರಣ ಕೈಗೆತ್ತಿಕೊಂಡಿರುವ ಸಿಸಿಬಿ ವಿಭಾಗದ ಪೊಲೀಸರು ಡಿಸಿಪಿ ಗಿರೀಶ್ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News