ಚುನಾವಣಾ ಅಕ್ರಮಗಳ ಬಗ್ಗೆ ಮಾಹಿತಿ ನೀಡದಿದ್ದರೆ ಮತ ಎಣಿಕೆ ಬಹಿಷ್ಕಾರ: ಪಕ್ಷೇತರ ಅಭ್ಯರ್ಥಿ ಹನುಮೇಗೌಡ ಎಚ್ಚರಿಕೆ

Update: 2019-05-20 17:05 GMT

ಬೆಂಗಳೂರು, ಮೇ 20: ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಕೂಡಲೇ ಮಾಹಿತಿ ನೀಡದಿದ್ದರೆ ಕೋರ್ಟ್ ಮೆಟ್ಟಿಲೇರುವುದಲ್ಲದೆ, ಮೇ 23ರ ಮತ ಎಣಿಕೆ ಕಾರ್ಯವನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೂ ಆಗಿರುವ ಆರೆಸೆಸ್ಸ್ ಮಾಜಿ ಪ್ರಚಾರಕ ಎನ್.ಹನುಮೇಗೌಡ, ಚುನಾವಣಾ ಆಯೋಗಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅಪೂರ್ಣ ನಾಮಪತ್ರ ಸ್ವೀಕಾರ ಸಂಬಂಧ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಸೂಕ್ತ ಪರಿಹಾರ ನೀಡಿಲ್ಲ. ಕೆಲ ಮಾಹಿತಿಗಳನ್ನು ನೀಡಿದರೂ ಅದನ್ನು ಅಧಿಕೃತವಾಗಿ ಸಕಾಲದಲ್ಲಿ ನೀಡಿಲ್ಲ. ಹೀಗಾಗಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಯ ಬಗ್ಗೆ ಸಂಶಯವಿದೆ ಎಂದು ಹನುಮೇಗೌಡ ಸಂಶಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳಿಗೆ ಸಂಬಂಧಪಟ್ಟಂತೆ ಈವರೆಗೂ ಬಂದ ದೂರುಗಳೆಷ್ಟು, ಮಾಡಿದ ದಾಳಿಗಳೆಷ್ಟು, ಅದು ಯಾರಿಗೆ ಮತ್ತು ಯಾವ ಪಕ್ಷಕ್ಕೆ ಸೇರಿದ್ದು, ಅಲ್ಲದೆ, ದಾಳಿ ವೇಳೆ ಸಿಕ್ಕ ಹಣ ಮತ್ತು ವಸ್ತುಗಳ ಹಾಗೂ ನೋಟಿಸ್, ಎಫ್‌ಐಆರ್ ದಾಖಲಿಸಿರುವ ಬಗ್ಗೆ ನಕಲು ಪ್ರತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಕಾಲದಲ್ಲಿ ಮೇಲೆ ಕೋರಿರುವ ಎಲ್ಲ ಮಾಹಿತಿಗಳನ್ನು ಚುನಾವಣಾಧಿಕಾರಿಗಳು ಒದಗಿಸದಿದ್ದರೆ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಿಲ್ಲ ಎಂಬ ನಮ್ಮ ಸಂಶಯಗಳ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ ಎಂದು ಹನುಮೇಗೌಡ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್‌ಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News