ವಂಚನೆ ಪ್ರಕರಣ: ಮೇ 23ರ ಬಳಿಕ ವಿಚಾರಣೆಗೆ ಹಾಜರಾಗಲು ನಟ ರಜನಿಕಾಂತ್ ಪತ್ನಿಗೆ ಸೂಚನೆ

Update: 2019-05-20 17:07 GMT

ಬೆಂಗಳೂರು, ಮೇ 20: ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಟ ರಜನಿಕಾಂತ್ ಪತ್ನಿ ಲತಾ ಅವರು ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೋರಿದ್ದರಿಂದ ಹಲಸೂರುಗೇಟ್ ಪೊಲೀಸರು ಮೇ 23ರ ಬಳಿಕ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.

ರಜನಿಕಾಂತ್ ಅಭಿನಯದ ಕೊಚಾಡಿಯನ್ ಚಿತ್ರದ ಜಾಹೀರಾತು ಪ್ರಕಟಿಸಲು ಒಪ್ಪಂದ ಮಾಡಿಕೊಂಡಿದ್ದ ಕಂಪೆನಿಗೆ ನೀಡುವ ಸಂಭಾವನೆಯಲ್ಲಿ ನಟ ರಜನಿಕಾಂತ್ ಪತ್ನಿ ಲತಾ ಅವರು ಒಪ್ಪಂದಕ್ಕಿಂತ ಕಡಿಮೆ ಹಣ ಸಂದಾಯ ಮಾಡಿದ್ದರು. ಹೀಗಾಗಿ, ಹಲಸೂರುಗೇಟ್ ಪೊಲೀಸರು ಲತಾ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು. ಆದರೆ, ಲತಾ ಅವರು ನಾನು ಪ್ರವಾಸದಲ್ಲಿರುವುದರಿಂದ ತಾವು ಸೂಚಿಸಿದ ದಿನಾಂಕದಂದು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಹೀಗಾಗಿ, ಸಮಯಾವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರಿಂದ ಹಲಸೂರುಗೇಟ್ ಪೊಲೀಸರು ಮೇ 23ರ ಬಳಿಕ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ.

ಜಾಹೀರಾತು ಕಂಪೆನಿಯ ವಿಚಾರದಲ್ಲಿ ಒಪ್ಪಂದಕ್ಕಿಂತ ಕಡಿಮೆ ಹಣ ಸಂದಾಯವಾಗುತ್ತಿದ್ದಂತೆಯೇ ಚೈನ್ನೈ ಮೂಲದ ಅಭಿಚಂದ್ ನಾಹರ್ ಅವರ ಆ್ಯಡ್ ಬ್ಯೂರೋ ಅಡ್ವಟೈಸಿಂಗ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯವರು 2015ರಲ್ಲಿ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದರು. ಕೋರ್ಟ್ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಹಲಸೂರು ಗೇಟ್ ಪೊಲೀಸರು ಮೇ 20ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಆದರೆ, ಲತಾ ಅವರು ಸಮಯಾವಕಾಶ ಕೋರಿದ್ದರಿಂದ ಮೇ 23ರ ಬಳಿಕ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News