ಯಾರ ತಪ್ಪಿಗೆ ಯಾರಿಗೆ ಶಿಕ್ಷೆ?

Update: 2019-05-21 18:50 GMT

ಭಯೋತ್ಪಾದಕರಿಗೆ ಹಣಕಾಸು ಬೆಂಬಲ ಹಾಗೂ ಆಶ್ರಯ ನೀಡುವ ಇತರ ದೇಶಗಳೂ ಇವೆ ಎಂದು ಜಾಗತಿಕ ಸಮುದಾಯ ಹೇಳುತ್ತಿರುವಾಗ, ಅಮೆರಿಕ ಮಾತ್ರ ಯಾಕೆ ಭಯೋತ್ಪಾದನೆಗೆ ಸರಕಾರದ ನೆರವು ನೀಡುತ್ತಿರುವ ರಾಷ್ಟ್ರಗಳಲ್ಲಿ ಇರಾನ್ ಅತ್ಯಂತ ದೊಡ್ಡ ಅಪರಾಧಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ? ಪಾಕಿಸ್ತಾನ ಅದರ ಕಣ್ಣಿಗೆ ಕಾಣಿಸುವುದಿಲ್ಲವೇ? ಇಂತಹ ಜಾಗತಿಕ ರಾಜಕೀಯ ‘ತಮಾಷಾ’ದ ವಾತಾವರಣದಲ್ಲಿ ಭಯೋತ್ಪಾದನೆಯ ವಿರುದ್ಧ ನಡೆಯುವ ಜಾಗತಿಕ ಸಮರ ಎಷ್ಟರ ಮಟ್ಟಿಗೆ ಯಶಸ್ವಿಯಾದೀತು? ಆಗದಿದ್ದರೆ ಆಗ ವಿಶ್ವದ ಶಾಂತಿಪ್ರಿಯ ಬಹುಸಂಖ್ಯಾತರ ಪಾಡೇನು? ಯಾವ ರಾಷ್ಟ್ರದ ಯಾವ ರಾಜಕೀಯ ತಪ್ಪು ನೀತಿಗಾಗಿ ಯಾವುದೋ ಒಂದು ದೇಶದ ಅಮಾಯಕರು ಬಲಿಯಾಗಬೇಕೇ? ಯಾರ ತಪ್ಪಿಗೆ ಯಾರಿಗೆ ಶಿಕ್ಷೆ?

‘‘ಭಯ, ಬಲತ್ಕಾರ ಅಥವಾ ಬೆದರಿಕೆ ಹಾಕುವ ಮೂಲಕ ಒಂದು ರಾಜಕೀಯ, ಆರ್ಥಿಕ, ಧಾರ್ಮಿಕ ಅಥವಾ ಸಾಮಾಜಿಕ ಗುರಿಯನ್ನು ಸಾಧಿಸಲು ಸರಕಾರವಲ್ಲದ ಒಂದು ವ್ಯಕ್ತಿ/ಗುಂಪು (Actor) ಅಕ್ರಮವಾದ ಪಡೆ ಮತ್ತು ಹಿಂಸೆಯನ್ನು ಬಳಸುವುದಾಗಿ ಬೆದರಿಕೆ ಹಾಕುವುದು ಅಥವಾ ನಿಜವಾಗಿ ಬಳಸುವುದು.’’

 ಇದು ಒಂದು ಖಾಸಗಿ ಭದ್ರತಾ ಏಜನ್ಸಿಯಾಗಿರುವ ಪಿಂಕರ್ಟನ್ ಗ್ಲೋಬಲ್ ಇಂಟಲಿಜನ್ಸ್ ಸರ್ವಿಸ್, ಭಯೋತ್ಪಾ ದನೆಗೆ ನೀಡಿರುವ ವ್ಯಾಖ್ಯಾನ. ಅಮೆರಿಕ ಈ ವ್ಯಾಖ್ಯಾನಕ್ಕೆ ಅನುಗುಣವಾಗಿ ಒಂದು ಕೃತ್ಯ ಭಯೋತ್ಪಾದನೆ ಹೌದೋ? ಅಲ್ಲವೋ? ಎಂದು ನಿರ್ಧರಿಸುತ್ತದೆ.

 ಈ ವ್ಯಾಖ್ಯಾನದ ಹಿನ್ನೆಲೆಯಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿ ಪ್ರತಿ ಬಾರಿ ಒಂದು ಭಯೋತ್ಪಾದಕ ದಾಳಿ ನಡೆದಾಗಲೂ ಭಯೋತ್ಪಾದನೆಯ ವಿರುದ್ಧ ರಾಷ್ಟ್ರಗಳ ಮುಖಂಡರಿಂದ ಖಂಡನೆ ವ್ಯಕ್ತವಾಗುತ್ತದೆ. ಭಯೋತ್ಪಾದಕರ ಹುಟ್ಟಡಗಿಸದೆ ಬಿಡುವುದಿಲ್ಲ; ಅವರನ್ನು ನಿರ್ಮೂಲನ ಮಾಡುತ್ತೇವೆ; ಅವರ ಅಡಗುದಾಣಗಳನ್ನು ಧ್ವಂಸ ಮಾಡುತ್ತೇವೆ; ಅವರನ್ನು ಭಸ್ಮಮಾಡುತ್ತೇವೆ ಎಂಬ ವೀರಾವೇಶದ ಮಾತುಗಳು ಕೇಳಿಬರುತ್ತವೆ. ವಿಶ್ವದ ಬಲಿಷ್ಠ ರಾಷ್ಟ್ರಗಳು, ‘ದೊಡ್ಡ ಅಣ್ಣ’ ಅಮೆರಿಕದ ನೇತೃತ್ವದಲ್ಲಿ ಮೈತ್ರಿ ಮಾಡಿಕೊಂಡು ಭಯೋತ್ಪಾದನೆಯ ವಿರುದ್ಧ ಜಾಗತಿಕ ಸಮರ ಸಾರುತ್ತವೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಭಯೋತ್ಪಾದಕರ ವಿರುದ್ಧ ಇಂತಹ ಸಮರಕ್ಕಾಗಿ ಸುಮಾರು ರಾಷ್ಟ್ರಗಳ ಮೈತ್ರಿಕೂಟ ರೂಪುಗೊಂಡಿತ್ತು. ಇಷ್ಟರವರೆಗೆ ಇಂತಹ ಹಲವು ಮೈತ್ರಿಕೂಟಗಳು ಭಯೋತ್ಪಾದನೆಯ ವಿರುದ್ಧ ಯುದ್ಧ ಮಾಡಿವೆ. 2001ರಲ್ಲಿ ವಿಶ್ವವಾಣಿಜ್ಯ ಕೇಂದ್ರದ ಮೇಲೆ ಅಲ್‌ಖಾಯಿದಾ ನಡೆಸಿದ ದಾಳಿಯ ವಿರುದ್ಧ ‘ಜಾಗತಿಕ ಯುದ್ಧ’ ಘೋಷಿಸಿದ ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲೂ ಬುಶ್, ‘‘ಪ್ರತಿಯೊಂದು ಭೂ ಪ್ರದೇಶದಲ್ಲಿ, ಪ್ರತಿಯೊಂದು ರಾಷ್ಟ್ರವೂ, ಈಗ ಒಂದು ನಿರ್ಧಾರ ಮಾಡಬೇಕಾಗಿದೆ. ಒಂದೋ ನೀವು ನಮ್ಮ ಜೊತೆ ಇರುತ್ತೀರಿ ಅಥವಾ ನೀವು ಭಯೋತ್ಪಾದಕರ ಜೊತೆ ಇರುತ್ತೀರಿ’’ಎಂದಿದ್ದರು.

 ಬುಶ್ ‘‘ನಮ್ಮ ಜೊತೆ’’ಎಂದಾಗ ಎಲ್ಲ ರಾಷ್ಟ್ರಗಳೂ ‘‘ನಾವು ನಿಮ್ಮ ಜೊತೆಯೇ’’ ಇದ್ದೇವೆ ಎಂದವು. ಅಮೆರಿಕ ಭಯೋತ್ಪಾದನೆಯ ವಿರುದ್ಧ ಹೂಡಿದ ಯುದ್ಧಕ್ಕೆ ಬೆಂಬಲ ನೀಡಿದವು. ಆದರೆ ಸ್ವತಃ ಅಮೆರಿಕದ ನಿಲುವು ವಿರೋಧಾಭಾಸದಿಂದ ಕೂಡಿತ್ತು: ಅಫ್ಘಾನಿಸ್ತಾನದಲ್ಲಿ ಅಲ್‌ಖಾಯಿದಾದ ಹುಟ್ಟಡಗಿಸಲು ಭಾರೀ ಪ್ರಮಾಣದ ಮಿಲಿಟರಿ ಕಾರ್ಯಾಚರಣೆ ಕೈಗೊಂಡ ಅಮೆರಿಕ ಪಾಕಿಸ್ತಾನದ ವಿಷಯದಲ್ಲಿ ಮೃದು ಧೋರಣೆ ತಳೆಯಿತು. ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡಿದೆ; ಅದು ತನ್ನ ದೇಶದ ಒಳಗೇ ಇರುವ ಭಯೋತ್ಪಾದಕರ ಅಡಗುದಾಣಗಳನ್ನು ನಾಶ ಮಾಡಲು ಸಿದ್ಧವಿಲ್ಲ ಎಂದು ಜಗತ್ತು ಕೂಗಿ ಹೇಳಿದಾಗ ಅಮೆರಿಕ ಅಫ್ಘಾನಿಸ್ತಾನದ ಮೇಲೆ ನಡೆಸಿದಂತಹ ದಾಳಿಯನ್ನು ಪಾಕಿಸ್ತಾನದ ವಿರುದ್ಧವೂ ನಡೆಸಲಿಲ್ಲ? ಎಂಬ ಪ್ರಶ್ನೆಗೆ ಸೂಕ್ತ ಉತ್ತರ ದೊರಕಲಿಲ್ಲ; ಈಗಲೂ ದೊರಕುತ್ತಿಲ್ಲ. ಅಮೆರಿಕದ ಈ ಇಬ್ಬಗೆಯ ನೀತಿ ಭಯೋತ್ಪಾದಕ ಸಂಘಟನೆಗಳಿಗೆ ಒಂದು ವರವಾಗಿ ಪರಿಣಮಿಸುವುದಿಲ್ಲವೇ? ಆದರೆ ‘ಬಿಗ್ ಬ್ರದರ್’ನ ಎದುರು ನಿಂತು ಈ ಪ್ರಶ್ನೆ ಕೇಳುವ ಧೈರ್ಯ ಯಾರಿಗಿದೆ?

2003ರಲ್ಲಿ ಇರಾಕ್‌ನಲ್ಲಿ ಸದ್ದಾಂ ಹುಸೈನ್‌ರನ್ನು ಪದಚ್ಯುತಗೊಳಿಸಲು 46 ರಾಷ್ಟ್ರಗಳ ಮೈತ್ರಿಕೂಟ ಮತ್ತು 2011ರಲ್ಲಿ ಲಿಬಿಯಾದಲ್ಲಿ ಗದ್ದಾಫಿಯನ್ನು ಮಣಿಸಲು 19 ರಾಷ್ಟ್ರಗಳ ಮೈತ್ರಿಕೂಟ ಇತ್ಯಾದಿ ಪ್ರಯತ್ನಗಳ ಹೊರತಾಗಿಯೂ ಈ ಜಾಗತಿಕ ಸಮರದಲ್ಲಿ ಗೆದ್ದವರು ಯಾರು? ಸೋತವರು ಯಾರು? ಈ ಸೋಲು ಗೆಲುವುಗಳ ಲೆಕ್ಕಾಚಾರದ ಮಧ್ಯೆ ಪುಲ್ವಾಮದಲ್ಲಿ ಮತ್ತು ಶ್ರೀಲಂಕಾದಲ್ಲಿ ಅಮಾನವೀಯವಾದ, ಬರ್ಬರ ದಾಳಿಗಳು ನಡೆದು ಹೋದವಲ್ಲ? ಹಾಗಾದರೆ ಇದು ಮುಗಿಯದ ಯುದ್ಧವೇ? ಇವುಗಳು ಅಮಾಯಕ ಜೀವಗಳು ಬಲಿಯಾಗುತ್ತಲೇ ಇರಬೇಕಾದ 21ನೇ ಶತಮಾನದ ಅಂತ್ಯವಿಲ್ಲದ ‘ಅನಾಹುತ’ಗಳೇ?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೊರಟರೆ ದಿಗಿಲುಗೊಳಿಸುವ ಸಂಗತಿಗಳು ಎದುರಾಗುತ್ತವೆ. ಅಫ್ಘಾನಿಸ್ತಾನದ ವಿರುದ್ಧ 60 ರಾಷ್ಟ್ರಗಳ ಮೈತ್ರಿಕೂಟ ರಚಿಸಿಕೊಂಡು ಯುದ್ಧ ಮಾಡಿದ ಅಮೆರಿಕ, ತಾನು ಯಾವ ತಾಲಿಬಾನ್ ಆಡಳಿತದ ವಿರುದ್ಧ ವರ್ಷಗಳ ಕಾಲ ಸೆಣಸಾಡಿತ್ತೋ, ಅದೇ ಅಮೆರಿಕ ಕೈಸೋತು ಇದೀಗ ಅದೇ ತಾಲಿಬಾನ್‌ಗೆ ಮರಳಿ ಆ ದೇಶದ ಆಡಳಿತವನ್ನು ನೀಡಲು ಸಿದ್ಧವಾಗುತ್ತಿರುವಂತೆ ಕಾಣಿಸುತ್ತಿದೆ ಎನ್ನಲಾಗಿದೆ.

ಜಾಗತಿಕ ಭಯೋತ್ಪಾದನೆ ದತ್ತಾಂಶಗಳ ಪ್ರಕಾರ 1970ರಿಂದ 2017ರ ವರೆಗಿನ 47 ವರ್ಷಗಳ ಅವಧಿಯಲ್ಲಿ ವಿಶ್ವದಾದ್ಯಂತ 1,80,000ಕ್ಕಿಂತಲೂ ಹೆಚ್ಚು ಭಯೋತ್ಪಾದಕ ದಾಳಿಗಳು ನಡೆದಿವೆ. ಇದರಲ್ಲಿ 88,000 ಬಾಂಬ್ ಸ್ಫೋಟಗಳು, 19,000 ರಾಜಕೀಯ ಹತ್ಯೆಗಳು ಮತ್ತು 11,000 ಅಪಹರಣ ಪ್ರಕರಣಗಳು ಸೇರಿವೆ. ಇಷ್ಟೇ ಅಲ್ಲ, ಭಯೋತ್ಪಾದನೆಯ ವಿರುದ್ಧ ವಿಶ್ವದ ಹಲವು ರಾಷ್ಟ್ರಗಳು ತಮ್ಮ ಯುದ್ಧವನ್ನು ತೀವ್ರಗೊಳಿಸಿದ ಒಂದು ದಶಕದ ಅವಧಿಯಲ್ಲಿ (2004-2014) ಜಾಗತಿಕ ಭಯೋತ್ಪಾದನಾ ದಾಳಿಗಳ ಸಂಖ್ಯೆ ವರ್ಷವೊಂದರ 1,000ದಿಂದ 17,000ಕ್ಕೆ ಏರಿದೆ. ಭಯೋತ್ಪಾದನೆಯಿಂದ ನಲುಗಿದ್ದ ದೇಶಗಳು ಭಯೋತ್ಪಾದನಾ ದಾಳಿಗಳ ಭಯದಲ್ಲಿ ಇನ್ನೂ ಬದುಕುತ್ತಿವೆ.

ಭಯೋತ್ಪಾದನೆಯ ವಿರುದ್ಧ ನಡೆಯುತ್ತಿರುವ ಜಾಗತಿಕ ಯುದ್ಧದ ಸೇನಾ ಮುಖ್ಯಸ್ಥನೆನ್ನಬಹುದಾದ ಸ್ವತಃ ಅಮೆರಿಕದ ಪರಿಸ್ಥಿತಿಯನ್ನು ಗಮನಿಸಿದರೆ ಈ ಯುದ್ಧ ಕೊನೆಗೊಳ್ಳುವ ಭರವಸೆ ಮೂಡುವುದಿಲ್ಲ. 2012ರಲ್ಲಿ ಅಮೆರಿಕದಲ್ಲಿ 20 ಭಯೋತ್ಪಾದನಾ ‘ಘಟನೆ’ಗಳು ನಡೆದಿದ್ದವು. ಐದು ವರ್ಷಗಳ ‘ಯುದ್ಧ’ದ ಬಳಿಕ 2017ರಲ್ಲಿ ನಡೆದ ದಾಳಿಗಳ ಸಂಖ್ಯೆ 65; ಅಂದರೆ ಮೂರು ಪಟ್ಟಿಗೂ ಅಧಿಕ. 2012ರಿಂದ 2017ರ ನಡುವೆ ನಡೆದ ಒಟ್ಟು 236 ದಾಳಿಗಳಲ್ಲಿ 273 ಮಂದಿ ಮೃತಪಟ್ಟು, 1,591 ಮಂದಿ ಗಾಯಹೊಂದಿದರು. ಅಮೆರಿಕದ ದಿ ನೇಶನ್ ಇನ್‌ಸ್ಟಿಟ್ಯೂಟ್‌ಆ್ಯಂಡ್ ಸೆಂಟರ್ ಫಾರ್ ಇನ್ವೆಸ್ಟಿಗೇಟಿವ್ ರಿಪೋರ್ಟಿಂಗ್‌ನ ಪ್ರಕಾರ 115 ಭಯೋತ್ಪಾದನಾ ಘಟನೆಗಳು ಬಲ-ಪಂಥೀಯ ವಿಚಾರಧಾರೆಗಳಿಂದ ಸ್ಫೂರ್ತಿಪಡೆದವರು ನಡೆಸಿದ ದಾಳಿಗಳು ಮತ್ತು 63 ಘಟನೆಗಳು ಇಸ್ಲಾಮಿಸ್ಟ್ ವಿಚಾರಗಳಿಂದ ಸ್ಫೂರ್ತಿಪಡೆದವರು ನಡೆಸಿದ ದಾಳಿಗಳು. ಇದು ಗಮನಿಸಬೇಕಾದ ವಿಷಯ. ಯಾಕೆಂದರೆ ಭಯೋತ್ಪಾದನಾ ದಾಳಿಗಳಿಗೆ ಯಾವುದೇ ಧರ್ಮದ ಬಲ ಪಂಥೀಯ ವಿಚಾರಧಾರೆ ಸ್ಫೂರ್ತಿನೀಡುತ್ತದೆ; ಅದಕ್ಕೆ ಒಂದು ನಿರ್ದಿಷ್ಟ ಧರ್ಮದ ಬಲ ಪಂಥೀಯ ವಿಚಾರಧಾರೆಯೇ ಬೇಕಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಇನ್ನು, ನಮ್ಮ ದೇಶದಲ್ಲಿ ನಡೆದಿರುವ ಭಯೋತ್ಪಾದನಾ ಘಟನೆಗಳ ವಿಷಯಕ್ಕೆ ಬಂದರೆ ನಮ್ಮನ್ನು ಬೆಚ್ಚಿ ಬೀಳಿಸುವ ಅಂಕಿ ಸಂಖ್ಯೆಗಳು ಎದುರಾಗುತ್ತವೆ: 1979ರಲ್ಲಿ ಭಾರತದಲ್ಲಿ ಇಂತಹ ಕೇವಲ 20 ಘಟನೆಗಳು ನಡೆದಿದ್ದವು; ಭಯೋತ್ಪಾದನೆಯ ವಿರುದ್ಧ ನಮ್ಮ ಸರಕಾರಗಳು ಯುದ್ಧ ಮಾಡುತ್ತ 38 ವರ್ಷಗಳು ಕಳೆಯುವಷ್ಟರಲ್ಲಿ ಅಂದರೆ 2017ರಲ್ಲಿ ಇಂತಹ 1,000 ದಾಳಿಗಳು ನಡೆದವು. ಕಳೆದ 47 ವರ್ಷಗಳಲ್ಲಿ, 1970ರಿಂದ 2017ರ ನಡುವೆ ನಮ್ಮ ದೇಶದಲ್ಲಿ ನಡೆದ ಇಂತಹ ಒಟ್ಟು ದಾಳಿಗಳಲ್ಲಿ 12,002; ಈ ದಾಳಿಗಳಲ್ಲಿ ಸತ್ತವರ ಸಂಖ್ಯೆ 19,866 ಮತ್ತು ಗಾಯ ಹೊಂದಿದವರ ಸಂಖ್ಯೆ 30,544.

ಈ ದೀರ್ಘ ಅವಧಿಯಲ್ಲಿ ನಾವು ನಮ್ಮ ನೆರೆಯ ರಾಷ್ಟ್ರದೊಂದಿಗೆ ಕ್ರಿಕೆಟ್ ಆಡುತ್ತ ಬಂದಿದ್ದೇವೆ. ನಮ್ಮ ಕೆಲವು ನಾಯಕರು ಅಲ್ಲಿಗೆ ಸೌಹಾರ್ದ ಭೇಟಿ ನೀಡುತ್ತಲೇ ಬಂದಿದ್ದಾರೆ. ಅಮೆರಿಕದ ಜತೆ ‘ಮೀ ಟೂ’ ಎಂದು ನಾವೂ ಕೈ ಜೋಡಿಸಿದ್ದೇವೆ. ಇವೆಲ್ಲದರ ನಡುವೆ ಭಯೋತ್ಪಾದನೆ ಹಲವು ರೂಪಗಳನ್ನು ಪಡೆಯುತ್ತಿದೆ; ಹಲವು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಎಷ್ಟರ ಮಟ್ಟಿಗೆ ಎಂದರೆ ವಿಶ್ವಸಂಸ್ಥೆಯಲ್ಲಿ ‘ಭಯೋತ್ಪಾದನೆ’ ಎಂಬ ಪರಿಕಲ್ಪನೆಯ ಕುರಿತು ಎಲ್ಲ ಸದಸ್ಯ ರಾಷ್ಟ್ರಗಳಿಗೆ ಒಪ್ಪಿಗೆಯಾಗುವ ಒಂದು ಸಾಮಾನ್ಯ ವ್ಯಾಖ್ಯಾನದ ಬಗ್ಗೆಯೇ ಸಹಮತವಿಲ್ಲ ಎನ್ನಲಾಗಿದೆ.ಇದ್ದಿದ್ದರೆ ಜೈಶೆ ಮುಹಮ್ಮದ್ ಭಯೋತ್ಪಾದನಾ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಲು ಯಾಕೆ ಅಷ್ಟೊಂದು ವಿಳಂಬವಾಯಿತು.?

ಭಯೋತ್ಪಾದಕರಿಗೆ ಹಣಕಾಸು ಬೆಂಬಲ ಹಾಗೂ ಆಶ್ರಯ ನೀಡುವ ಇತರ ದೇಶಗಳೂ ಇವೆ ಎಂದು ಜಾಗತಿಕ ಸಮುದಾಯ ಹೇಳುತ್ತಿರುವಾಗ, ಅಮೆರಿಕ ಮಾತ್ರ ಯಾಕೆ ಭಯೋತ್ಪಾದನೆಗೆ ಸರಕಾರದ ನೆರವು ನೀಡುತ್ತಿರುವ ರಾಷ್ಟ್ರಗಳಲ್ಲಿ ಇರಾನ್ ಅತ್ಯಂತ ದೊಡ್ಡ ಅಪರಾಧಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ? ಪಾಕಿಸ್ತಾನ ಅದರ ಕಣ್ಣಿಗೆ ಕಾಣಿಸುವುದಿಲ್ಲವೇ? ಇಂತಹ ಜಾಗತಿಕ ರಾಜಕೀಯ ‘ತಮಾಷಾ’ದ ವಾತಾವರಣದಲ್ಲಿ ಭಯೋತ್ಪಾದನೆಯ ವಿರುದ್ಧ ನಡೆಯುವ ಜಾಗತಿಕ ಸಮರ ಎಷ್ಟರ ಮಟ್ಟಿಗೆ ಯಶಸ್ವಿಯಾದೀತು? ಆಗದಿದ್ದರೆ ಆಗ ವಿಶ್ವದ ಶಾಂತಿಪ್ರಿಯ ಬಹುಸಂಖ್ಯಾತರ ಪಾಡೇನು? ಯಾವ ರಾಷ್ಟ್ರದ ಯಾವ ರಾಜಕೀಯ ತಪ್ಪು ನೀತಿಗಾಗಿ ಯಾವುದೋ ಒಂದು ದೇಶದ ಅಮಾಯಕರು ಬಲಿಯಾಗಬೇಕೇ? ಯಾರ ತಪ್ಪಿಗೆ ಯಾರಿಗೆ ಶಿಕ್ಷೆ?

(bhaskarrao599@gmail.com)

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News