ಚುನಾವಣಾ ಸಮೀಕ್ಷೆಗಳು ನಂಬಲು ಅರ್ಹವೇ?

Update: 2019-05-21 18:51 GMT

ನಮ್ಮದು ‘ಸಂಸದೀಯ ಪ್ರಜಾಪ್ರಭುತ್ವ’ ವ್ಯವಸ್ಥೆ. ಜನರು ‘ಗುಪ್ತ’ ಮತದಾನದ ಮೂಲಕ ನಾಯಕರನ್ನು ಆಯ್ಕೆ ಮಾಡುತ್ತಾರೆ. ಜನಮತ ಯಾರಿಗೆ ಒಲಿಯುತ್ತದೋ ಆ ಪಕ್ಷವು ಸರಕಾರ ರಚನೆ ಮಾಡುತ್ತದೆ. ಇನ್ನುಳಿದ ಪಕ್ಷಗಳು ‘ವಿರೋಧ ಪಕ್ಷ’ಗಳಾಗಿ ದೇಶದ ರಾಜಕೀಯ ವ್ಯವಸ್ಥೆ ಸುವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳುತ್ತವೆ. 17ನೇ ಲೋಕಸಭಾ ಚುನಾವಣೆಯ ಫಲಿತಾಂಶ ಇನ್ನಷ್ಟೇ ಹೊರ ಬರಬೇಕಿದೆ. ಇಂತಹ ಸನ್ನಿವೇಶದಲ್ಲಿ ಎಲ್ಲಾ ಮಾಧ್ಯಮಗಳಲ್ಲೂ ಚುನಾವಣಾ ಸಮೀಕ್ಷೆಯದ್ದೇ ದರ್ಬಾರು. ಈ ಬಾರಿಯೂ ಮೋದಿ ನೇತೃತ್ವದ ಎನ್‌ಡಿಎ ಕೂಟ 287-306 ಸೀಟು ಗಳಿಸಲಿದೆ ಎಂದು ಸಮೀಕ್ಷಾ ವರದಿಗಳು ಹೇಳುತ್ತಿವೆ. ಮೋದಿಯೇ ಮತ್ತೊಮ್ಮೆ ಪ್ರಧಾನಿ ಗದ್ದುಗೆ ಏರಿ ಸರಕಾರ ರಚಿಸಲಿದ್ದಾರೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಚುನಾವಣೆ ಬಂತೆಂದರೆ ಈ ಸಮೀಕ್ಷೆಗಳು, ಭವಿಷ್ಯ ನುಡಿಯುವ ಡೋಂಗಿ ಬಾಬಾಗಳ ಹಾವಳಿ ಸಹಜ. ಆದರೆ, ಇವನ್ನೆಲ್ಲಾ ಹೇಗೆ ನಂಬುವುದು?

ಭಾರತದಲ್ಲಿ 900 ಮಿಲಿಯನ್ ಅರ್ಹ ಮತದಾರರಿದ್ದಾರೆ. ಇದು, ಅಮೆರಿಕಕ್ಕಿಂತ 3ಪಟ್ಟು ಅಧಿಕವಾಗಿದೆ. ಅಲ್ಲದೆ, 15 ಮಿಲಿಯನ್ ಯುವಕರು ಮೊದಲ ಬಾರಿಗೆ ಮತ ಚಲಾಯಿಸಿದ್ದಾರೆ. ಹೀಗೆ, ಪ್ರತಿಯೊಬ್ಬ ಪ್ರಜೆಯು ಚಲಾಯಿಸಿದ ಮತವು ಗುಪ್ತವಾಗಿ ಚುನಾವಣಾ ಮತ ಪೆಟ್ಟಿಗೆಯಲ್ಲಿ ದಾಖಲಾಗಿರುತ್ತದೆ. ಆದರೆ, ಚುನಾವಣಾ ಮತಗಟ್ಟೆ ಸಮೀಕ್ಷೆಗಳು ಯಾವ ಆಧಾರದ ಮೇಲೆ ಇಂತಿಷ್ಟು ಸ್ಥಾನಗಳು ಇಂತಹ ರಾಜಕೀಯ ಪಕ್ಷಗಳಿಗೆ ದೊರಕಲಿವೆ ಎಂದು ಭವಿಷ್ಯ ನುಡಿಯುತ್ತವೆ?. ಸಮೀಕ್ಷೆಗಳಲ್ಲಿ ಎರಡು ವಿಧ 1.ಚುನಾವಣಾ ಪೂರ್ವ ಸಮೀಕ್ಷೆ, 2.ಚುನಾವಣಾ ನಂತರದ ಸಮೀಕ್ಷೆ. ಸಾಮಾನ್ಯವಾಗಿ, ಈ ಎರಡು ಬಗೆಯ ಸಮೀಕ್ಷೆಗಳು ಜನಾಭಿಪ್ರಾಯದ ಆಧಾರದ ಮೇಲೆ ನಡೆಯುತ್ತವೆ. ಆದರೆ, ಈ ಸಮೀಕ್ಷೆಗಳು ಒಟ್ಟಾರೆ ಕ್ಷೇತ್ರದ ಮತದಾರರ ಅಭಿಪ್ರಾಯವನ್ನು ಪಡೆಯುವುದಿಲ್ಲ. ಬದಲಾಗಿ, ಕ್ಷೇತ್ರದ ಮತದಾರರ ವಯಸ್ಸು, ಜಾತಿ, ಧರ್ಮದ ಆಧಾರದ ಮೇಲೆ ಮಾದರಿ ಅಭಿಪ್ರಾಯಗಳನ್ನು ಕಲೆಹಾಕುವ ಮೂಲಕ ವಿಶ್ಲೇಷಣೆ ಮಾಡುತ್ತವೆ. ಆದರೆ, ಈ ರೀತಿಯ ಸಮೀಕ್ಷೆಗಳು ಬಹುಪಾಲು ಸುಳ್ಳಾಗಿರುವ ಪುರಾವೆಗಳಿವೆ. ಅಂದರೆ, 1999 ಲೋಕಸಭಾ ಮತಗಟ್ಟೆ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮತ್ತು ಮೈತ್ರಿಕೂಟವು 132-150 ಸ್ಥಾನಗಳನ್ನು ಗಳಿಸುತ್ತದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ, ಅದು 114 ಸ್ಥಾನಗಳನ್ನು ಗಳಿಸಲಷ್ಟೇ ಸಾಧ್ಯವಾಗಿತ್ತು. ಹಾಗೆಯೇ, 2004ರಲ್ಲಿ ಎನ್‌ಡಿಎ ಕೂಟವು 230-275 ಸೀಟು ಗಳಿಸುತ್ತದೆ ಎಂದು ಹೇಳಲಾಗಿತ್ತು, ಆದರೆ ಅದು 181 ಸೀಟುಗಳನ್ನು ಗಳಿಸಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ 222 ಸೀಟುಗಳನ್ನು ಗಳಿಸಿ ಉಳಿದ ಮಿತ್ರ ಪಕ್ಷಗಳ ಜೊತೆಗೂಡಿ ಸರಕಾರವನ್ನು ರಚಿಸಿತ್ತು. ಇದಲ್ಲದೆ, 2009ರ ಚುನಾವಣಾ ಸಮೀಕ್ಷೆಯಲ್ಲಿ ಯುಪಿಎ ಮತ್ತು ಎನ್‌ಡಿಎ ಬಣಗಳಿಗೆ ಬಹುತೇಕ ಸಮವಾಗಿ 199-197 ಸೀಟುಗಳು ಲಭಿಸಲಿವೆ ಎಂಬುದು ಸಮೀಕ್ಷೆ ವರದಿಯಾಗಿತ್ತು. ವಾಸ್ತವದಲ್ಲಿ, ಯುಪಿಎ ಮೈತ್ರಿಕೂಟವು 262 ಸೀಟುಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿತ್ತು. ಹಾಗೆಯೇ, 2014ರಲ್ಲಿ ಎನ್‌ಡಿಎ ಕೂಟವು 290-300 ಸೀಟು ಗಳಿಸುತ್ತದೆ ಎಂದು ಹೇಳಲಾಗಿತ್ತು. ಆದರೆ, ಮೋದಿ ಕೂಟವು 336 ಸ್ಥಾನವನ್ನು ಗಳಿಸಿದರೆ, ಕಾಂಗ್ರೆಸ್ 44 ಸೀಟುಗಳಿಗೆ ಸೀಮಿತವಾಯಿತು. ಹೀಗೆ, ಭಾರತದ ಚುನಾವಣಾ ಇತಿಹಾಸದಲ್ಲಿ ಬಹುಪಾಲು ಚುನಾವಣಾ ಮತಗಟ್ಟೆ ಸಮೀಕ್ಷೆಗಳು ವಿಫಲವಾಗಿವೆ.

ಇನ್ನೂ ಮುಂದುವರಿದು, ಮಾಧ್ಯಮಗಳ ಸಮೀಕ್ಷೆಗಳು ಯಾವುದೋ ಒಂದು ಪಕ್ಷದ ಪರವಾಗಿ, ನಾಯಕರ ಪರವಾಗಿ ಕೆಲಸ ಮಾಡುವುದೇ ಹೆಚ್ಚು. ಅಂದರೆ, ತಾವು ಪ್ರಸ್ತುತ ಪಡಿಸುವ ಸಮೀಕ್ಷೆಯಲ್ಲಿ, ಯಾವ ರಾಜಕೀಯ ಪಕ್ಷ, ಯಾವ ಕ್ಷೇತ್ರದಲ್ಲಿ ಎಷ್ಟು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ, ಚಲಾವಣೆಗೊಂಡ ಮತಗಳೆಷ್ಟು, ಎಷ್ಟೆಷ್ಟು ಮತಗಳು ಯಾವ ಯಾವ ಪಕ್ಷಗಳಿಗೆ ವಿಭಜನೆಯಾಗಿವೆ ಎಂಬುದರ ಬಗ್ಗೆ ಯೋಚಿಸದೆ ತಪ್ಪು ಮಾಹಿತಿಗಳನ್ನು ಪ್ರಚುರ ಪಡಿಸುತ್ತವೆ.

ಚುನಾವಣಾ ಸಮೀಕ್ಷೆಗಳು ಬಹಳಷ್ಟು ಬಾರಿ ವಿಫಲವಾಗಿದ್ದು ಅದಕ್ಕೆ ಹಲವು ಕಾರಣಗಳಿವೆ. ಬಹು ಮುಖ್ಯವಾಗಿ ಸಮೀಕ್ಷಾ ಸಂಸ್ಥೆಗಳು ಬಳಸುವ ಸಮೀಕ್ಷಾ ವಿಧಾನಗಳು. ಅಂದರೆ, ಸಮೀಕ್ಷೆಗಳು ಇಂದಿಗೂ ಸಾಂಪ್ರದಾಯಿಕ ಸಮೀಕ್ಷಾ ವಿಧಾನವಾದ ಸೀಟು ಹಂಚಿಕೆ ವಿಧಾನವನ್ನು ಪಾಲಿಸುತ್ತವೆ. ಪಕ್ಷಗಳು ಜಾತಿ, ಧರ್ಮ, ಲಿಂಗದ ಆಧಾರದ ಮೇಲೆ ಸೀಟು ಹಂಚಿಕೆಮಾಡುತ್ತವೆ. ಇದನ್ನು ಅನುಸರಿಸಿಯೇ ಸಮೀಕ್ಷೆಯ ಮಾದರಿಗಳು ರಚನೆಯಾಗುವುದರಿಂದ ಬಹುಪಾಲು ಸಮೀಕ್ಷೆಗಳು ಹುಸಿಯಾಗುತ್ತವೆ. ಬಹಳಷ್ಟು ಸಮೀಕ್ಷೆಗಳಿಗೆ ಅಗತ್ಯ ಮೂಲ ಸೌಕರ್ಯಗಳ ಕೊರತೆ ಇರುತ್ತದೆ ಉದಾ: ಹಣ, ಕೆಲಸಗಾರರು ಮತ್ತು ಸಮಯ. ಸಮೀಕ್ಷೆಯನ್ನು ಕೈಗೊಳ್ಳಲು ತುಂಬಾ ಹಣದ ಅಗತ್ಯವಿರುತ್ತದೆ. ಸಮೀಕ್ಷೆಗಳು ಅನುಸರಿಸುವ ವಿಧಾನಗಳಿಗೆ ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸಲು, ಜನಾಭಿಪ್ರಾಯವನ್ನು ಸಂಗ್ರಹಿಸಲು ಅಧಿಕ ಕೆಲಸಗಾರರ ಅಗತ್ಯಗಳಿದ್ದು ಇವೆಲ್ಲವನ್ನು ಒದಗಿಸಲು, ಸಂಗ್ರಹಿಸಿದ ಅಂಕಿಅಂಶಗಳನ್ನು ಒಂದು ವರದಿಯಾಗಿ ರೂಪಾಂತರಿಸಲು ಸಮಯದ ಅಭಾವವು ಇರುತ್ತದೆ. ಅಧಿಕ ಜನಸಂಖ್ಯೆಯನ್ನೊಳಗೊಂಡ ಕ್ಷೇತ್ರಗಳು ಸಮೀಕ್ಷೆಯನ್ನು ಸಮರ್ಪಕವಾಗಿ ನಡೆಸಲು ತೊಂದರೆಯನ್ನುಂಟುಮಾಡುತ್ತವೆ. ಅಂದರೆ, ಅಧಿಕ ಪ್ರಮಾಣದಲ್ಲಿ ಜನಸಂಖ್ಯೆಯಿದ್ದರೆ ಸಾಮಾನ್ಯವಾಗಿ ವಿವಿಧ ಜಾತಿ, ಧರ್ಮದ ಜನರಿರುತ್ತಾರೆ ಹಾಗೂ ಅವರೆಲ್ಲರ ಅಭಿಪ್ರಾಯ ಮತ್ತು ಒಲವು ಒಂದೇ ರೀತಿ ಇರುವುದಿಲ್ಲ. ಇದು ಸಮೀಕ್ಷೆಗಳ ಯಶಸ್ಸಿಗೆ ಅಡ್ಡಿಯಾಗುತ್ತದೆ. ಬಹುಪಾಲು ಸಮೀಕ್ಷೆಗಳು ಮಾಡಿದ್ದ ತಪ್ಪನ್ನು ಸರಿಪಡಿಸಿಕೊಂಡು ತಮ್ಮ ಸಮೀಕ್ಷಾ ವಿಧಾನವನ್ನು ಬದಲಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಇದರಿಂದ, ಮತ್ತದೇ ರೀತಿಯ ವರದಿಗಳನ್ನು ನೀಡುವುದರಿಂದ ಜನರಲ್ಲಿ ಸಮೀಕ್ಷೆಗಳ ಬಗ್ಗೆ ಉತ್ತಮ ಅಭಿಪ್ರಾಯಗಳು ಮೂಡುವುದಿಲ್ಲ.

ಮೋದಿಯವರ ಅಧಿಕಾರಾವಧಿಯಲ್ಲಿ ದೇಶದ ಜನರು ಅನೇಕ ಕಷ್ಟ ನಷ್ಟಗಳನ್ನು ಎದುರಿಸಿದ್ದಾರೆ. ದೇಶಭಿಮಾನ, ಧರ್ಮ, ಗೋವಿನ ಹೆಸರಿನಲ್ಲಿ ಮಾರಣ ಹೋಮಗಳೇ ನಡೆದಿವೆ. ನೋಟು ರದ್ದತಿಯಿಂದಾಗಿ ಅರ್ಥವ್ಯವಸ್ಥೆ ಕುಸಿದಿದೆ, ದೇಶದ ಯುವಕರು ನಿರುದ್ಯೋಗದಿಂದ ಬಸವಳಿದಿದ್ದಾರೆ, ರೈತರು ಸಾಲ ಬಾಧೆಯಿಂದ ಪ್ರಾಣತ್ಯಾಗ ಮಾಡಿದ್ದಾರೆ. ಆದರೂ, ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದಾರೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿಯುತ್ತಿವೆ. ಇವೆಲ್ಲಾ ನೋಡಿದರೆ ಈ ಸಮೀಕ್ಷೆಗಳು ಸಹ ಒಂದು ಪಕ್ಷ, ನಾಯಕರ ಪರ ಕೆಲಸ ಮಾಡುತ್ತಿವೆ ಎಂದು ತಿಳಿಯುತ್ತದೆ.

ಒಟ್ಟಾರೆ, ಚುನಾವಣಾ ಮತಗಟ್ಟೆ ಸಮೀಕ್ಷೆಗಳು ತಮ್ಮದೇ ಆದ ಲೋಪದೋಷಗಳು ಮತ್ತು ಉಪಯೋಗಗಳನ್ನು ಹೊಂದಿವೆ. ಆದರೆ, ಈ ಸಮೀಕ್ಷೆಗಳನ್ನು ಕೈಗೊಳ್ಳುವ ಸಂಸ್ಥೆಗಳು, ಮಾಧ್ಯಮಗಳು ಯಾವುದೇ ಆಶೆ, ಆಮಿಷಗಳು ಮತ್ತು ಮುಲಾಜಿಗೆ ಒಳಗಾಗದೆ ಉತ್ತಮ ಸಮಾಜದ ನಿರ್ಮಾಣಕ್ಕೆ ದುಡಿಯುವ ಅನಿವಾರ್ಯವಿದೆ. ಜನರಲ್ಲಿ ರಾಜಕೀಯದ ಬಗ್ಗೆ ಉತ್ತಮ ಅಭಿಪ್ರಾಯಗಳಿಲ್ಲದ ಸಂದರ್ಭದಲ್ಲಿ ರಾಜ್ಯಾಧಿಕಾರದಲ್ಲಿ ಜನರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಶ್ರಮಿಸಬೇಕಿದೆ.

Writer - ಶ್ರೀನಿವಾಸ್ ಕೆ. ಬೆಂಗಳೂರು

contributor

Editor - ಶ್ರೀನಿವಾಸ್ ಕೆ. ಬೆಂಗಳೂರು

contributor

Similar News