ಟಿಕ್‌ಟೋಕ್ ಸೆಲೆಬ್ರಿಟಿಯ ಗುಂಡಿಟ್ಟು ಹತ್ಯೆ

Update: 2019-05-22 04:26 GMT

ಹೊಸದಿಲ್ಲಿ: ಟಿಕ್‌ಟೋಕ್ ಸಾಮಾಜಿಕ ಜಾಲತಾಣ ಅಪ್ಲಿಕೇಶನ್‌ನಲ್ಲಿ ಸಕ್ರಿಯರಾಗಿದ್ದ 27 ವರ್ಷದ ಜಿಮ್ ತರಬೇತುದಾರ ಮೋಹಿತ್ ಮೋರ್ ಅವರನ್ನು ದೆಹಲಿಯ ನಜಾಫ್‌ಗಢದಲ್ಲಿ ಮೂವರು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಟಿಕ್‌ಟೋಕ್‌ನಲ್ಲಿ ಮೋಹಿತ್ 5.17 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದರು. ಮೂಲತಃ ಹರ್ಯಾಣದ ಬಹದ್ದೂರ್‌ಗಢದವರಾದ ಮೋಹಿತ್, ನಜಾಫ್‌ಗಢ ನಿವಾಸದಲ್ಲೇ ವಾಸ್ತವ್ಯ ಇದ್ದರು ಎಂದು ಪೊಲೀಸರು ಹೇಳಿದ್ದಾರೆ.

ರವಿವಾರ ದ್ವಾರಕಾ ಮೋದ್‌ನಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿ ಇಬ್ಬರು ಅಪರಾಧಿಗಳನ್ನು ಹತ್ಯೆ ಮಾಡಿದ ಬೆನ್ನಲ್ಲೇ ಈ ಹತ್ಯೆ ರಾಜಧಾನಿಯನ್ನು ತಲ್ಲಣಗೊಳಿಸಿದೆ. ಈ ಗ್ಯಾಂಗ್‌ವಾರ್‌ಗೆ ಮತ್ತು ಮೋಹಿತ್ ಅವರಿಗೆ ಯಾವುದೇ ಸಂಬಂಧ ಇದೆಯೇ ಎಂಬ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಇಂಥ ಯಾವುದೇ ಸಂಬಂಧ ಇದುವರೆಗೆ ಕಂಡುಬಂದಿಲ್ಲ ಎಂದು ಪೊಲೀಸ್ ಉಪ ಆಯುಕ್ತ ಆಂಟೊ ಅಲ್ಫೋನ್ಸ್ ಸ್ಪಷ್ಟಪಡಿಸಿದ್ದಾರೆ. ಮೋರ್ ವಿರುದ್ಧ ಯಾವ ಅಪರಾಧ ಪ್ರಕರಣಗಳೂ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಮೋಹಿತ್ ಮೋರ್ ಮಂಗಳವಾರ ಸಂಜೆ ಜೆರಾಕ್ಸ್ ಅಂಗಡಿಯೊಂದರಲ್ಲಿ ಕುಳಿತಿದ್ದಾಗ ಈ ಹತ್ಯೆ ನಡೆದಿದೆ. ಏಳು ಗುಂಡು ತಗುಲಿದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಂಕಿತರನ್ನು ಪತ್ತೆ ಮಾಡಲು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆ ಬಳಿಕ ಆ ಪ್ರದೇಶದಲ್ಲಿ ಮೂವರು ಅನುಮಾನಾಸ್ಪದವಾಗಿ ಸಂಚರಿಸುತ್ತಿರುವ ದೃಶ್ಯ ದಾಖಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಈ ಪೈಕಿ ಇಬ್ಬರು ಹೆಲ್ಮೆಟ್ ಧರಿಸಿದ್ದಾರೆ. ಮುಖ ಮುಚ್ಚಿಕೊಳ್ಳದ ಮತ್ತೊಬ್ಬ ವ್ಯಕ್ತಿಯ ಚಿತ್ರದ ನೆರವಿನಿಂದ ಆರೋಪಿಗಳನ್ನು ಪತ್ತೆ ಮಾಡಬಹುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News