ಚಿನ್ನಸ್ವಾಮಿ ಸ್ಟೇಡಿಯಂ ಬಾಂಬ್ ಸ್ಫೋಟ ಪ್ರಕರಣ: ಆರೋಪಿ ಖೋಮಾನಿ ಬಿಡುಗಡೆ

Update: 2019-05-22 14:16 GMT

ಬೆಂಗಳೂರು, ಮೇ 22: ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಗೊಹರ್ ಅಜೀಜ್ ಖೋಮಾನಿಯನ್ನು ಬಿಡುಗಡೆಗೊಳಿಸಲು ಹೈಕೋರ್ಟ್ ಆದೇಶಿಸಿದೆ. ಈ ಕುರಿತು ಕಾರಾಗೃಹದಿಂದ ಬಿಡುಗಡೆ ಕೋರಿ ಬಿಹಾರದ ದರ್ಭಾಂಗಾ ಜಿಲ್ಲೆಯ 5ನೆ ಆರೋಪಿಯಾಗಿದ್ದ ಗೊಹರ್ ಅಜೀಜ್ ಖೋಮಾನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಹಾಗೂ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ರಜಾ ಕಾಲದ ವಿಭಾಗೀಯ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು. 

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿ ಗೊಹರ್ ಅಜೀಜ್ ಖೋಮಾನಿ ಈಗಾಗಲೇ 7 ವರ್ಷ ವರ್ಷ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದ್ದಾನೆ. ಹೀಗಾಗಿ, ಖೋಮಾನಿಯನ್ನು ಬಿಡುಗಡೆಗೊಳಿಸಲು ನ್ಯಾಯಪೀಠವು ಆದೇಶಿಸಿತು.

2010ರ ಎ.10ರಂದು ಐಪಿಎಲ್ ಪಂದ್ಯಾವಳಿ ವೇಳೆ ಬಾಂಬ್ ಬ್ಲಾಸ್ಟ್ ಮಾಡಲಾಗಿತ್ತು. ಗೇಟ್ ನಂ 11 ಮತ್ತು 15ರಲ್ಲಿ ಬಾಂಬ್ ಸ್ಫೋಟಿಸಿತ್ತು. ಘಟನೆಯಲ್ಲಿ 15 ಜನ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಮುಜಾಹಿದ್ದೀನ್ ಸಂಘಟನೆಯೊಂದರ ರೂವಾರಿಯೊಬ್ಬರಿಗೆ ಆರೋಪಿ ಗೊಹರ್ ಅಜೀಜ್ ಖೋಮಾನಿ ಹಾಗೂ ಮತ್ತಿತರ ಆರೋಪಿಗಳು ಸಹಾಯ ಮಾಡಿದ್ದರು ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಎನ್‌ಐಎ ಕೋರ್ಟ್ ಆರೋಪಿ ಖೋಮಾನಿಗೆ 7 ವರ್ಷಗಳ ಕಾಲ ಕಾರಾಗೃಹ ಶಿಕ್ಷೆಯನ್ನು ವಿಧಿಸಿತ್ತು.

ತುಮಕೂರಿನ ಸದಾಶಿವನಗರದ ಮಸೀದಿ ಬಳಿ ಐದು ಬಾಂಬ್‌ಗಳನ್ನು ತಯಾರಿಸಿದ ಆರೋಪದ ಹಿನ್ನೆಲೆಯಲ್ಲಿ ಖೋಮಾನಿ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಎನ್‌ಐಎ ಕೋರ್ಟ್‌ಗೆ ಜಾರ್ಜ್‌ಶೀಟ್ ಸಲ್ಲಿಸಿದ್ದರು. ಖೋಮಾನಿ ಸೇರಿ ಮೂವರು ಆರೋಪಿಗಳು ಎನ್‌ಐಎ ಕೋರ್ಟ್ ಮುಂದೆ ತಾವು ತಪ್ಪು ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು 7 ವರ್ಷ ಶಿಕ್ಷೆ ವಿಧಿಸಿತ್ತು. ಆರೋಪಿ ಖೋಮಾನಿಗೆ 7.5 ಲಕ್ಷ ರೂ.ದಂಡ ವಿಧಿಸಿತ್ತು. ಒಂದು ವೇಳೆ ದಂಡ ಪಾವತಿಸದಿದ್ದಲ್ಲಿ ಮತ್ತೊಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕೆಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಆದೇಶಿಸಿದ್ದರು. ಹೈಕೋರ್ಟ್ ನ್ಯಾಯಪೀಠವು ಖೋಮಾನಿಯನ್ನು ಬಿಡುಗಡೆಗೊಳಿಸಲು ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News