ಯುವತಿ ಮೇಲೆ ಅತ್ಯಾಚಾರ ಆರೋಪ ಪ್ರಕರಣ: ನಿರ್ಮಾಪಕ ಕುಮಾರ್ ಗೌರವ್‌ಗೆ ಹೈಕೋರ್ಟ್ ಜಾಮೀನು

Update: 2019-05-22 16:24 GMT

ಬೆಂಗಳೂರು, ಮೇ 22: ಚಲನಚಿತ್ರದಲ್ಲಿ ನಟನೆಗೆ ಅವಕಾಶ ಕೊಡಿಸುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಂಧನದಲ್ಲಿರುವ ಚಲನಚಿತ್ರ ನಿರ್ಮಾಪಕ ಕುಮಾರ್ ಗೌರವ್‌ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಈ ಕುರಿತು ಕುಮಾರ್‌ಗೌರವ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಬಿ.ಪ್ರಭಾಕರ ಶಾಸ್ತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

ಪ್ರಕರಣವೇನು: 2016ರ ನವೆಂಬರ್‌ನಲ್ಲಿ ಕುಮಾರ್ ಗೌರವ್ ನನಗೆ ಪರಿಚಯವಾಗಿದ್ದರು. ಐ ಎಂಬ ಹೆಸರಿನ ಸಿನಿಮಾದಲ್ಲಿ ನನಗೆ ಪುಟ್ಟ ಪಾತ್ರ ಕೊಡಿಸಿದ್ದರು. ಅಲ್ಲದೆ, ಮುಂದೆಯೂ ಸಿನಿಮಾಗಳಲ್ಲಿ ಅವಕಾಶ ಕಲ್ಪಿಸುತ್ತೇನೆ ಎಂದು ಹೇಳಿದ್ದರು. ಒಂದು ದಿನ ತಮ್ಮ ಇಸ್ರೋ ಲೇಔಟ್ ಮನೆಗೆ ನನ್ನನ್ನು ಕರೆದುಕೊಂಡು ಹೋಗಿದ್ದರು. ಆ ಸಮಯದಲ್ಲಿ ರಿವಾಲ್ವರ್ ತೋರಿಸಿ ಬೆದರಿಸಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು. ನಂತರ ಪದೇ ಪದೇ ವಾಟ್ಸ್ ಆ್ಯಪ್ ಮತ್ತು ವಿಡಿಯೋ ಕಾಲ್ ಮಾಡಿ ದೇಹದ ಖಾಸಗಿ ಭಾಗಗಳನ್ನು ತೋರಿಸುವಂತೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ ಸಂತ್ರಸ್ತೆಯು 2019ರ ಮಾರ್ಚ್ 28ರಂದು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಮಾರ್ಚ್ 29ರಂದು ಕುಮಾರ್ ಗೌರವ್ ಅವರನ್ನು ಬಂಧಿಸಿದ್ದರು. ಅಧೀನ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News