ಪ್ರಾಣಿಗಳಿಗಿಂತ ಹೆಚ್ಚು ಶೋಷಿತರು ಬ್ರಾಹ್ಮಣ ಮಹಿಳೆಯರು: ಡಾ.ಎಲ್.ಹನುಮಂತಯ್ಯ

Update: 2019-05-22 16:39 GMT

ಬೆಂಗಳೂರು, ಮೇ 22: ಪ್ರಾಣಿಗಳಿಗಿಂತ ಹೆಚ್ಚು ಶೋಷಣೆಯನ್ನು ನಮ್ಮ ದೇಶದ ಬ್ರಾಹ್ಮಣ ಸಮುದಾಯದ ಮಹಿಳೆಯರು ಅನುಭವಿಸಿದ್ದು, ಈ ಸತ್ಯವೂ ಇತಿಹಾಸ ಪುಟಗಳಲ್ಲಿ ದಾಖಲಾಗಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಇಂದಿಲ್ಲಿ ಅಭಿಪ್ರಾಯಪಟ್ಟರು.

ನಗರದ ಶಾಸಕರ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಸಂಘಗಳ ಒಕ್ಕೂಟ ಏರ್ಪಡಿಸಿದ್ದ, ‘ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಸಾಧನೆ ಹೆಜ್ಜೆಗಳು’ ಕುರಿತ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಈ ಹಿಂದೆ ನಮ್ಮ ದೇಶದೊಳಗೆ ಬಾಲ್ಯ ವಿವಾಹ, ಸತಿಪದ್ಧತಿ, ವಿಧವೆ ಮಹಿಳೆಯರ ಬಹಿಷ್ಕಾರ ಜಾರಿಯಲ್ಲಿತ್ತು. ಆದರೆ, ನಾವು ಯಾರನ್ನು ತಿಳುವಳಿಕೆಯುಳ್ಳವರು (ಬ್ರಾಹ್ಮಣರು) ಎನ್ನುತ್ತಿದ್ದೆವು, ಅವರ ಮಹಿಳೆಯರೇ ಹೆಚ್ಚಾಗಿ ಈ ಅನಿಷ್ಟ ಪದ್ಧತಿಗಳಲ್ಲಿ ಸಿಲುಕಿಕೊಂಡಿದ್ದರು. ಅಷ್ಟೇ ಅಲ್ಲದೆ, ಇತರೆ ಸಮುದಾಯಗಳಲ್ಲಿ ಮಹಿಳೆಯ ಪತಿ ಸಾವನ್ನಪ್ಪಿದರೆ, ಮತ್ತೊಂದು ಮದುವೆ ಮಾಡಿಕೊಳ್ಳುವ ಅವಕಾಶ ಇತ್ತು. ಆದರೆ, ಬ್ರಾಹ್ಮಣರಲ್ಲಿ ಈ ಅವಕಾಶ ನೀಡಿರಲಿಲ್ಲ. ಬದಲಾಗಿ, ಆ ಮಹಿಳೆಯರ ತಲೆಕೂದಲು ತೆಗೆಯುವುದು, ಬಿಳಿ ಬಣ್ಣದ ಸೀರೆ ಧರಿಸುವಂತೆ ಸೂಚಿಸುವುದು, ಆಕೆಯ ಮುಖ ನೋಡುವುದು ಮಂಗಳವಲ್ಲ ಎಂದೆಲ್ಲಾ ಟೀಕಿಸುವ ಸಂಸ್ಕೃತಿ ಚಾಲ್ತಿಯಲ್ಲಿತ್ತು ಎಂದು ಹೇಳಿದರು.

ಮನುಸ್ಮತಿಯಲ್ಲಿ ನ್ಯಾಯ ವ್ಯವಸ್ಥೆಯೂ ಜಾತಿ ಆಧಾರಿತವಾಗಿತ್ತು. ಮನುಸ್ಮತಿಯಲ್ಲಿರುವಂತೆ, ಮೇಲು ಜಾತಿಯ ಯುವಕ ಕೆಳ ಜಾತಿಯ ಯುವತಿಯನ್ನು ಮದುವೆಯಾದರೆ, ದಂಡಿಸಬೇಕು ಎಂದಷ್ಟೇ ಹೇಳಲಾಗಿದೆ. ಆದರೆ, ಕೆಳ ಜಾತಿಯ ಯುವಕ ಮೇಲು ಜಾತಿಯ ಯುವತಿಯನ್ನು ಮದುವೆಯಾದರೆ ಗಲ್ಲು ಶಿಕ್ಷೆ ನೀಡಬೇಕೆಂದು ಸೂಚಿಸಲಾಗಿದೆ. ಆದರೆ, ಈ ಸತ್ಯವನ್ನು ಕೆಲವರು ಮರೆಮಾಚಲು ಪ್ರಯತ್ನ ಮಾಡುತ್ತಿದ್ದಾರೆಂದು ಹನುಮಂತಯ್ಯ ನುಡಿದರು.

ನಮ್ಮಳಗೆ ಹಲವು ಶೋಷಣೆಯ ಪದ್ಧತಿಗಳಿದ್ದವು. ಹಲವು ರಾಜರು ಜನರಿಗೆ ಅನ್ಯಾಯ ಮಾಡಿದ್ದಾರೆ. ಆದರೂ, ಇತಿಹಾಸ ಪುಟದಲ್ಲಿ ಕೆಲವು ರಾಜರ ಆಳ್ವಿಕೆ ಕಾಲವನ್ನು ಸುವರ್ಣ ಯುಗ ಎಂದು ಬಿಂಬಿಸಲಾಗಿದೆ ಎಂದರು.

ಭಾರತೀಯರು ಅಮೆರಿಕಕ್ಕೆ ಹೋದರು ಜಾತಿ ಬಿಟ್ಟಿಲ್ಲ. ಜೊತೆಗೆ ಜಾತಿ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರುವುದಲ್ಲದೆ, ಅಲ್ಲಿಯೂ ಜಾತಿಗೊಂದು ಸಂಘ ಕಟ್ಟಿಕೊಂಡಿದ್ದಾರೆ. ಆದರೆ, ಅಮೆರಿಕ ಪ್ರಜೆಗಳು ಭಾರತೀಯರನ್ನು ಅಸ್ಪಶ್ಯರಂತೆ ಕಾಣುತ್ತಿದ್ದಾರೆ ಎಂದು ಅವರು ಹೇಳಿದರು.

ದನದ ಕೊಟ್ಟಿಗೆ: ರಾಜ್ಯ ವ್ಯಾಪ್ತಿಯ ಕೆಲ ಸರಕಾರಿ ಶಾಲೆಗಳು ಸೂಕ್ತ ನೀರಿನ ವ್ಯವಸ್ಥೆ, ಮೂಲಸೌಕರ್ಯಗಳಿಲ್ಲದೆ ದನದ ಕೊಟ್ಟಿಗೆಗಿಂತಲೂ ಕಡೆಯಾಗಿವೆ ಎಂದ ಅವರು, ಗ್ರಾಮೀಣ ಭಾಗದ ಶಿಕ್ಷಕರ ಸಮಸ್ಯೆಗಳು ಹೆಚ್ಚಾಗಿವೆ. ಈ ಬಗ್ಗೆ ಸರಕಾರ ಗಮನ ನೀಡಲಿ ಎಂದು ಹನುಮಂತಯ್ಯ ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಶಿಕ್ಷಕರ ಸಂಘಗಳ ಒಕ್ಕೂಟದ ಅಧ್ಯಕ್ಷೆ ವಿ.ಟಿ.ವೆಂಕಟೇಶಯ್ಯ, ಲೇಖಕಿ ಸುಮಿತ್ರಾ ಎಂ.ದುರ್ಗಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

‘ಆಪ್’ ಹೊಗಳಿದ ಕಾಂಗ್ರೆಸ್ ಸಂಸದ

ನಾನು ಕಾಂಗ್ರೆಸ್ ಸಂಸದನಾಗಿರಬಹುದು. ಆದರೆ, ಆಮ್ ಆದ್ಮಿ ಪಕ್ಷ ಹಾಗೂ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಡಿರುವ ಶೈಕ್ಷಣಿಕ ಅಭಿವೃದ್ಧಿ ಮರೆಯಲು ಸಾಧ್ಯವಿಲ್ಲ. ಅಲ್ಲಿನ ಶಾಲಾ-ಕಾಲೇಜು ಕಟ್ಟಡಗಳು ಖಾಸಗಿ ಸಂಸ್ಥೆಗಳಿಗೆ ಸೆಡ್ಡು ಹೊಡೆದಿದ್ದು, ಪ್ರತಿಯೊಂದು ರಾಜ್ಯದ ಮಂತ್ರಿಗಳು ಒಮ್ಮೆ ದೆಹಲಿ ಭೇಟಿ ನೀಡಬೇಕು ಎಂದು ಎಲ್.ಹನುಮಂತಯ್ಯ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News