ಸಮಾನತೆ ಎನ್ನುವ ಪರಿಕಲ್ಪನೆಯೇ ತಪ್ಪು: ಲೇಖಕಿ ಡಾ.ವೀಣಾ ಬನ್ನಂಜೆ

Update: 2019-05-22 16:47 GMT

ಬೆಂಗಳೂರು, ಮೇ 22: ತಮ್ಮ ಪ್ರಕಾರ ಸಮಾನತೆ ಎನ್ನುವ ಪರಿಕಲ್ಪನೆಯೇ ತಪ್ಪು. ಯಾವುದನ್ನೋ ಅಥವಾ ಯಾರನ್ನೋ ಮಾದರಿಯಾಗಿ ಸ್ವೀಕರಿಸಿ ಅವರಿಗೆ ಸಮಾನಾಗಿ ಬೆಳೆಯುವುದು ಸಮಾನತೆ ಅಲ್ಲ. ಇದು ಅತಿರೇಕ ಎನಿಸಿದರೂ ನಾನು ಕಂಡುಕೊಂಡಿರುವ ಸತ್ಯ ಎಂದು ಲೇಖಕಿ ಡಾ.ವೀಣಾ ಬನ್ನಂಜೆ ಅಭಿಪ್ರಾಯಿಸಿದ್ದಾರೆ.

ಬುಧವಾರ ಜಯನಗರದ ವಿಜಯ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ‘ಸ್ತ್ರೀ ಧ್ವನಿ’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಕಾಲೇಜಿನ ದಿನಗಳಲ್ಲಿ ಬಸ್‌ಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸನಗಳನ್ನು ಮೀಸಲಿಡುತ್ತಿದ್ದರು. ಆ ಸಂದರ್ಭದಲ್ಲಿ ಸಮಾನತೆ ಕುರಿತು ಮಾತನಾಡಿದ್ದೆ. ಅದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರು ಎಂದು ಮರು ನೆನಪು ಮಾಡಿಕೊಂಡರು.

ಒಬ್ಬರನ್ನು ಮತ್ತೊಬ್ಬರಿಗೆ ಹೋಲಿಕೆ ಮಾಡುವುದೇ ತಪ್ಪು. ಹೆಣ್ಣು-ಗಂಡಿಗೆ ಅವರದೇ ಆದ ಶಕ್ತಿಯಿದೆ. ತಾಯ್ತನ ಎಂಬುದು ಕೇವಲ ಹೆಣ್ಣಿಗಷ್ಟೇ ಸೀಮಿತವಾಗಿಲ್ಲ. ಗಂಡಸರಲ್ಲೂ ತಾಯ್ತನ ಕಾಣಬಹುದು. ಇದು ಲಿಂಗ ಅಥವಾ ಮಕ್ಕಳನ್ನು ಹೆರುವುದರಿಂದ ನಿರ್ಧರಿತವಾಗುವುದಿಲ್ಲ. ಇಂದು ಸಮಾಜದಲ್ಲಿ ಹೆಚ್ಚಾಗಿರುವ ‘ಲಿಂಗ’ ಪ್ರಜ್ಞೆ ಭಯಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಹೆಣ್ಣು ಅಥವಾ ಗಂಡಿಗೆ ಮದುವೆ ಹಾಗೂ ಕಾಮವೇ ಬದುಕಲ್ಲ. ಅದರ ಹೊರತಾಗಿಯೂ ಉತ್ತಮ ಬದುಕಿದೆ. ಜಗತ್ತಿನಲ್ಲಿ ದಾಖಲಾದ ಮಹಾಸತ್ಯಗಳು ಮನುಕುಲವನ್ನು ಕಾಪಾಡಿವೆ. ಇನ್ನೂ ದಾಖಲಾಗದ ಎಷ್ಟೋ ಮಹಾಸತ್ಯಗಳು ಹಾಗೆ ಉಳಿದಿವೆ. ಜಗತ್ತಿನ ಪ್ರತಿಯೊಂದು ಸೃಷ್ಟಿಗೂ ಅರ್ಥವಿರುತ್ತದೆ. ಅದಕ್ಕೆ ಅದರದೇ ಆದ ಉದ್ದೇಶ ಹಾಗೂ ಕಾರ್ಯಗಳಿರುತ್ತವೆ. ಹೆಣ್ಣು-ಗಂಡು ವಿಚಾರವೂ ಅದರಿಂದ ಹೊರತಾಗಿಲ್ಲ ಎಂದರು.

ವಿಜಯ ಕಾಲೇಜಿನ ಡೀನ್ ಡಾ.ಆರ್.ವಿ.ಪ್ರಭಾಕರ ಮಾತನಾಡಿ, ಕುಟುಂಬಗಳು ಪ್ರೀತಿ-ವಿಶ್ವಾಸದಿಂದ ಬದುಕು ಕಟ್ಟಿಕೊಂಡು ಸಾಗಬೇಕು. ಅಧಿಕಾರ ಚಲಾವಣೆಯಿಂದ ಪ್ರೀತಿಸಲು ಸ್ಥಳವಿರುವುದಿಲ್ಲ. ಮಹಿಳೆಯರಿಗೆ ಸಮಾನವಾದ ಗೌರವ, ಸ್ಥಾನ-ಮಾನ ಸಿಕ್ಕಿದರೆ ದೇಶ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರನ್ನು ಪುರುಷರು ಸಮಾನವಾಗಿ ಕಾಣುವಂತಾಗಬೇಕು ಎಂದು ನುಡಿದರು. ಕಾರ್ಯಕ್ರಮದಲ್ಲಿ ವಿಜಯ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಡಿ.ಆರ್.ಸುಧಾ, ಉಪಪ್ರಾಂಶುಪಾಲೆ ಮಮತಾ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News