ಅರಣ್ಯ ಭವನದಲ್ಲಿ ಜೀವವೈವಿಧ್ಯ ದಿನಾಚರಣೆ: ಪದ್ಮಶ್ರಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕರಿಗೆ ಸನ್ಮಾನ

Update: 2019-05-22 16:50 GMT

ಬೆಂಗಳೂರು, ಮೇ 22: ಕರ್ನಾಟಕ ಜೀವವೈವಿಧ್ಯ ಮಂಡಳಿಯು 2019-20ನೆ ಸಾಲಿನ ಅಂತರ್‌ರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯನ್ನು ನಗರದ ಅರಣ್ಯ ಭವನದಲ್ಲಿ ಸಡಗರದಿಂದ ಆಚರಿಸಿತು.

ಬುಧವಾರ ಇಲ್ಲಿನ ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ‘ನಮ್ಮ ಜೀವ ವೈವಿಧ್ಯತೆ, ನಮ್ಮ ಆಹಾರ, ನಮ್ಮ ಆರೋಗ್ಯ’ ಎಂದು ಘೋಷ ವಾಕ್ಯದೊಂದಿಗೆ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಲ್ಲದೆ, ಅವರ ಹಾದಿಯಲ್ಲಿ ನಡೆಯುತ್ತಿರುವ ಅವರ ಪುತ್ರ ಡಾ.ಉಮೇಶ್ ಕಾಯಕ್ರಮದಲ್ಲಿ ಪಾಲ್ಗೊಂಡು, ಪರಿಸರ ಸಂರಕ್ಷಣೆಯ ಕುರಿತು ಮಾತುಗಳನ್ನಾಡಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್, ಮಂಡಳಿ ಅಧ್ಯಕ್ಷ ಎಸ್.ಪಿ ಶೇಷಾದ್ರಿ ಹಾಗೂ ಡಾ.ವಿರೇಂದರ್ ಸಿಂಗ್ ಪಾಲ್ಗೊಂಡಿದ್ದರು.

ಜೀವವೈವಿಧ್ಯತೆ ಸಂರಕ್ಷಣೆ, ಅವುಗಳ ಸುಸ್ಥಿರ ಬಳಕೆ, ಜೈವಿಕ ಸಂಪನ್ಮೂಲಗಳ ಲಾಭ ಮತ್ತು ನ್ಯಾಯ ಸಮ್ಮತ ಹಂಚಿಕೆ, ಪಾರಂಪರಿಕ ಜ್ಞಾನಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಸನ್ಮಾನಿಸುವ ಸಲುವಾಗಿ ಕರ್ನಾಟಕ ಜೀವವೈವಿಧ್ಯ ಮಂಡಳಿಯು 2019-20ನೆ ಸಾಲಿನಲ್ಲಿ 5 ವಿಭಾಗಗಳಲ್ಲಿ ಜೀವವೈವಿಧ್ಯ ಪ್ರಶಸ್ತಿಯನ್ನು ಸ್ಥಾಪಿಸಿದೆ.

ಸಾಮಾನ್ಯ ವಿಭಾಗದಲ್ಲಿ ಸಾಲುಮರದ ನಿಂಗಣ್ಣ-ರಾಮನಗರ ಜಿಲ್ಲೆ, ಜೀವವೈವಿಧ್ಯತೆ ಮಹಿಳಾ ಪ್ರಶಸ್ತಿ ವಿಭಾಗದಲ್ಲಿ ಕಾನನ ಕೃಷಿಕ ಮಹಿಳೆಯರ ಸಂಘ, ಮೈಸೂರು ಜಿಲ್ಲೆ, ಕೃಷಿ ಜೀವವೈವಿಧ್ಯತೆ ವಿಭಾಗದಲ್ಲಿ ಸಹಜ ಸಮೃದ್ಧ ಸಂಸ್ಥೆ, ಬೆಂಗಳೂರು ಈ ಪ್ರಶಸ್ತಿಗೆ ಭಾಜನರಾದರು.

ಜೀವವೈವಿಧ್ಯತೆ ಮತ್ತು ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಲುಮರದ ತಿಮ್ಮಕ್ಕನವರಿಗೆ ವಿಶೇಷ ಜೀವವೈವಿಧ್ಯತೆ ಪ್ರಶಸ್ತಿಯನ್ನು ನೀಡಲಾಯಿತು. ಈ ಎಲ್ಲ ಸಾಧಕರಿಗೂ ಮಂಡಳಿಯ ವತಿಯಿಂದ ವಿಶೇಷ ಸನ್ಮಾನದೊಂದಿಗೆ 25 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

ಅದೇ ರೀತಿ ಘೋಷವಾಕ್ಯದ ಕುರಿತು 7ರಿಂದ 10ನೆ ತರಗತಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು, ಸಾರ್ವಜನಿಕರಿಗೆ ಛಾಯಾಚಿತ್ರ ಸ್ಪರ್ಧೆ, ಕನ್ನಡ ಹಾಗೂ ಆಂಗ್ಲ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿ ವಿಜೇತರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News