ವಿಶ್ವಕಪ್ ಅಭಿಯಾನ: ಲಂಡನ್‌ಗೆ ಬಂದಿಳಿದ ಭಾರತ ಕ್ರಿಕೆಟ್ ತಂಡ

Update: 2019-05-23 03:45 GMT

ಲಂಡನ್: ಈ ತಿಂಗಳ 30ರಿಂದ ಜುಲೈ 14ರವರೆಗೆ ನಡೆಯುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಭಾರತ ಕ್ರಿಕೆಟ್ ತಂಡ ಬುಧವಾರ ರಾತ್ರಿ ಲಂಡನ್‌ಗೆ ಬಂದಿಳಿದಿದೆ.

"ಟಚ್‌ಡೌನ್ ಲಂಡನ್‌ ಟೀಮ್‌ ಇಂಡಿಯಾ" ಶೀರ್ಷಿಕೆಯೊಂದಿಗೆ ಬಿಸಿಸಿಐ ಭಾರತೀಯ ಕ್ರಿಕೆಟ್ ತಂಡದ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದೆ.

ನಾಯಕ ವಿರಾಟ್ ಕೊಹ್ಲಿ ಕೂಡಾ "ಟಚ್‌ಡೌನ್ ಯುಕೆ!" ಎಂಬ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಅಪ್‌ಲೋಡ್ ಮಾಡಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ರ್ಯಾಂಕಿಂಗ್ ಹೊಂದಿರುವ ಭಾರತ ತಂಡ ಮೂರನೇ ರ್ಯಾಂಕ್ ಹೊಂದಿರುವ ದಕ್ಷಿಣ ಆಫ್ರಿಕಾ ಜತೆ ಸೆಣೆಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಉದ್ಘಾಟನಾ ಪಂದ್ಯದಲ್ಲಿ ಮೇ 30ರಂದು ಅತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾದ ಸವಾಲು ಎದುರಿಸಲಿದೆ.

ಇದಕ್ಕೂ ಮುನ್ನ "ಮೆನ್ ಇನ್ ಬ್ಲೂ" ತಂಡ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ಓವಲ್ ಮತ್ತು ರೋಸ್ ಬೌವ್ಲ್‌ನಲ್ಲಿ ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಎಲ್ಲ ಹತ್ತು ತಂಡಗಳು ಪರಸ್ಪರ ಒಂಬತ್ತು ಪಂದ್ಯಗಳನ್ನು ಆಡಲಿದ್ದು, ಅಂಕಪಟ್ಟಿಯ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. 1992ರ ವಿಶ್ವಕಪ್‌ನಲ್ಲಿ ಇದೇ ಮಾದರಿ ಅನುಸರಿಸಲಾಗಿತ್ತು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೂರನೇ ವಿಶ್ವಕಪ್ ಆಡುತ್ತಿದ್ದಾರೆ.

ಹದಿನೈದು ಮಂದಿಯ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್.ರಾಹುಲ್, ವಿಜಯ್ ಶಂಕರ್, ಎಂ.ಎಸ್. ಧೋನಿ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ಭುವನೇಶ್ವರ ಕುಮಾರ್, ಜಸ್‌ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಮುಹಮ್ಮದ್ ಶಮಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News