ರಾತ್ರಿ ಮತ್ತು ಹಗಲಿನಲ್ಲಿ ಸಂಭವಿಸುವ ಹೃದಯಾಘಾತಗಳಲ್ಲಿ ಯಾವುದು ಅಪಾಯಕಾರಿ?: ಇಲ್ಲಿದೆ ವಿವರ

Update: 2019-05-23 15:01 GMT

ಹೃದಯಾಘಾತವು ದಿನದ ಯಾವುದೇ ಸಮಯದಲ್ಲಿಯೂ ಸಂಭವಿಸಬಹುದು. ಇದೊಂದು ಗಂಭೀರ ಸ್ಥಿತಿಯಾಗಿದ್ದು,ಕೆಲವೊಮ್ಮೆ ವ್ಯಕ್ತಿಯ ದಿಢೀರ್ ಸಾವಿಗೂ ಕಾರಣವಾಗುತ್ತದೆ. ಇತ್ತೀಚಿನ ಅಧ್ಯಯನವೊಂದರಂತೆ ಹೃದಯಾಘಾತದ ತೀವ್ರತೆಯು ಅದು ಸಂಭವಿಸಿದ ದಿನದ ಸಮಯವನ್ನು ಅವಲಂಬಿಸಿರುತ್ತದೆ. ರಾತ್ರಿಗಿಂತ ಹಗಲಿನಲ್ಲಿ ಸಂಭವಿಸುವ ಹೃದಯಾಘಾತವು ಹೆಚ್ಚು ತೀವ್ರವಾಗಿರುತ್ತದೆ ಎಂದು ಈ ಅಧ್ಯಯನವು ಹೇಳಿದೆ.

ಟ್ರೆಂಡ್ಸ್ ಇನ್ ಇಮ್ಯುನಾಲಜಿಯಲ್ಲಿ ಪ್ರಕಟಗೊಂಡಿರುವ ಅಧ್ಯಯನವು ಹೃದಯದ ಬಡಿತಗಳ ಮರುಕಳಿಸುವ ಲಯಗಳು ಮತ್ತು ನಿರೋಧಕ ಪ್ರತಿಕ್ರಿಯೆಗಳ ನಡುವಿನ ಸಂಬಂಧವನ್ನು ವಿಶ್ಲೇಷಿಸಿದೆ. ಶರೀರವು ಬೆಳಕು,ಹಾರ್ಮೋನ್‌ಗಳು,ಚಯಾಪಚಯ ಮತ್ತು ಇತರ ದೈಹಿಕ ಪ್ರಕ್ರಿಯೆಗಳಂತಹ ವಿವಿಧ ಅಂಶಗಳಿಗೆ ಪ್ರತಿಕ್ರಿಯಿಸುವುದರಿಂದ ವಿಶ್ಲೇಷಣೆಯ ಫಲಿತಾಂಶಗಳು ಬೆಳಿಗ್ಗೆ ಮತ್ತು ಸಂಜೆ ವಿಭಿನ್ನವಾಗಿದ್ದವು. ಇಲಿಗಳ ಮೇಲೆ ಈ ಅಧ್ಯಯನವನ್ನು ನಡೆಸಲಾಗಿತ್ತು. ಮನುಷ್ಯರು ಮತ್ತು ಇಲಿಗಳಲ್ಲಿ ಬಿಳಿಯ ರಕ್ತಕಣಗಳು ಒಂದೇ ರೀತಿಯ ಲಯ ಸ್ವರೂಪವನ್ನು ಹೊಂದಿದ್ದು,ಇದು ಮರುಕಳಿಸುವ ಲಯದ ರೀತಿಯಲ್ಲಿಯೇ ಇರುತ್ತದೆ. ಸಂಶೋಧನೆಗಳ ಬಳಿಕ ಅಧ್ಯಯನವು,ಮನುಷ್ಯರಲ್ಲಿ ಹೃದಯಾಘಾತಗಳು ಉಂಟಾಗುವ ಸಾಧ್ಯತೆಯು ಹೆಚ್ಚು ಮತ್ತು ಬೆಳಗಿನ ಹೃದಯಾಘಾತಗಳು ರಾತ್ರಿಯ ಹೃದಯಾಘಾತಗಳಿಗಿಂತ ಹೆಚ್ಚು ತೀವ್ರವಾಗಿರುತ್ತವೆ ಎಂಬ ನಿರ್ಧಾರಕ್ಕೆ ಬಂದಿದೆ.

ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆಗಳು ಹೃದಯಾಘಾತದ ಲಕ್ಷಣಗಳನ್ನು ಎದುರಿಸಲು ನೆರವಾಗಬಲ್ಲವು. ಹೃದಯವು ಆರೋಗ್ಯಯುತವಾಗಿದ್ದರೆ ಹೃದಯಾಘಾತವುಂಟಾಗುವ ಅಪಾಯವೂ ಕಡಿಮೆಯಾಗುತ್ತದೆ. ಹೀಗಾ ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುವ ಕ್ರಮಗಳನ್ನು ಅನುಸರಿಸುವುದು ಮುಖ್ಯವಾಗುತ್ತದೆ. ಆರಂಭದ ಹಂತದಲ್ಲಿಯೇ ತಡೆಗಟ್ಟಲು ಹೃದಯಾಘಾತದ ಲಕ್ಷಣಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

ಹೃದಯಾಘಾತಕ್ಕೆ ಗುರಿಯಾಗುವ ಅಪಾಯವನ್ನು ತಗ್ಗಿಸಲು ಅನುಸರಿಸಬಹುದಾದ ಕೆಲವು ಮಾರ್ಗಗಳು ಇಲ್ಲಿವೆ.

ದಿನಕ್ಕೆ ಕನಿಷ್ಠ 20 ನಿಮಿಷಗಳನ್ನಾದರೂ ವ್ಯಾಯಾಮಕ್ಕೆ ಮೀಸಲಿಡಿ. ಹೃದಯದ ಆರೋಗ್ಯಕ್ಕೆ ಪೂರಕವಾದ ಆಹಾರಗಳನ್ನೇ ಸೇವಿಸಿ. ಯೋಗ ಮತ್ತು ಧ್ಯಾನದ ಮೂಲಕ ಒತ್ತಡವನು ಎದುರಿಸಿ. ಧೂಮ್ರಪಾನ ಮತ್ತು ಮದ್ಯಪಾನ ಬೇಡವೇ ಬೇಡ.ರಕ್ತದೊತ್ತಡದ ಮೇಲೆ ಗಮನವಿರಲಿ ಮತ್ತು ಕೊಲೆಸ್ಟ್ರಾಲ್ ಮಟ್ಟಗಳು ನಿಯಂತ್ರಣದಲ್ಲಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News