ಆತ್ಮಾವಲೋಕನ ಮಾಡಿಕೊಂಡು ಪಕ್ಷ ಸಂಘಟನೆ: ಸಿದ್ದರಾಮಯ್ಯ

Update: 2019-05-23 15:43 GMT

ಬೆಂಗಳೂರು, ಮೇ 23: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಚುನಾವಣೆಯಲ್ಲಿ ಅವರು ನೀಡುವ ತೀರ್ಪನ್ನು ಎಲ್ಲ ರಾಜಕೀಯ ಪಕ್ಷಗಳು ತಲೆ ಬಾಗಿ ಒಪ್ಪಿಕೊಳ್ಳಬೇಕು, ಅದನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗುರುವಾರ ತಮ್ಮ ಸರಕಾರಿ ನಿವಾಸ ‘ಕಾವೇರಿ’ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರು ನಮ್ಮ ರಾಜ್ಯ ಸೇರಿದಂತೆ ಇಡೀ ದೇಶದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ನೀಡಿದ್ದಾರೆ. ಕಳೆದ ಬಾರಿಗಿಂತ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಬಂದಿವೆ ಎಂದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಶೇ.40ರಷ್ಟು ಮತಗಳು ಬಂದಿವೆ. ಬಿಜೆಪಿಗೆ ಶೇ.54ರಷ್ಟು ಮತಗಳು ಬಂದಿವೆ. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿರುವವರಿಗೆ ಪಕ್ಷ ಹಾಗೂ ವೈಯಕ್ತಿಕವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಎಲ್ಲ ಜಿಲ್ಲೆಗಳು, ಕ್ಷೇತ್ರಗಳಿಂದ ಮಾಹಿತಿ ತೆಗೆದುಕೊಂಡು ನಾವು ಎಲ್ಲಿ ಎಡವಿದ್ದೇವೆ, ಫಲಿತಾಂಶ ಯಾಕೆ ಈ ರೀತಿ ಬಂದಿದೆ, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ ಸೋಲಿಗೆ ಕಾರಣವೇನು ಎಂಬುದರ ಕುರಿತು ಚರ್ಚೆ ಮಾಡುತ್ತೇವೆ. ಆತ್ಮಾವಲೋಕನ ಮಾಡಿಕೊಂಡು, ಪಕ್ಷ ಸಂಘಟನೆಗೆ ಆದ್ಯತೆ ನೀಡುತ್ತೇವೆ ಎಂದು ಅವರು ತಿಳಿಸಿದರು.

ಅತೃಪ್ತ ಶಾಸಕರ ನೆರವಿನೊಂದಿಗೆ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಮಾಡುವ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಜನ ಈಗ ನೀಡಿರುವ ತೀರ್ಪು ಕೇಂದ್ರದಲ್ಲಿ ಯಾರು ಆಡಳಿತ ನಡೆಸಬೇಕೆಂದು. ರಾಜ್ಯದಲ್ಲಿ ಯಾರು ಸರಕಾರ ಮಾಡಬೇಕೆಂದು ಕಳೆದ ವರ್ಷವೇ ತೀರ್ಪು ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಸೇರಿದಂತೆ ಯಾರೂ ಕಾಂಗ್ರೆಸ್ ಬಿಡಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News