ಯಾವುದೇ ರೀತಿಯ ನೈತಿಕ ಹೊಣೆ ಹೊರಲು ಸಿದ್ಧ: ದಿನೇಶ್ ಗುಂಡೂರಾವ್

Update: 2019-05-23 15:50 GMT

ಬೆಂಗಳೂರು, ಮೇ 23: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷ ಭಾರೀ ಸಂಖ್ಯೆಯಲ್ಲಿ ಕ್ಷೇತ್ರಗಳನ್ನು ಕಳೆದುಕೊಂಡಿರುವ ಹಿನ್ನೆಲೆ ರಾಜೀನಾಮೆ ಸೇರಿದಂತೆ ಯಾವುದೇ ರೀತಿಯ ನೈತಿಕ ಹೊಣೆ ಹೊರಲು ಸಿದ್ಧವಾಗಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿರುವಾಗಲೇ ಕಳಪೆ ಫಲಿತಾಂಶ ಬಂದಿದೆ. ಅಲ್ಲದೆ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ಘಟಾನುಘಟಿ ನಾಯಕರೇ ಸೋತಿದ್ದಾರೆ. ಇದು ನನಗೆ ತುಂಬಾ ನೋವು ಉಂಟು ಮಾಡಿದೆ ಎಂದರು.

ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿಲ್ಲ. 12 ರಿಂದ 14 ಸೀಟು ಬರುವ ನಿರೀಕ್ಷೆ ಇತ್ತು. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪಿಗೆ ಗೌರವ ಕೊಡಬೇಕಾಗುತ್ತದೆ ಎಂದ ಅವರು, ಮೈತ್ರಿಯಿಂದ ಸೋಲಾಯಿತು ಎಂಬ ವಿಚಾರವಾಗಿ ನಾನು ಬಹಳ ಚರ್ಚೆ ಮಾಡುವುದಿಲ್ಲ. ಏಕೆಂದರೆ ಪರಿಸ್ಥಿತಿ ನಮ್ಮ ವಿರುದ್ಧವಾಗಿದೆ ಎಂದು ಹೇಳಿದರು.

ಮೈತ್ರಿ ಸರಕಾರ ಪತನ ಮಾಡಬೇಕೆಂದು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಈಗಲೂ ಅದನ್ನೆ ಮಾಡಲು ಹೋಗುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ಮಾಡಲಾಗುವುದು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ, ನಾವು ಒಟ್ಟಿಗೆ ಇದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News