ಬಿ.ಕೆ.ಹರಿಪ್ರಸಾದ್ ವಿರುದ್ಧ ತೇಜಸ್ವಿ ಸೂರ್ಯಗೆ ಭರ್ಜರಿ ಗೆಲುವು

Update: 2019-05-23 17:14 GMT

ಬೆಂಗಳೂರು, ಮೇ 23: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ವಿರುದ್ಧ 3.19 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಸಂಭ್ರಮದಿಂದ ವಿಜಯೋತ್ಸವ ಆಚರಿಸಿದರು. 

ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಯಿತು. 11 ಗಂಟೆ ವೇಳೆಗೆ ಬಿಜೆಪಿ ಅಭ್ಯರ್ಥಿ 2,83,149 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ 1,51,617 ಮತಗಳನ್ನು ಪಡೆದಿದ್ದರು. ಮಧ್ಯಾಹ್ನ 12 ಗಂಟೆ ವೇಳೆಗೆ ಬಿಜೆಪಿ ಅಭ್ಯರ್ಥಿ 3,12,139 ಮತ ಗಳಿಸಿದ್ದರೆ ಕಾಂಗ್ರೆಸ್ ಅಭ್ಯರ್ಥಿ 1,71,439 ಮತಗಳನ್ನು ಪಡೆದಿದ್ದರು.

ಎಣಿಕೆ ಆರಂಭವಾದಾಗಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ತೇಜಸ್ವಿ ಸೂರ್ಯ ಎಣಿಕೆ ಕಾರ್ಯ ಪೂರ್ಣವಾಗುವವರೆಗೂ ಸಮಾನ ಅಂತರವನ್ನು ಕಾಯ್ದುಕೊಂಡಿದ್ದರು. ಅಂತಿಮವಾಗಿ ಬಿಜೆಪಿ ಅಭ್ಯರ್ಥಿ 7,16,209 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ 3,97,146 ಮತಗಳು ಪಡೆದು ಸೋಲೊಪ್ಪಿಕೊಂಡಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೇಜಸ್ವಿನಿ ಅನಂತ್‌ಕುಮಾರ್ ಟಿಕೆಟ್ ತಪ್ಪಿಸಿ, ತೇಜಸ್ವಿ ಸೂರ್ಯರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ತೇಜಸ್ವಿನಿ ಮುನಿಸಿಕೊಂಡು, ಸರಿಯಾಗಿ ಪ್ರಚಾರದಲ್ಲಿಯೂ ಪಾಲ್ಗೊಂಡಿರಲಿಲ್ಲ. ಅದರ ನಡುವೆಯೂ ಯಶಸ್ವಿಯಾಗಿ ಭರ್ಜರಿ ಜಯಗಳಿಸಿದ್ದಾರೆ.

ಮತ ಎಣಿಕಾ ಕೇಂದ್ರದ ಎದುರು ಜಮಾಯಿಸಿದ್ದ ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಹಾಗೂ ತೇಜಸ್ವಿ ಸೂರ್ಯ ಅಭಿಮಾನಿಗಳು, ಗೆಳೆಯರು ಪರಸ್ಪರ ಸಹಿ ವಿತರಿಸಿ, ಘೋಷಣೆಗಳನ್ನು ಕೂಗುತ್ತಾ, ನೃತ್ಯ ಮಾಡುತ್ತಾ ಸಂಭ್ರಮಿಸಿದರು. ಮೋದಿ, ಅಮಿತ್ ಶಾ ಹಾಗೂ ಹಿರಿಯ ನಾಯಕರ ಭಾವಚಿತ್ರಗಳನ್ನಿಟ್ಟುಕೊಂಡು ಘೋಷಣೆಗಳನ್ನು ಕೂಗಿ ಸಂಭ್ರಮಪಟ್ಟರು.

ದೇಶದಲ್ಲಿ ನಡೆದ 17 ನೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿದ್ದು, ಈ ಬಗ್ಗೆ ಪಕ್ಷದ ಎಲ್ಲ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ನಾವು ಜಾತಿ, ಧರ್ಮದ ಮೇಲೆ ಚುನಾವಣೆ ಎದುರಿಸಲಿಲ್ಲ. ನಮ್ಮ ಸೋಲಿನಿಂದ ಮೈತ್ರಿ ಸರಕಾರ ಉಳಿಯುತ್ತಾ, ಇಲ್ಲವಾ ಎಂಬುದು ನನಗೆ ಗೊತ್ತಿಲ್ಲ. ಅಲ್ಲದೆ, ಬಿಜೆಪಿ ಗೆಲುವಿಗೆ ಕಾರಣವೇನು ಎಂಬುದನ್ನು ಆ ಪಕ್ಷದವರೇ ಹೇಳಬೇಕು .

-ಬಿ.ಕೆ.ಹರಿಪ್ರಸಾದ್, ಬೆಂಗಳೂರು ದಕ್ಷಿಣ ಲೋಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News