ಮೋದಿಯ ಜಯ ಭಾರತದ ಆತ್ಮವನ್ನು ಕರಾಳ ರಾಜಕೀಯದಲ್ಲಿ ಮರೆಯಾಗಿಸಲಿದೆ: ‘ದ ಗಾರ್ಡಿಯನ್’ ಸಂಪಾದಕೀಯ

Update: 2019-05-24 08:35 GMT

ಹೊಸದಿಲ್ಲಿ, ಮೇ 24: “ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ವಿಜಯ ಭಾರತದ ಆತ್ಮವನ್ನು ಕರಾಳ ರಾಜಕೀಯದಲ್ಲಿ ಮರೆಯಾಗಿಸಲಿದೆ. ಇದು ದೇಶಕ್ಕೆ ಹಾಗೂ ಜಗತ್ತಿಗೆ ಕೆಟ್ಟ ಸುದ್ದಿ”… ಹೀಗೆಂದು ಬಣ್ಣಿಸಿದ್ದು ಬ್ರಿಟಿಷ್ ದೈನಿಕ theguardian.com ಸಂಪಾದಕೀಯ. ಸ್ವತಂತ್ರ ಭಾರತದ ಅತ್ಯಂತ ಅಮೂಲ್ಯ ಅಂಶ ಕಾರ್ಯನಿರತ ಬಹು-ಪಕ್ಷೀಯ ಪ್ರಜಾಪ್ರಭುತ್ವ''ವನ್ನು ಮೋದಿ ಅಪಾಯಕ್ಕೆ ದೂಡಿದ್ದಾರೆ ಎಂದೂ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಅವರೊಬ್ಬ ‘ವಿಭಜನಾತ್ಮ ವ್ಯಕ್ತಿತ್ವ’ ಹಾಗೂ ಸುಳ್ಳು ಹೇಳಿಕೆಗಳು ಮತ್ತು ತಾರತಮ್ಯಕಾರಿ ವಾಸ್ತವಗಳನ್ನು ಮಂಡಿಸಿದ ‘ನಿಸ್ಸಂಶಯವಾಗಿಯೂ ಒಬ್ಬ ವರ್ಚಸ್ವೀ ಪ್ರಚಾರಕ’ ಎಂದು ಸಂಪಾದಕೀಯ ಬಣ್ಣಿಸಿದೆ. ಕಾಂಗ್ರೆಸ್ ಹಾಗೂ ನೆಹರೂ-ಗಾಂಧಿ ಕುಟುಂಬ ಅವರನ್ನು ಹೇಗೆ ಸೋಲಿಸುವುದೆಂಬ ಬಗ್ಗೆ ಗಂಭೀರವಾಗಿ ಪುನರಾಲೋಚಿಸಬೇಕು ಎಂದೂ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಮೋದಿ ಭಾಗವಾಗಿರುವ ಹಿಂದು ರಾಷ್ಟ್ರವಾದಿ ಆಂದೋಲನ ಮೇಲ್ವರ್ಗದ ಹಿಂದುಗಳು, ಕಾರ್ಪೊರೇಟ್ ಪರ ಆರ್ಥಿಕ ಪ್ರಗತಿ, ಸಾಂಸ್ಕೃತಿಕ ಸಂಪ್ರದಾಯಿತ್ವ, ತೀವ್ರ ಸ್ತ್ರೀದ್ವೇಷ ಹಾಗೂ ಹಲವಾರು ಸಂಸ್ಥೆಗಳ ಮೇಲಿನ ಬಿಗಿ ಹಿಡಿತದ ಮೇಲೆಯೇ ಗಮನ ಹರಿಸಿ ಭಾರತವನ್ನು ಅಸಮಾಧಾನಕರ ಬದಲಾವಣೆಯತ್ತ ಕೊಂಡೊಯ್ಯುವುದು ಎಂದು ‘ದ ಗಾರ್ಡಿಯನ್’ ಸಂಪಾದಕೀಯ ಹೇಳಿದೆ. ಭಾರತೀಯ ಮುಸ್ಲಿಮರು ‘ರಾಜಕೀಯ ಅನಾಥರು’  ಹಾಗೂ ಸಂಸತ್ತಿನಲ್ಲಿ ಅವರ ಪ್ರತಿನಿಧಿತ್ವದ ಕುಸಿತ ಹಾಗೂ ಹಿಂದುತ್ವ ಅವರನ್ನು ಎರಡನೇ ದರ್ಜೆ ನಾಗರಿಕರಂತೆ ಹೇಗೆ ನೋಡುತ್ತಿದೆ ಎಂಬ ಬಗ್ಗೆಯೂ ಲೇಖನದಲ್ಲಿ ಬರೆಯಲಾಗಿದೆಯಲ್ಲದೆ, ಈ ವರ್ಷದಲ್ಲಿ ಮೋದಿ ಯಾವುದರ ಪರಿವೆಯಿಲ್ಲದೇ ಭಾರತ ಮತ್ತು ಪಾಕಿಸ್ತಾನವನ್ನು ಯುದ್ಧದ ಅಂಚಿನವರೆಗೆ ಕೊಂಡೊಯ್ದಿದ್ದಾರೆಂದು ಹೇಳಿದೆ.

ಭಾರತದಲ್ಲಿನ ಅಸಮಾನತೆ ಹೋಗಲಾಡಿಸುವುದಾಗಿ ಕೇವಲ ಬಾಯಿ ಮಾತಿನ ಹೇಳಿಕೆಯನ್ನು ಬಿಜೆಪಿ ನೀಡುತ್ತಿದೆ ಹಾಗೂ  ಭಾರತದಲ್ಲಿನ ಜಾತಿ ಮತ್ತು ಧರ್ಮಗಳಲ್ಲಿನ ಸಂಘರ್ಷ ಪಕ್ಷಕ್ಕೆ ಲಾಭಕರವಾಗಿದೆ. ವಿಪಕ್ಷಗಳು ಹೇಗೆ ಭಾರತದಲ್ಲಿ ಕಾರ್ಯಾಚರಿಸಬೇಕೆಂಬುದರ ಬಗ್ಗೆಯೂ ಸಂಪಾದಕೀಯ ಟಿಪ್ಪಣಿ ಮಾಡಿದೆಯಲ್ಲದೆ ಅವುಗಳು ಈಗಿನದ್ದಕ್ಕಿಂತಲೂ ಹೆಚ್ಚಾಗಿ ದೇಶದ ಬಡವರ ಜತೆ ಸಂಪರ್ಕದಲ್ಲಿರಬೇಕೆಂದು ಹೇಳಿದೆ.

ನ್ಯಾಯಾರ್ಕ್ ಟೈಮ್ಸ್ ನಲ್ಲಿ ಪಂಕಜ್ ಮಿಶ್ರಾ ಲೇಖನ

‘ಹೌ ನರೇಂದ್ರ ಮೋದಿ ಸೆಡ್ಯೂಸ್ಡ್ ಇಂಡಿಯಾ ವಿದ್ ಎನ್ವಿ ಆ್ಯಂಡ್ ಹೇಟ್’ ಎಂಬ ಶೀರ್ಷಿಕೆಯ ಪಂಕಜ್ ಮಿಶ್ರಾ ಅವರ ಲೇಖನ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟಗೊಂಡಿದೆ. ‘ದುಃಸ್ವಪ್ನ'ವನ್ನು ಇನ್ನಷ್ಟು ದೀರ್ಘಗೊಳಿಸಲು ಮತದಾರರು ಈ ಆಯ್ಕೆ ನಡೆಸಿದ್ದಾರೆ ಎಂದು ಲೇಖನದಲ್ಲಿ ಬರೆದಿರುವ ಮಿಶ್ರಾ “ಮೋದಿ 2014ರ ಚುನಾವಣೆ ವೇಳೆ ನೀಡಿದ್ದ ಮುಖ್ಯ ಆಶ್ವಾಸನೆಗಳಾದ ಉದ್ಯೋಗ ಮತ್ತು ರಾಷ್ಟ್ರೀಯ ಭದ್ರತೆಯನ್ನು ಈಡೇರಿಸಲು ಸಂಪೂರ್ಣವಾಗಿ ವಿಫಲರಾಗಿರುವುದನ್ನು ಪರಿಗಣಿಸಿದಾಗ ಅವರ ಅಜೇಯ ವರ್ಚಸ್ಸಿನ ಹಿಂದಿನ ಮೂಲಗಳು ನಿಗೂಢ” ಎಂದು ಬರೆದಿದ್ದಾರೆ.

ಕಾರ್ಪೊರೇಟ್ ಒಡೆತನದ ಮಾಧ್ಯಮ ‘ಮೋದಿಯನ್ನು ಭಾರತದ ರಕ್ಷಕ’ ಎಂಬಂತಹ ಇಮೇಜ್ ಸೃಷ್ಟಿಸಿದೆ ಎಂದಿದ್ದಾರೆ. 2014ರಿಂದ ಭಾರತದ ಟ್ರೋಲ್ ಗಳೇ ಅಧಿಕವಾಗಿರುವ ಸೋಶಿಯಲ್ ಮೀಡಿಯಾ, ಹೊಗಳುಭಟ ದಿನಪತ್ರಿಕೆಗಳು ಹಾಗೂ ಟಿವಿ ವಾಹಿನಿಗಳಿಂದಾಗಿ ಮೋದಿಯ ಕುರಿತಾದ ಹಲವಾರು ಕಾಲ್ಪನಿಕ ಸೃಷ್ಟಿಗಳು ಹರಿದಾಡಿವೆ ಎಂದು ಮಿಶ್ರಾ ಲೇಖನ ವಿವರಿಸಿದೆ. ಚುನಾವಣಾ ಆಯೋಗ ನಿರ್ಲಜ್ಜೆಯಿಂದ ತಾರತಮ್ಯಕಾರಿ ನಿಲುವು ಹೊಂದಿದೆ ಎಂದು ವಿಪಕ್ಷಗಳು ಸರಿಯಾಗಿಯೇ ಹೇಳಿವೆ ಎಂದು  ಲೇಖನದಲ್ಲಿ ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News