×
Ad

ರಾಜೀನಾಮೆಯ ಇಂಗಿತ ವ್ಯಕ್ತಪಡಿಸಿದರೇ ಸಿಎಂ ಕುಮಾರಸ್ವಾಮಿ?: ಸಚಿವ ಸಂಪುಟ ಸಭೆಯಲ್ಲಿ ನಡೆದದ್ದಿಷ್ಟು…

Update: 2019-05-24 22:10 IST

ಬೆಂಗಳೂರು, ಮೇ 24: ‘ನನಗೇನು ಸ್ವಾರ್ಥವಿಲ್ಲ, ಅಧಿಕಾರದ ಆಸೆಯೂ ಇಲ್ಲ. ನಿಮಗೆ ಇಷ್ಟವಿಲ್ಲ ಎಂದರೆ ಮುಖ್ಯಮಂತ್ರಿ ಆಗಿ ಮುಂದುವರಿಯುವುದಿಲ್ಲ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅನೌಪಚಾರಿಕ ಸಚಿವ ಸಂಪುಟ ಸಭೆಯಲ್ಲಿ ಇಂಗಿತ ವ್ಯಕ್ತಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಶುಕ್ರವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಸೋಲಾಗಿರುವ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಕುಮಾರಸ್ವಾಮಿ, ಜಾತ್ಯತೀತ ಶಕ್ತಿಗಳು ಉಳಿಯಬೇಕೆನ್ನುವ ಕಾರಣಕ್ಕಷ್ಟೇ ಈ ಜವಾಬ್ದಾರಿ ಹೊತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆಂದು ಗೊತ್ತಾಗಿದೆ.

ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಯಾವುದೇ ಅಂಜಿಕೆ ಬೇಡ. ಎಲ್ಲರೂ ಮುಕ್ತ ಮನಸ್ಸಿನಿಂದ ಬಾಯಿಬಿಟ್ಟು ಹೇಳಿ ಎಂದು ಕುಮಾರಸ್ವಾಮಿ ಸಂಪುಟ ಸಭೆಯಲ್ಲಿ ಸಚಿವರಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಉತ್ತಮ ಆಡಳಿತದ ಸಂಕಲ್ಪ: ಸಿಎಂ ಕುಮಾರಸ್ವಾಮಿ ಹೇಳಿಕೆಯಿಂದ ವಿಚಲಿತರಾದ ಉಪಮುಖ್ಯಮಂತ್ರಿ ಡಾ.ಪರಮೇಶ್ವರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು-ಗೆಲುವು ಎಲ್ಲ ಸಹಜ. ನೀವು ಸ್ಥಾನ ಬಿಡುವ ಬಗ್ಗೆ ಯೋಚಿಸುವುದು ಬೇಡ. ಒಳ್ಳೆಯ ಆಡಳಿತ ನೀಡುವ ದೃಷ್ಟಿಯಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯೋಣ ಎಂದು ಅಭಯ ನೀಡಿದ್ದಾರೆಂದು ಹೇಳಲಾಗಿದೆ.

ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯನವರ ಅಭಿಪ್ರಾಯವೂ ಇದೇ ಆಗಿದೆ. ಮೈತ್ರಿ ಸರಕಾರ ಇನ್ನೂ 4 ವರ್ಷ ಸುಭದ್ರವಾಗಿರಬೇಕು. ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳ ಸಹಜ. ಶಾಸಕರಿಗೆ ಹೆಚ್ಚಿನ ಸಮಯ ಮೀಸಲಿಡಿ. ಎಲ್ಲವನ್ನು ಸರಿಪಡಿಸಲಾಗುವುದು ಎಂದು ಸಲಹೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಫಲಿತಾಂಶದ ಕಾರಣಕ್ಕೆ ಮೈತ್ರಿ ಮುರಿಯುವುದು ಬೇಡ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ. ಬೇರೆ ಯಾವುದೇ ನಿರ್ಧಾರ ಕೈಗೊಳ್ಳುವುದು ಬೇಡ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದ್ದಾರೆಂದು ಹೇಳಲಾಗಿದೆ.

ಮೈತ್ರಿ ಸರಕಾರಕ್ಕೆ ಮುಜುಗರ ಉಂಟಾಗುವ ರೀತಿಯಲ್ಲಿ ಮಾಧ್ಯಮಗಳಲ್ಲಿ ಯಾವುದೇ ಹೇಳಿಕೆಗಳನ್ನು ನೀಡಬಾರದು. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಒಗ್ಗಟ್ಟಿನಿಂದ ಮುನ್ನಡೆಯುವ ಬಗ್ಗೆ ಎಲ್ಲ ಸಚಿವರು ಅಭಿಮತ ವ್ಯಕ್ತಪಡಿಸಿದ್ದಾರೆಂದು ವಿಶ್ವಾಸನೀಯ ಮೂಲಗಳು ಹೇಳಿವೆ.

‘ಸಚಿವ ಸಂಪುಟದ ಅನೌಪಚಾರಿಕ ಸಭೆಯಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಕುರಿತು ಚರ್ಚಿಸಲಾಯಿತು. ಸಂಪುಟದ ಎಲ್ಲ ಸಹೋದ್ಯೋಗಿಗಳು ನನ್ನ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರಿಗೆ ಹಾಗೂ ಮಿತ್ರ ಪಕ್ಷ ಕಾಂಗ್ರೆಸ್‌ನ ಎಲ್ಲ ಮುಖಂಡರಿಗೆ ನಾನು ಆಭಾರಿಯಾಗಿದ್ದೇನೆ’

-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

‘ಈ ಚುನಾವಣೆಯಲ್ಲಿ ಪಕ್ಷ ನಮ್ಮ ನಿಷ್ಠಾವಂತ ಕಾರ್ಯಕರ್ತರು ಹಗಲು-ರಾತ್ರಿ ಶ್ರಮಿಸಿದ್ದಾರೆ. ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಸೋಲುಗಳಿಂದ ನಿರಾಶರಾಗದೆ ನಿರಂತರವಾಗಿ ಗೆಲುವಿಗಾಗಿ ಹೋರಾಡುವವನು ನಾಯಕನಾಗುತ್ತಾನೆ ಎನ್ನುವುದು ನಮ್ಮ ಕಾರ್ಯಕರ್ತರಿಗೆ ತಿಳಿದಿರಲಿ’

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ (ಟ್ವಿಟ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News