ಬಿಬಿಎಂಪಿ ಬಜೆಟ್ ಅನುಮೋದನೆ ತಡೆ ಕೋರಿ ಮುಖ್ಯ ಚುನಾವಣಾಧಿಕಾರಿಗೆ ದೂರು

Update: 2019-05-24 17:40 GMT

ಬೆಂಗಳೂರು, ಮೇ 24: ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ರಾಜ್ಯ ಸರಕಾರ ಅನುಮೋದನೆ ನೀಡಿರುವ ಬಿಬಿಎಂಪಿ ಬಜೆಟ್‌ಗೆ ತಡೆ ನೀಡಬೇಕು ಎಂದು ಪಾಲಿಕೆಯ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ನಗರದಲ್ಲಿಂದು ಚುನಾವಣಾ ಆಯೋಗಕ್ಕೆ ಭೇಟಿ ನೀಡಿ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ದೂರಿನ ಪತ್ರ ನೀಡಿದ್ದು, ಪಾಲಿಕೆಯ ಬಜೆಟ್ ಅನುಮೋದನೆಯನ್ನು ತಡೆ ಹಿಡಿಯಬೇಕು. ಇದು ನೀತಿ ಸಂಹಿತೆ ವಿರುದ್ಧವಾದುದಾಗಿದೆ ಎಂದು ಪ್ರಸ್ತಾಪಿಸಿದ್ದಾರೆ.

2019-20 ನೆ ಸಾಲಿನ ಬಿಬಿಎಂಪಿ ಬಜೆಟ್ ಅನುಮೋದನೆ ನೀಡುವಂತೆ ಪಾಲಿಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದರಿಂದ ಮೇ 27 ರವರೆಗೂ ನೀತಿ ಸಂಹಿತೆ ಜಾರಿಯಲ್ಲಿದೆ. ಈ ವೇಳೆ ಸರಕಾರ ಯಾವುದಕ್ಕೂ ಅನುಮೋದನೆ ನೀಡುವಂತಿಲ್ಲ. ಆದರೂ, ಸರಕಾರ ಅನುಮೋದನೆ ನೀಡಿದೆ. ಅದಕ್ಕೆ ಆಯೋಗ ತಡೆ ನೀಡಬೇಕು ಎಂದು ಅವರು ಕೋರಿದ್ದಾರೆ.

ರಾಜ್ಯ ಸರಕಾರ ಮೇ 22 ರಂದು 10,129 ಕೋಟಿ ರೂ.ಗಳ ಮೊತ್ತದ ಪಾಲಿಕೆ ಬಜೆಟ್‌ಗೆ ಅನುಮೋದನೆ ನೀಡಿದೆ. ಅದರ ಜತೆಗೆ ಅಂದಾಜು ಮೊತ್ತದ ಮೇಲೆ ಶೇ.15 ರಷ್ಟು ಹೆಚ್ಚಿನ ಆಯವ್ಯಯವನ್ನು ಅಂದಾಜಿಸಿ ಪಾಲಿಕೆ ಬಜೆಟ್‌ಅನ್ನು 11,645 ಕೋಟಿ ಗೆ ಮಿತಿಗೊಳಿಸಿ ಅನುಮೋದನೆ ನೀಡಿದೆ. ಉಳಿದ ಮೊತ್ತವಾದ 1,308 ಕೋಟಿ ರೂ.ಗಳಿಗೆ ಪಾಲಿಕೆಯ ಪೂರಕ ಆಯವ್ಯಯದಲ್ಲಿ ಅವಕಾಶ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಇದು ನೀತಿ ಸಂಹಿತೆ ವಿರುದ್ಧವಾಗಿದ್ದು, ಆಯೋಗ ಕೂಡಲೇ ಇದನ್ನು ತಡೆ ಹಿಡಿಯಬೇಕು ಎಂದು ಪದ್ಮನಾಭರೆಡ್ಡಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News