ಆಯುರ್ವೇದ ಕಾಲೇಜು ಭೂಮಿ ಸ್ವಾಧೀನಕ್ಕೆ ವಿರೋಧ

Update: 2019-05-24 17:42 GMT

ಬೆಂಗಳೂರು, ಮೇ 24: ಬಿಬಿಎಂಪಿಯಿಂದ ಸರಕಾರಿ ಆಯುರ್ವೇದ ಕಾಲೇಜಿನ ಮುಕ್ಕಾಲು ಎಕರೆ ಭೂಮಿಯನ್ನು ರಸ್ತೆ ಅಗಲೀಕರಣ ಸಂಬಂಧ ಸ್ವಾಧೀನ ಪಡೆಯಲು ಮುಂದಾಗಿದ್ದು, ಅದಕ್ಕೆ ಇದೀಗ ಅಪಸ್ವರ ಕೇಳಿಬರುತ್ತಿದೆ. 

ಆಸ್ಪತ್ರೆಯ ಭೂಮಿ ಸ್ವಾಧೀನದಿಂದ ಕಾಲೇಜು ಸ್ಥಳದ ಜತೆಗೆ ಇಲ್ಲಿನ ರೋಗಿಗಳ ಚಿಕಿತ್ಸೆಗಾಗಿ ಬಳಸುವ 15ಕ್ಕೂ ಅಧಿಕ ಔಷಧೀಯ ಮರಗಳು ನಾಶವಾಗುತ್ತವೆ. ಅಲ್ಲದೆ, ರಸ್ತೆಯು ಆಸ್ಪತ್ರೆಯ ವಿಷೇಶ ವಾರ್ಡ್ ಪಕ್ಕದಲ್ಲಿ ಹಾದು ಹೋಗಲಿದ್ದು, ವಾಹನಗಳ ಸಂಚಾರದಿಂದ ರೋಗಿಗಳಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ, ಇದನ್ನು ಕೈ ಬಿಡಬೇಕು ಎಂದು ಕಳೆದ ಎರಡು ದಿನಗಳ ಹಿಂದೆಯೇ ವಿದ್ಯಾರ್ಥಿಗಳು ಮನವಿ ಪತ್ರ ಸಲ್ಲಿಸಿದ್ದಾರೆ.

ಮೆಜೆಸ್ಟಿಕ್ ಹಿಂಭಾಗದ ಸುಬೇದಾರ್ ಛತ್ರಂ ರಸ್ತೆಯಲ್ಲಿ ಮೂವಿಲ್ಯಾಂಡ್ ಚಿತ್ರಮಂದಿರ ಮುಂಭಾಗದಿಂದ ಧನ್ವಂತರಿ ರಸ್ತೆಗೆ ಸಂಪರ್ಕ ಕಲ್ಪಿಸುವ ಚಿಕ್ಕದಾದ ಮಾರ್ಗವೊಂದು ಇದೆ. ಆ ಮಾರ್ಗದಲ್ಲಿ ಜನಜಂಗುಳಿ ಜಾಸ್ತಿಯಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಮಾರ್ಗದ ಅಗಲೀಕರಣಕ್ಕೆ ಬಿಬಿಎಂಪಿ ಮುಂದಾಗಿದೆ.

ಮಾರ್ಗದ ಒಂದು ಬದಿ ಆಯುರ್ವೇದ ಆಸ್ಪತ್ರೆಯ ಕಾಂಪೌಂಡ್ ಇದ್ದು, ಮತ್ತೊಂದು ಬದಿ ವಾಣಿಜ್ಯ ಮಳಿಗೆಗಳೇ ತುಂಬಿರುವ ಕಟ್ಟಡಗಳಿವೆ. ಆದರೆ, ಬಿಬಿಎಂಪಿ ವಾಣಿಜ್ಯ ಮಳಿಗೆಗಳ ಜಾಗವನ್ನು ಬಿಟ್ಟು ನಗರದಲ್ಲಿರುವ ಏಕೈಕ ಸರಕಾರಿ ಆಯುರ್ವೇದ ಕಾಲೇಜು ಕಡೆಯ 13 ಅಡಿ ಜಾಗವನ್ನೇ ಸ್ವಾಧೀನಕ್ಕೆ ಪಡೆಯಲು ಮುಂದಾಗಿರುವುದು ಎಷ್ಟು ಸರಿ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ.

ಸಿಸಿಐಎಂ ನಿಯಮ ಉಲ್ಲಂಘನೆ: ಸಿಸಿಐಎಂ (ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್) ನಿಮಯದ ಪ್ರಕಾರ ಆಯುರ್ವೇದ ಕಾಲೇಜು ಇಂತಿಷ್ಟು ಜಾಗ ಹೊಂದಿರಬೇಕು ಎಂಬ ನಿಯಮವಿದೆ. ಸದ್ಯ ಆಸ್ಪತ್ರೆಯು 5.3 ಹೆಕ್ಟೇರ್ ಜಾಗವಿದ್ದು, ನಿಯಮ ಪಾಲಿಸುತ್ತಿದೆ. ಈಗ ಬಿಬಿಎಂಪಿ ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನ ಪಡಿಸಿಕೊಂಡರೆ ಆಸ್ಪತ್ರೆ ಜಾಗ 4.6 ಹೆಕ್ಟೇರ್‌ಗೆ ಬರಲಿದೆ. ಈ ಮೂಲಕ ಕಾಲೇಜು ಸಿಸಿಐಎಂ ನಿಯಮ ಉಲ್ಲಂಘಿಸಿದಂತಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಕಾಲೇಜಿನ ಅಭಿವೃದ್ಧಿಗೆ ಯೋಜನೆಗೆ ತೊಡಕಾಗಲಿದೆ. ಈ ಕುರಿತು ಎರಡು ತಿಂಗಳ ಹಿಂದೆ ಪ್ರಸ್ತಾವನೆ ಬಂದಾಗ ವಿದ್ಯಾರ್ಥಿಗಳು, ಆಸ್ಪತ್ರೆ, ವೈದ್ಯರು ಹಾಗೂ ನೌಕರರು ಒಟ್ಟಾಗಿ ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದೆವು. ಆದರೂ, ಈಗ ಸ್ವಾಧೀನಕ್ಕೆ ಮುಂದಾಗಿರುವುದು ಬೇಸರವಾಗುತ್ತಿದೆ ಎಂದು ವೈದ್ಯರೊಬ್ಬರು ಹೇಳಿದ್ದಾರೆ.

ಅಭಿವೃದ್ಧಿ ಬಿಟ್ಟು ಭೂಸ್ವಾಧೀನ ಏಕೆ?: ಸದ್ಯ ನಗರದ ಕೇಂದ್ರ ಭಾಗದಲ್ಲಿರುವ ಈ ಸರಕಾರಿ ಆಯುರ್ವೇದ ಕಾಲೇಜಿಗೆ 50 ವರ್ಷಗಳ ಇತಿಹಾಸವಿದೆ. ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಸಾಕಷ್ಟು ಜನ ಇಲ್ಲಿಗೆ ಚಿಕಿತ್ಸೆಗೆಂದು ಬರುತ್ತಾರೆ. ನಿತ್ಯ ಸಾವಿರಕ್ಕು ಹೆಚ್ಚು ಹೊರ ರೋಗಿಗಳು ಚಿಕಿತ್ಸೆಗೆಂದು ಬರುತ್ತಿದ್ದು, ಒಳರೋಗಿಗಳ ವಿಭಾಗದಲ್ಲಿ ಸುಮಾರು 400 ಹಾಸಿಗೆ ಇದ್ದರೂ, ಯಾವಾಗಲೂ ತುಂಬಿರುತ್ತದೆ. ಉಳಿದಂತೆ ಕಾಲೇಜಿನಲ್ಲಿ ಸದ್ಯ 600ಕ್ಕೂ ಹೆಚ್ಚು ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಸಮಸ್ಯೆ ಇದ್ದು, ಅದಕ್ಕೆ ಜಾಗದ ಕೊರತೆ ಎದುರಿಸಲಾಗುತ್ತಿದೆ. ಈ ವೇಳೆ ಆಸ್ಪತ್ರೆಯನ್ನು ಅಭಿವೃದ್ಧಿ ಮಾಡಲು ಮುಂದಾಗಬೇಕಾದ ಸರಕಾರ ಭೂಸ್ವಾಧೀನ ಮಾಡುವುದು ಸರಿಯಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News