ಹಣ್ಣುಗಳ ಸಿಪ್ಪೆಗಳಿಂದ ನೀರು ಶುದ್ಧೀಕರಣ: ವಿದ್ಯಾರ್ಥಿಯ ಸಂಶೋಧನೆ

Update: 2019-05-24 17:55 GMT

ಬೆಂಗಳೂರು, ಮೇ 24: ಬೆಳ್ಳಂದೂರು ಕೆರೆಯ ನೊರೆ ಹಾಗೂ ಬೆಂಕಿಗೆ ಕಾರಣವಾದ ರಾಸಾಯನಿಕ ಮಿಶ್ರಿತ ನೀರನ್ನು ವಿವಿಧ ಹಣ್ಣುಗಳ ಸಿಪ್ಪೆಗಳ ಮೂಲಕ ಶುದ್ಧೀಕರಿಸುವ ವಿಧಾನವನ್ನು ವೈಟ್‌ಫೀಲ್ಡ್ ಸಮೀಪದ ಎಂವಿಜೆ ಎಂಜಿನಿಯರಿಂಗ್ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಸಂಶೋಧಿಸಿದ್ದಾರೆ.

ಇಲ್ಲಿನ ಏರೋನಾಟಿಕ್ಸ್ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ ಎ.ಪವನ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಯೋಗಾಲಯದಲ್ಲಿ ಈ ಪ್ರಯೋಗ ಮಾಡಿದ್ದು, ಶುದ್ಧೀಕರಿಸಿದ ನೀರನ್ನು ಕುಡಿಯುವುದನ್ನು ಬಿಟ್ಟು ಬೇರೆಲ್ಲಾ ಕೆಲಸಗಳಿಗೆ ಬಳಸಲು ಯೋಗ್ಯವಾಗಿದೆ ಎಂದು ಕೆಎಸ್‌ಪಿಸಿಬಿ ಲ್ಯಾಬ್ ಪ್ರಮಾಣಪತ್ರ ನೀಡಿದೆ.

ಕೈಗಾರಿಕೆಗಳ ತ್ಯಾಜ್ಯ ನೀರಿನಿಂದ ಕೆರೆ ನೀರು ಕಲುಷಿತಗೊಳ್ಳುತ್ತಿರುವುದು ನಿಜವಾದರೂ, ಮನೆಯ ಡಿಟರ್‌ಜೆಂಟ್ ತ್ಯಾಜ್ಯಗಳಲ್ಲಿರುವ ಫ್ಲೋರೈಡ್ ಮತ್ತು ಪಾಸ್ಫೇಟ್ ಅಂಶಗಳು ನೀರನ್ನು ಸಂಪೂರ್ಣ ಹಾಳುಗೆಡವಿವೆ. ಇದು ನೂರೆ ಮತ್ತು ಬೆಂಕಿಗೆ ಕಾರಣವಾಗುವುದು ಸಂಶೋಧನೆ ಸಮಯದಲ್ಲಿ ಕಂಡುಬಂದಿದೆ ಎಂದು ಪವನ್ ತಿಳಿಸಿದರು.

ಬೆಳ್ಳಂದೂರು ಕೆರೆಯ ನೊರೆ ಮತ್ತು ಬೆಂಕಿಯ ಸುದ್ದಿ ಓದಿದಾಗ, ಕೆರೆ ರಸ್ತೆಯಲ್ಲಿ ತೆರಳುವಾಗ ಭಯವಾಗುತ್ತಿತ್ತು. ಈ ಸಮಸ್ಯೆಗೆ ಏನಾದರೂ ಪರಿಹಾರ ಕಂಡುಕೊಳ್ಳಲೇಬೇಕೆಂಬ ಗುರಿಯೊಂದಿಗೆ 8 ತಿಂಗಳ ಹಿಂದೆ ಈ ಪ್ರಯೋಗ ಆರಂಭಿಸಿದೆ. ಸಮೀಪದ ಜ್ಯೂಸ್ ಶಾಪ್‌ಗಳಿಂದ ಬಾಳೆಹಣ್ಣು, ಅನಾನಸ್, ಕಲ್ಲಂಗಡಿ, ನಿಂಬೆ ಮತ್ತು ಪಪ್ಪಾಯ ಹಣ್ಣುಗಳ ಸಿಪೆಗಳನ್ನು ಸಂಗ್ರಹಿಸಿ, ಎರಡು ವಾರದವರೆಗೆ ಬಿಸಿಲಿನಲ್ಲಿ ಒಣಗಿಸಿದೆ. ನಂತರ ಈ ಸಿಪ್ಪೆಗಳನ್ನು ಪುಡಿಯಾಗಿ ಮಾರ್ಪಡಿಸಿ, ಕೃತಕ ಪೊರೆ ರೂಪಕ್ಕೆ ತರಲಾಯಿತು.

ಬಳಿಕ, ಬೆಳ್ಳಂದೂರು ಕೆರೆಯಿಂದ ಐದು ಲೀಟರ್ ಕೊಳಚೆ ನೀರನ್ನು ಸಂಗ್ರಹಿಸಿ ಪೊರೆಯ ಮೂಲಕ ಫಿಲ್ಟರ್ ಮಾಡಲು ಒಂದು ದಿನ ಬೇಕಾಯಿತು. ಹೀಗೆ ಶುದ್ಧವಾದ ನೀರು ಕುಡಿಯಲು ಬರುವುದಿಲ್ಲ. ಬದಲಿಗೆ ಬೇರೆಲ್ಲ ಕೆಲಸಗಳಿಗೂ ಬಳಸಬಹುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News