‘ಸ್ವಿಮ್ಮರ್ಸ್ ಐ’ ಬಗ್ಗೆ ನಿಮಗೆಷ್ಟು ಗೊತ್ತು?

Update: 2019-05-25 05:10 GMT

ಬೇಸಿಗೆಯ ದಿನಗಳಲ್ಲಿ ಈಜು ಬಲ್ಲ ಪ್ರತಿಯೊಬ್ಬರೂ ಈಜುಗೊಳಗಳಲ್ಲಿ ಸಮಯ ಕಳೆಯುವ ಮೂಲಕ ಶರೀರವನ್ನು ತಂಪಾಗಿಸಿಕೊಳ್ಳಲು ಮತ್ತು ಮನಸ್ಸನ್ನು ಉಲ್ಲಸಿತಗೊಳಿಸಿಕೊಳ್ಳಲು ಬಯಸುತ್ತಾರೆ. ಮಕ್ಕಳ ಪಾಲಿಗಂತೂ ಈಜು ಅತ್ಯಂತ ಪರಿಣಾಮಕಾರಿ ವ್ಯಾಯಾಮವಾಗಿದೆ ಮತ್ತು ಈಜು ಹಲವಾರು ಲಾಭಗಳೊಂದಿಗೆ ಗುರುತಿಸಿಕೊಂಡಿದೆ. ಆದರೆ ಹೆಚ್ಚುವರಿ ಕಾಳಜಿ ವಹಿಸದಿದ್ದರೆ ಈಜುವಿಕೆಯ ಮೋಜು ನಿಮ್ಮ ಮಕ್ಕಳಿಗೆ ತೊಂದರೆಯನ್ನೂ ಒಡ್ಡಬಲ್ಲುದು. ಈಜುಗೊಳದಲ್ಲಿಯ ನೀರನ್ನು ಸ್ವಚ್ಛವಾಗಿರಿಸಲು ರಾಸಾಯನಿಕಗಳನ್ನು ಬಳಸಲಾಗುತ್ತದೆ ಮತ್ತು ಈ ರಾಸಾಯನಿಕಗಳು ಹೆಚ್ಚಿನ ಮಟ್ಟದಲ್ಲಿದ್ದಾಗ ಅವು ನಿಮ್ಮ ಮಕ್ಕಳ ಸೂಕ್ಷ್ಮ ಕಣ್ಣುಗಳಿಗೆ ತೊಂದರೆಯನ್ನುಂಟು ಮಾಡುತ್ತವೆ.

ಏನಿದು ಸ್ವಿಮ್ಮರ್ಸ್ ಐ.....?

ನಿಮ್ಮ ಮಕ್ಕಳು ಈಜಿನ ಖುಷಿಯ ಬಳಿಕ ನೀರಿನಿಂದ ಹೊರಬಂದಾಗ ಅವರ ಕಣ್ಣುಗಳು ಕೆಂಪಗಾಗಿರುವುದನ್ನು ಎಂದಾದರೂ ಗಮನಿಸಿದ್ದೀರಾ? ಇದನ್ನೇ ಸ್ವಿಮ್ಮರ್ಸ್ ಐ ಅಥವಾ ಈಜುಗಾರನ ಕಣ್ಣು ಎಂದು ಕರೆಯಲಾಗುತ್ತದೆ. ನೀರಿನಲ್ಲಿರುವ ರಾಸಾಯನಿಕಗಳು ಕಣ್ಣು ಶುಷ್ಕಗೊಳ್ಳದಂತೆ ರಕ್ಷಿಸುವ ಕಣ್ಣೀರಿನ ಪೊರೆಯನ್ನು ಮತ್ತು ಕಣ್ಣುಗಳಲ್ಲಿಯ ನೀರನ್ನು ಸೆಳೆದುಕೊಳ್ಳುವುದು ಈ ತೊಂದರೆಗೆ ಕಾರಣವಾಗುತ್ತದೆ. ಇದನ್ನು ಸೂಕ್ತವಾಗಿ ನಿರ್ವಹಿಸದಿದ್ದರೆ  ಈ ಕೆಂಪಾದ ಕಣ್ಣುಗಳು ಹುಣ್ಣುಗಳಿಗೂ ಕಾರಣವಾಗಬಹುದು. ಸ್ವಿಮ್ಮರ್ಸ್ ಐ ತೊಂದರೆಯು ಒಂದು ಕಣ್ಣಿನಲ್ಲಿ ಅಥವಾ ಏಕಕಾಲದಲ್ಲಿ ಎರಡೂ ಕಣ್ಣುಗಳಲ್ಲಿ ಕಾಣಿಸಿಕೊಳ್ಳಬಹುದು. ಈ ತೊಂದರೆಯ ಕೆಲವು ಲಕ್ಷಣಗಳು ಹೀಗಿವೆ:

ಕಣ್ಣುಗಳಲ್ಲಿ ನಿರಂತರ ಕೆರಳುವಿಕೆ,ಅತಿಯಾಗಿ ನೀರು ಸುರಿಯುವಿಕೆ,ಕಣ್ಣುಗಳು ಕೆಂಪುಬಣ್ಣಕ್ಕೆ ತಿರುಗುವುದು ಮತ್ತು ನಿರಂತರವಾಗಿ ಉರಿಯುತ್ತಿರುವ ಅನುಭವ,ತುರಿಕೆ,ನೋಟದಲ್ಲಿ ತೊಂದರೆ ಅಥವಾ ಮಸುಕಾದ ನೋಟ, ಊದಿಕೊಂಡಿರುವ ಕಣ್ಣುಗುಡ್ಡೆಗಳು,ಕಣ್ಣುಗಳಿಂದ ಬಿಳಿಯ ದ್ರವದ ಸ್ರಾವ ಇತ್ಯಾದಿಗಳು ಸ್ವಿಮ್ಮರ್ಸ್ ಐ ಅನ್ನು ಸೂಚಿಸುತ್ತವೆ.

ನಿಯಮಿತವಾಗಿ ಈಜಿನಲ್ಲಿ ತೊಡಗಿಕೊಳ್ಳುವ ಮಕ್ಕಳು ಕಣ್ಣುಗಳಲ್ಲಿ ಶುಷ್ಕತೆಯ ಬಗ್ಗೆ ಆಗಾಗ್ಗೆ ದೂರಿಕೊಳ್ಳಬಹುದು. ಕಣ್ಣೀರಿನ ಪೊರೆಯು ತೆಳ್ಳಗಾಗಿರುವುದು ಅಥವಾ ತೊಳೆದುಹೋಗಿರುವುದು ಇದಕ್ಕೆ ಕಾರಣವಾಗಿದೆ. ಕಣ್ಣುಗಳಲ್ಲಿ ಚುಚ್ಚಿದಂತಾಗುತ್ತಿದೆ ಮತ್ತು ದೃಷ್ಟಿ ಮಸುಕಾಗಿದೆ ಎಂದೂ ಅವರು ದೂರಬಹುದು. ಸೂಕ್ತ ಕಾಳಜಿ ಮತ್ತು ಮುನ್ನೆಚ್ಚರಿಕೆಯನ್ನು ವಹಿಸಿದರೆ ಮಕ್ಕಳಲ್ಲಿ ಸ್ವಿಮ್ಮರ್ಸ್ ಐ ತೊಂದರೆಯನ್ನು ಸುಲಭವಾಗಿ ನಿವಾರಿಸಬಹುದು. ಈಜುವಾಗ ನಿಮ್ಮ ಮಕ್ಕಳು ಸೂಕ್ತವಾದ ಗಾಗಲ್ ಧರಿಸುವಂತೆ ನೋಡಿಕೊಳ್ಳುವುದು ಅವರ ಕಣ್ಣುಗಳನ್ನು ಸುರಕ್ಷಿತವಾಗಿಡಲು ಅತ್ಯುತ್ತಮ ವಿಧಾನವಾಗಿದೆ. ಗಾಗಲ್ ನೀರಿನಲ್ಲಿಯ ಹೆಚ್ಚುವರಿ ರಾಸಾಯನಿಕಗಳು ಅವರ ಕಣ್ಣುಗಳನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ಹೆಚ್ಚಿನ ಸುರಕ್ಷತೆಗಾಗಿ ಮಕ್ಕಳು ಅಲ್ಟ್ರಾ ವಯಲೆಟ್ ಕಿರಣಗಳಿಂದ ರಕ್ಷಣೆ ನೀಡುವ ಗಾಗಲ್‌ಗಳನ್ನೂ ಧರಿಸಬಹುದು.

ತಮ್ಮದೇ ಆದ ಈಜುಕೊಳಗಳನ್ನು ಹೊಂದಿರುವವರು ಅದರಲ್ಲಿನ ನೀರಿನ ಪಿಎಚ್ ಮಟ್ಟ ಸಮತೋಲನದಲ್ಲಿರುವಂತೆ ನೋಡಿಕೊಳ್ಳಬೇಕು. ಮಾನವನ ಕಣ್ಣೀರು 7.0 ಪಿಎಚ್ ಮಟ್ಟವನ್ನು ಹೊಂದಿರುತ್ತದೆ. ವೈಜ್ಞಾನಿಕವಾಗಿ ಕಡಿಮೆ ಪಿಎಚ್ ಮಟ್ಟವು ಕಣ್ಣುಗಳಲ್ಲಿ ಕೆರಳುವಿಕೆ ಮತ್ತು ತುರಿಕೆಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ನೀರಿನ ಪಿಎಚ್ ಮಟ್ಟ 7.3ರಿಂದ 7.8ರವರೆಗೆ ಇರುವುದು ಅಪೇಕ್ಷಣೀಯವಾಗಿದೆ.

ಈಜುಗೊಳದ ನೀರಿನಲ್ಲಿ ಬೆಳಕು ಪ್ರತಿಫಲಿಸುತ್ತದೆ ಎನ್ನುವುದು ನಮಗೆ ಗೊತ್ತು. ಹೀಗಾಗಿ ಮಕ್ಕಳು ನೀರಿನಲ್ಲಿ ಇಲ್ಲದಿದ್ದಾಗ ಅವರು ತಂಪು ಕನ್ನಡಕಗಳನ್ನು ಧರಿಸಿರುವಂತೆ ನೋಡಿಕೊಳ್ಳಬೇಕು. ಇದರಿಂದ ಕಣ್ಣುಗಳಿಗೆ ಸೂರ್ಯನ ಅಲ್ಟ್ರಾ ವಯಲೆಟ್ ಕಿರಣಗಳಿಂದ ರಕ್ಷಣೆ ದೊರೆಯುತ್ತದೆ.

ಕಣ್ಣುಗಳ ಸುರಕ್ಷೆಯನ್ನು ಕಾಯ್ದುಕೊಳ್ಳಲು ಶರೀರದ ಜಲೀಕರಣ ಅತ್ಯುತ್ತಮ ವಿಧಾನವಾಗಿದೆ. ಇದರಿಂದ ಕಣ್ಣೀರಿನ ಪೊರೆಯು ಆರೋಗ್ಯಯುತವಾಗಿರುತ್ತದೆ. ನಿಮ್ಮ ಮಗು ಇತರ ದಿನಗಳಿಗಿಂತ ಈಜಿಗಿಳಿಯುವ ದಿನ ಹೆಚ್ಚು ನೀರು ಕುಡಿಯುವಂತೆ ನೋಡಿಕೊಳ್ಳಿ.

ಈ ಎಲ್ಲ ಕ್ರಮಗಳನ್ನು ತೆಗೆದುಕೊಂಡರೂ ಈಜುವಾಗ ಮಕ್ಕಳ ಕಣ್ಣುಗಳು ರಾಸಾಯನಿಕಗಳಿಗೆ ತೆರೆದುಕೊಳ್ಳುವುದು ಸಾಮಾನ್ಯ. ಇದಕ್ಕಾಗಿ ಚಿಂತಿಸಬೇಕಿಲ್ಲ. ಹೆಚ್ಚಿನ ಕಾಳಜಿಯ ಮೂಲಕ ಇದನ್ನು ಸುಲಭವಾಗಿ ಗುಣಪಡಿಸಬಹುದು.

ಈಜು ಮುಗಿದ ತಕ್ಷಣ ತಣ್ಣೀರಿನಿಂದ ಮಕ್ಕಳ ಕಣ್ಣುಗಳನ್ನು ಚೆನ್ನಾಗಿ ತೊಳೆಯಿರಿ. ಸಲೈನ್ ಐ ಡ್ರಾಪ್ಸ್‌ಗಳನ್ನೂ ಬಳಸಬಹುದು. ನಿರಂತರ ತುರಿಕೆ ಮತ್ತು ಕೆರಳುವಿಕೆ ಉಂಟಾಗುತ್ತಿದ್ದರೆ ಐಸ್ ಪ್ಯಾಕ್‌ನಿಂದ ಕಣ್ಣುಗಳಿಗೆ ಒತ್ತಡ ನೀಡಿದರೆ ಹಿತವಾದ ಅನುಭವ ನೀಡುತ್ತದೆ. ತೊಂದರೆ ಕಡಿಮೆಯಾಗದಿದ್ದರೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News