ಕೊರಿಯಾಕ್ಕೆ ಸೋತ ಭಾರತ ಮಹಿಳಾ ತಂಡ

Update: 2019-05-25 07:14 GMT

ಜಿನ್‌ಚೆಯೊನ್(ಕೊರಿಯಾ), ಮೇ 24: ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ಭಾರತೀಯ ಮಹಿಳಾ ಹಾಕಿ ತಂಡ ಶುಕ್ರವಾರ ನಡೆದ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಆತಿಥೇಯ ಕೊರಿಯಾಕ್ಕೆ 0-4 ಅಂತರದಿಂದ ಶರಣಾಗಿದೆ.

ಮೊದಲೆರಡು ಪಂದ್ಯಗಳಲ್ಲಿ ಕೊರಿಯಾ ವಿರುದ್ಧ ಭಾರತ ಸತತವಾಗಿ 2-1 ಅಂತರದಿಂದ ಗೆಲುವು ಸಾಧಿಸಿ ಸರಣಿಯನ್ನು ಗೆದ್ದುಕೊಂಡಿದೆ.

ಆತಿಥೇಯ ಕೊರಿಯಾ ಪಂದ್ಯದಲ್ಲಿ ಐದು ಬಾರಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. 29ನೇ ನಿಮಿಷದಲ್ಲಿ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸುವಲ್ಲಿ ಸಫಲವಾಯಿತು.ಜಾಂಗ್ ಹೀಸಾನ್ ಕೊರಿಯಾದ ಗೋಲು ಖಾತೆ ತೆರೆದರು. 41 ಹಾಗೂ 42ನೇ ನಿಮಿಷದಲ್ಲಿ ಕಿಮ್ ಹಿನ್‌ಜಿ ಹಾಗೂ ಕಾಂಗ್ ಜಿನಾ ತಲಾ ಒಂದು ಗೋಲು ಗಳಿಸಿದರು. ಮೊದಲ ಮೂರು ಗೋಲುಗಳನ್ನು ಬಿಟ್ಟುಕೊಟ್ಟ ಭಾರತದ ನೈತಿಕ ಸ್ಥೈರ್ಯ ಕುಗ್ಗಿಹೋಗಿದ್ದು, ಪಂದ್ಯದಲ್ಲಿ ಮರು ಹೋರಾಟ ನೀಡುವ ಅವಕಾಶ ಲಭಿಸಲಿಲ್ಲ. ಲೀ ಯೂರಿ 53ನೇ ನಿಮಿಷದಲ್ಲಿ ಗೋಲು ಗಳಿಸಿ ಆತಿಥೇಯರು 4-0 ಅಂತರದಿಂದ ಜಯ ಸಾಧಿಸಲು ನೆರವಾದರು.

‘‘ದ.ಕೊರಿಯಾ ಉತ್ತಮ ತಂಡವಾಗಿದ್ದು, ಇಂದು ಆ ತಂಡ ನಮಗಿಂತ ಉತ್ತಮ ಪ್ರದರ್ಶನ ನೀಡಿದೆ.ಮೊದಲೆರಡು ಪಂದ್ಯಗಳಲ್ಲಿ ನಮ್ಮ ತಂಡದ ಪ್ರದರ್ಶನ ಖುಷಿ ನೀಡಿದೆ. 2019ರ ಹಿರೊಶಿಮಾದಲ್ಲಿ ನಡೆಯುವ ಎಫ್‌ಐಎಚ್ ಮಹಿಳಾ ಸರಣಿ ಫೈನಲ್ಸ್‌ಗೆ ನಾವು ಸಂಪೂರ್ಣ ಸಜ್ಜಾಗಿದ್ದೇವೆ’’ ಎಂದು ಭಾರತದ ಮುಖ್ಯ ಕೋಚ್ ಜೊರ್ಡ್ ಮರ್ಜಿನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News