ಕೆಎಸ್ಸಾರ್ಟಿಸಿ ಫೆಡರೇಷನ್‌ನಿಂದ ಜೂ.27 ರಂದು ಬೆಂಗಳೂರು ಚಲೋ

Update: 2019-05-25 14:57 GMT

ಬೆಂಗಳೂರು, ಮೇ 25: ಕೆಎಸ್ಸಾರ್ಟಿಸಿ ಸ್ಟಾಪ್ ಅಂಡ್ ವರ್ಕರ್ಸ್ ಫೆಡರೇಷನ್ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೇ 28 ರಂದು ರಾಜ್ಯದ ಎಲ್ಲಾ ವಿಭಾಗೀಯ ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹ ಹಾಗೂ ಜೂ.27 ರಂದು ಬೆಂಗಳೂರು ಚಲೋ ನಡೆಸಲು ತೀರ್ಮಾನಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಫೆಡರೇಶನ್‌ನ ಅಧ್ಯಕ್ಷ ಎಚ್.ವಿ. ಅನಂತ ಸುಬ್ಬರಾವ್ ಮಾತನಾಡಿ, ಸಾರಿಗೆ ನಿಗಮಗಳಲ್ಲಿ ಕಾರ್ಮಿಕರಿಗೆ ಸಂಬಂಧಪಟ್ಟಂತೆ ಅನೇಕ ಸಮಸ್ಯೆಗಳು ಉಲ್ಬಣವಾಗುತ್ತಿವೆ. ಇದರಿಂದ ಕಾರ್ಮಿಕರು ನೆಮ್ಮದಿಯಿಂದ ಕೆಲಸ ಮಾಡುವ ಪರಿಸ್ಥಿತಿ ಸಂಸ್ಥೆಯಲ್ಲಿ ಇಲ್ಲದಂತಾಗಿದೆ. ಆದ್ದರಿಂದ ಈ ಬಗ್ಗೆ ಸರಕಾರ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಸಾರಿಗೆ- ನಿಗಮಗಳಲ್ಲಿ ಕಾರ್ಮಿಕರಿಗೆ ಒದಗಿಸಿರುವ ವೈದ್ಯಕೀಯ ವ್ಯವಸ್ಥೆಯು ಬಹಳ ಅಸಮರ್ಪಕವಾಗಿದೆ. ಸಾರಿಗೆ ನಿಗಮಗಳ ನೌಕರಿಗೆ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. ನಾಲ್ಕು ಸಾರಿಗೆ ನಿಗಮಗಳಲ್ಲೂ ಕೈಗಾರಿಕಾ ಬಾಂಧವ್ಯ ಸಂಪೂರ್ಣವಾಗಿ ಕುಸಿದಿದೆ. ಕೈಗಾರಿಕಾ ಬಾಂಧವ್ಯವನ್ನು ಸರಿಪಡಿಸುವ ದಿಕ್ಕಿನಲ್ಲಿ ಆಡಳಿತ ವರ್ಗ ಯಾವುದೇ ಸಕಾರಾತ್ಮಕ ಕ್ರಮ ತೆಗೆದುಕೊಂಡಿಲ್ಲ. ಇದರ ಬಗ್ಗೆ ಸರಕಾರ ಗಮನ ಹರಿಸಿ ಕೈಗಾರಿಕಾ ಬಾಂಧವ್ಯ ಮೂಡಿಸಬೇಕು ಎಂದು ಹೇಳಿದರು.

ಕಳೆದ ಹತ್ತಾರು ವರ್ಷಗಳಿಂದ ಸಾರಿಗೆ ನಿಗಮಗಳಲ್ಲಿ ಕಾರ್ಯಸ್ಥಳದಲ್ಲಿ ಹಿಂಸೆ ಕಿರುಕುಳಗಳನ್ನು ತಾಳಲಾರದೆ ಹತಾಶರಾಗಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಿಳಿಸಿದರು.

ಸರಕಾರ ತ್ರಿಪಕ್ಷೀಯ ಸಭೆ ಕರೆದು ಬೇಡಿಕೆಗಳನ್ನು ಈಡೇರಿಸಬೇಕು. ಈ ಹೋರಾಟದ ಮೊದಲೇ ಸಭೆ ಕರೆದು ಬೇಡಿಕೆ ಈಡೇರಿಸಿದರೆ ಪ್ರತಿಭಟನೆಯನ್ನು ಹಿಂಪಡೆಯಲಾಗುವುದು ಇಲ್ಲದಿದ್ದರೆ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಫೆಡರೇಶನ್‌ನ ಪದಾಧಿಕಾರಿಗಳಾದ ಟಿ.ಎಲ್.ರಾಜಗೋ ಪಾಲ್, ಬಿ.ನಾರಾಯಣ ರೆಡ್ಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News