×
Ad

ಬಿಬಿಎಂಪಿ ಉಪ ಚುನಾವಣೆಗೆ ಸಕಲ ಸಿದ್ಧತೆ: ಮೇ 28 ರಿಂದಲೇ ನಿಷೇಧಾಜ್ಞೆ ಜಾರಿ

Update: 2019-05-25 21:06 IST

ಬೆಂಗಳೂರು, ಮೇ 25: ಬಿಬಿಎಂಪಿ ವ್ಯಾಪ್ತಿಯ ಎರಡು ವಾರ್ಡ್‌ಗಳಿಗೆ ಮೇ 29 ರಂದು ಉಪ ಚುನಾವಣೆ ನಡೆಯಲಿದ್ದು ರಾಜ್ಯ ಚುನಾವಣಾ ಆಯೋಗವು ಸಕಲ ಸಿದ್ಧತೆ ಕೈಗೊಂಡಿದೆ.

ನಗರದ ಕಾವೇರಿಪುರ ಹಾಗೂ ಸಗಾಯಿಪುರಂ ವಾರ್ಡ್‌ಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೇ 28 ರ ಬೆಳಗ್ಗೆ 7 ರಿಂದ ಮೇ 29 ರ ಮಧ್ಯರಾತ್ರಿ 12 ಗಂಟೆವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಸಮಯದಲ್ಲಿ ಯಾವುದೇ ವ್ಯಕ್ತಿಗಳು ಗುಂಪುಗೂಡುವುದು, ಶಸ್ತ್ರಾಸ್ತ್ರಗಳನ್ನು ಬಳಸುವಂತಹುದು, ಸ್ಫೋಟಕ ಸಿಡಿಸುವುದು, ಕಲ್ಲು ಎಸೆಯುವುದು, ಘರ್ಷಣೆಗೆ ಉತ್ತೇಜಿಸುವುದು ಹಾಗೂ ಮೆರವಣಿಗೆ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಆದೇಶ ಹೊರಡಿಸಿದ್ದಾರೆ.

ಕಾವೇರಿಪುರ ವಾರ್ಡ್ ವ್ಯಾಪ್ತಿಗೊಳಪಡುವ ಪಶ್ಚಿಮ ವಿಭಾಗದ ವಿಜಯನಗರ ಹಾಗೂ ಕಾಮಾಕ್ಷಿ ಪಾಳ್ಯ ವ್ಯಾಪ್ತಿ ಹಾಗೂ ಸಗಾಯಪುರಂ ವಾರ್ಡ್ ವ್ಯಾಪ್ತಿಗೊಳಪಡುವ ಪೂರ್ವ ವಿಭಾಗದ ಕೆಜಿ ಹಳ್ಳೀ ಮತ್ತು ಪುಲಕೇಶಿನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಶಾಂತಿಯುತ ಚುನಾವಣೆ ನಡೆಸುವ ಸಲುವಾಗಿ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಮತದಾನ ನಡೆಯುವ ದಿನದ 24 ಗಂಟೆಗಳ ಅವಧಿಯಲ್ಲಿ ಎಲ್ಲ ಬಾರ್‌ಗಳು, ವೈನ್‌ಶಾಪ್‌ಗಳು, ಪಬ್ ಹಾಗೂ ಮದ್ಯ ಮಾರಾಟ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚಬೇಕು ಎಂದು ಆಯುಕ್ತರು ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News