ಪತ್ನಿಯ ಕಿರುಕುಳ ತಾಳಲಾರದೆ ನೇಣಿಗೆ ಶರಣಾದ ಪತಿ
Update: 2019-05-25 21:13 IST
ಬೆಂಗಳೂರು, ಮೇ 25: ಪತ್ನಿಯ ಕಿರುಕುಳ ತಾಳಲಾರದೆ ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಬಾಗಲಗುಂಟೆ ನಿವಾಸಿ ಎಸ್.ಶ್ರೀನಿವಾಸ್(34) ಮೃತ ಪತಿ ಎಂದು ತಿಳಿದುಬಂದಿದೆ.
ವೃತ್ತಿಯಲ್ಲಿ ಚಾಲಕನಾಗಿದ್ದ ಶ್ರೀನಿವಾಸ್, ಸುಮಾ ಎಂಬಾಕೆಯೊಂದಿಗೆ ವಿವಾಹವಾಗಿದ್ದರು. ಶ್ರೀನಿವಾಸ್ ಹಾಗೂ ಅವರ ಸಹೋದರ ರವೀಶ್ವರ್ ಎಂಬುವರು ಒಂದೇ ಮನೆಯಲ್ಲಿದ್ದರು. ಆದರೆ, ಪತ್ನಿ ಸುಮಾ, ಬೇರೆ ಮನೆಗೆ ಹೋಗೋಣ ಎಂದು ಕಿರುಕುಳ ನೀಡುತ್ತಿದ್ದಳು ಎನ್ನಲಾಗಿದೆ.
ಇದರಿಂದ ಬೇಸತ್ತ ಶ್ರೀನಿವಾಸ್ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ಸುಮಾ ಹಾಗೂ ಆಕೆಯ ಕುಟುಂಬಸ್ಥರು ಕಾರಣ ಎಂದು ಬರೆದಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿದ ಬಾಗಲಗುಂಟೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.