ಡೀಸೆಲ್ ಬೆಲೆ ಹೆಚ್ಚಳದಿಂದ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ: ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ

Update: 2019-05-25 17:12 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 25: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಸೇರಿದಂತೆ ಸಾರಿಗೆ ಸಂಸ್ಥೆಗಳನ್ನು ನಷ್ಟದ ಸುಳಿಯಿಂದ ತಪ್ಪಿಸಲು ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೇತನ ಭತ್ಯೆ ಹೆಚ್ಚಳ ಹಾಗೂ ನಿರ್ವಹಣಾ ವೆಚ್ಚದ ಬಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆದರೂ, ಕಳೆದ ಏಳು ವರ್ಷಗಳಿಂದ ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಮಾಡಿಲ್ಲ. ಸಾರ್ವಜನಿಕರಿಗೆ ಮಾದರಿ ಸೇವೆ ಒದಗಿಸುತ್ತಿರುವ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕುವುದನ್ನು ತಪ್ಪಿಸಲು ಪ್ರಯಾಣ ದರ ಏರಿಕೆ ಮಾಡಬೇಕಿದೆ. ಈ ಸಂಬಂಧ ಶೇ.20ರಷ್ಟು ಬಸ್ ದರ ಏರಿಕೆ ಬಗ್ಗೆ ಸಾರಿಗೆ ಸಂಸ್ಥೆಗಳಿಂದ ಸರಕಾರಕ್ಕೆ ಪ್ರಸ್ತಾವ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಈಗಾಗಲೇ ವಿದ್ಯುತ್ ಮತ್ತು ನೀರಿನ ದರ ಏರಿಕೆ ಮಾಡಲಾಗಿದೆ. ಇದೀಗ ಅದೇ ರೀತಿಯಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡದಿದ್ದರೆ ಸಂಸ್ಥೆಗಳನ್ನು ಮುನ್ನಡೆಸುವುದು ಕಷ್ಟ ಸಾಧ್ಯ. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಈ ಬಗ್ಗೆ ಸರಕಾರ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಹೇಳಿದರು.

ಪ್ರಯಾಣ ದರ ಹೆಚ್ಚಳ ಇಲ್ಲ; ಸಚಿವ ತಮ್ಮಣ್ಣ

‘ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ. ಪ್ರಯಾಣ ದರ ಹೆಚ್ಚಳದ ಬಗ್ಗೆ ಯಾವುದೇ ಸರಕಾರ ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಹಿಂದೆ ಶೇ.18ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಸರಕಾರ ದರ ಹೆಚ್ಚಳಕ್ಕೆ ಅನುಮತಿ ನೀಡಿಲ್ಲ. ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ನಷ್ಟ ಸರಿದೂಗಿಸಲು ಪ್ರಯಾಣ ದರ ಹೆಚ್ಚಳ ಅನಿವಾರ್ಯ’

-ಡಿ.ಸಿ.ತಮ್ಮಣ್ಣ ಸಾರಿಗೆ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News