ನದಿಗಳಿಗೆ ಕಲುಷಿತ ನೀರು ತಡೆಗೆ ಅಗತ್ಯ ಕ್ರಮ: ರಾಮನಗರ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ

Update: 2019-05-25 17:15 GMT

ರಾಮನಗರ, ಮೇ 25: ವಿವಿಧ ಮೂಲಗಳಿಂದ ಜಿಲ್ಲೆಯ ನದಿಗಳಿಗೆ ಕಲುಷಿತ ನೀರು ಹರಿಯುವುದನ್ನು ತಡೆಯಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸೂಚನೆ ನೀಡಿದ್ದಾರೆ.

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ವಿಶೇಷ ಪರಿಸರ ನಿಗಾವಣೆ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಖಾನೆಗಳು, ಗ್ಯಾರೇಜ್‌ಗಳು, ರೇಷ್ಮೆ ನೂಲು ತೆಗೆಯುವ ಘಟಕಗಳು, ಕಲುಷಿತ ನೀರು ಶುದ್ಧೀಕರಣ ಘಟಕಗಳನ್ನು ಕಡ್ಡಾಯವಾಗಿ ಸ್ಥಾಪನೆ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಅನೇಕ ರೇಷ್ಮೆ ನೂಲು ತೆಗೆಯುವ ಘಟಕಗಳಿದ್ದು ಅವುಗಳಿಂದ ಹೊರ ಬಿಡುವಂತಹ ಕಲುಷಿತ ನೀರನ್ನು ಸಂಸ್ಕರಿಸಲು ಶುದ್ಧೀಕರಣ ಘಟಕಗಳ ಸ್ಥಾಪನೆಯಾಗಬೇಕು ಮತ್ತು ಕೈಗಾರಿಕೆಗಳಿಂದ ಹೊರಬಿಡುವಂತಹ ಕಲುಷಿತ ನೀರನ್ನು ಶುದ್ಧೀಕರಿಸಿ ಹೊರಬಿಡುವಂತೆ ಕಾರ್ಖಾನೆಗಳಿಗೆ ಸೂಚಿಸಬೇಕು ಎಂದು ಅವರು ಹೇಳಿದರು.

ಕಾಲುವೆಗಳಿಗೆ ಬಿಡುವ ಕಲುಷಿತ ನೀರಿನಲ್ಲಿ ರಾಸಾಯನಿಕಗಳು ಹೆಚ್ಚಾಗಿರುವ ಕಾರಣ ಪ್ರತಿ ಕೈಗಾರಿಕೆಯು ಸ್ವಂತ ನೀರು ಸಂಸ್ಕರಣಾ ಘಟಕವನ್ನು ಹೊಂದಿರಬೇಕು. ಕೈಗಾರಿಕೆಗಳ ನೀರು ಶುದ್ಧೀಕರಣ ಘಟಕಗಳ ವ್ಯವಸ್ಥೆಯನ್ನು ಪರಿಶೀಲಿಸುವಂತೆ ರಾಜೇಂದ್ರ ಸೂಚಿಸಿದರು.

ನಗರ ಹಾಗೂ ಪಟ್ಟಣ ಸ್ಥಳೀಯ ಸಂಸ್ಥೆಗಳು ಕೊಳಚೆ ನೀರು ನೇರವಾಗಿ ನದಿಗಳಿಗೆ ಹರಿಯದಂತೆ ಕ್ರಮ ವಹಿಸಬೇಕು. ನಗರಸಭೆ ಹಾಗೂ ಪುರಸಭೆಗಳು ಸ್ಥಾಪಿಸಿರುವ ಕೊಳಚೆ ನೀರು ಶುದ್ಧೀಕರಣ ಘಟಕಗಳ ಸಮರ್ಪಕ ನಿರ್ವಹಣೆಯಾಗಬೇಕು ಎಂದು ಅವರು ಹೇಳಿದರು.

ಬೈರಮಂಗಲ ಕೆರೆಗೆ ಬೆಂಗಳೂರಿನ ಕೊಳಚೆ ನೀರು ಸಂಗ್ರಹವಾಗುತ್ತಿದ್ದು ಮಾಲಿನ್ಯ ತಡೆಗೆ ಇನ್ನೂ ಹೆಚ್ಚಿನ ಉಪಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಹಾಗೂ ಬೆಂಗಳೂರು ಜಲಮಂಡಳಿಗೆ ಪತ್ರ ಬರೆಯಲಾಗುವುದು. ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡುವ ಮೊದಲೇ ಜಿಲ್ಲಾ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ತಿಳಿಸಿದರು.

ಕಲುಷಿತ ನೀರನ್ನು ಕುಡಿಯುವುದರಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ. ಆರೋಗ್ಯದ ದೃಷ್ಟಿಯಿಂದ ನೀರಿನ ಮೂಲಗಳ ಶುದ್ಧೀಕರಣ ತ್ವರಿತವಾಗಿ ನಡೆಯಬೇಕಾಗಿದ್ದು, ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಾನುವಾರುಗಳಿಗೆ ಮತ್ತು ಪಕ್ಷಿಗಳಿಗೆ ಕೆರೆ ಕುಂಟೆ, ನದಿ ನೀರಿನ ಮೂಲಗಳೇ ಆಧಾರವಾಗಿದ್ದು, ನೀರಿನ ಮೂಲಗಳನ್ನು ಶುದ್ಧೀಕರಿಸುವ ಕಾರ್ಯ ನಡೆಯಬೇಕು. ರಾಮನಗರ ಮತ್ತು ಕನಕಪುರ ನಗರಸಭೆಯ ಮುಖ್ಯಸ್ಥರಿಗೆ ಈ ನಗರಗಳಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ಇಟ್ಟುಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸಬೇಕು ಹಾಗೂ ತ್ಯಾಜ್ಯ ನೀರು ನದಿಗೆ ಸೇರದಂತೆ ಕ್ರಮ ವಹಿಸುವಂತೆ ಅವರು ನಿರ್ದೇಶನ ನೀಡಿದರು. ಅರ್ಕಾವತಿ ನದಿ (ತಿಪ್ಪಗೊಂಡನ ಹಳ್ಳಿ ಜಲಾಶಯದಿಂದ ಕನಕಪುರದವರೆಗೆ)ಯನ್ನು ಪೊಲ್ಯೂಟೆಡ್ ರಿವರ್ ಸ್ಟ್ರಚ್ (Polluted river stretch) ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ನದಿಯ ನೀರಿನ ಮಟ್ಟವನ್ನು ಉತ್ತಮಗೊಳಿಸುವ ಸಲುವಾಗಿ ಸಿದ್ಧಪಡಿಸಿರುವ ಕ್ರಿಯಾಯೋಜನೆಯ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಪೊಲೀಸ್ ಅಧಿಕಾರಿ ಮಾರ್ಕಂಡಯ್ಯ, ಪರಿಸರಾಧಿಕಾರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News