ರಾಜ್ಯದಲ್ಲಿ 1,299 ಮಕ್ಕಳ ರಕ್ಷಣೆ: ರೈಲ್ವೆ ಇಲಾಖೆ ರಕ್ಷಣಾ ಪಡೆಯ ಪ್ರಧಾನ ಕಾರ್ಯದರ್ಶಿ ಡಿ.ಬಿ.ಕಾಸರ್

Update: 2019-05-25 17:17 GMT

ಬೆಂಗಳೂರು, ಮೇ 25: ರಾಜ್ಯದ ದಕ್ಷಿಣ ಪಶ್ಚಿಮ ರೈಲ್ವೇ ವಿಭಾಗ ವ್ಯಾಪ್ತಿಯಲ್ಲಿ 2018ನೇ ಸಾಲಿನಲ್ಲಿ ಬರೋಬ್ಬರಿ 1,299 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ರಕ್ಷಣಾ ಪಡೆಯ ಪ್ರಧಾನ ಕಾರ್ಯದರ್ಶಿ ಡಿ.ಬಿ.ಕಾಸರ್ ಹೇಳಿದರು.

ಶನಿವಾರ ನಾಪತ್ತೆಯಾದ ಮಕ್ಕಳ ಅಂತರ್‌ರಾಷ್ಟ್ರೀಯ ದಿನಾಚರಣೆ ಅಂಗವಾಗಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಭಾರತೀಯ ರೈಲ್ವೆ ಇಲಾಖೆ ವತಿಯಿಂದ ಆಯೋಜಿಸಿದ್ದ, ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದಕ್ಷಿಣ ಪಶ್ಚಿಮ ವ್ಯಾಪ್ತಿಯ ಬೆಂಗಳೂರಿನಲ್ಲಿ 458 ಬಾಲಕರು, 65 ಬಾಲಕಿಯರು ಸೇರಿ 523 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಮೈಸೂರು ಭಾಗದಲ್ಲಿ 260 ಬಾಲಕರು, 26 ಬಾಲಕಿಯರನ್ನು ರಕ್ಷಿಸಿದ್ದು, ಹುಬ್ಬಳ್ಳಿಯಲ್ಲಿಯೂ 407 ಬಾಲಕರು, 83 ಬಾಲಕಿಯರು ಸೇರಿ 490 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ವಿವರಿಸಿದರು.

2017ನೇ ಸಾಲಿನಲ್ಲಿ 1074 ಮಕ್ಕಳನ್ನು ರಕ್ಷಣೆ ಮಾಡಲಾಗಿತ್ತು ಎಂದ ಅವರು, ಕಾಣೆಯಾದ ಮಕ್ಕಳ ಮನವೊಲಿಸುವ ಮೂಲಕ ಮಕ್ಕಳ ಕಳ್ಳ ಸಾಗಾಣಿಕೆ ನಡೆಯುತ್ತಿದೆ. ಕೆಲ ವಿಚಾರಗಳಿಗೆ ಬೇಸರಗೊಂಡು ಮನೆಯಿಂದ ಹೊರಬಂದ ಮಕ್ಕಳು ಮಾರಾಟವಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಮಾರಾಟವಾದ ಮಕ್ಕಳನ್ನು ಕಾರ್ಖಾನೆ, ಮದ್ಯದಂಗಡಿ, ಹೊಟೇಲ್‌ಗಳಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂದ ಅವರು, ಮಕ್ಕಳು ಕಾಣೆಯಾದಾಗ ಪೋಷಕರು ಮಕ್ಕಳು ಬ್ಯೂರೊಗೆ ಮಾಹಿತಿ ನೀಡಬೇಕು. ಅಷ್ಟೇ ಅಲ್ಲದೆ, ತಪ್ಪಿಸಿಕೊಂಡ ಮಕ್ಕಳ ಬಗ್ಗೆ ಸಹಾಯವಾಣಿಗೆ (1098) ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಬೆಂಗಳೂರು ರೈಲ್ವೆ ವಿಭಾಗದ ವ್ಯವಸ್ಥಾಪಕ ಅಶೋಕ್ ವರ್ಮಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News