ಫೀಲ್ಡಿಂಗ್ ಮಾಡಿದ ಇಂಗ್ಲೆಂಡ್‌ನ ಸಹಾಯಕ ಕೋಚ್!

Update: 2019-05-25 18:31 GMT

ಇಂಗ್ಲೆಂಡ್‌ನ ಮಾಜಿ ನಾಯಕ ಹಾಗೂ ಹಾಲಿ ಸಹಾಯಕ ಕೋಚ್ ಪಾಲ್ ಕಾಲಿಂಗ್‌ವುಡ್ ಆಸ್ಟ್ರೇಲಿಯ ವಿರುದ್ಧ ಐಸಿಸಿ ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ ಫೀಲ್ಡಿಂಗ್ ನಡೆಸಬೇಕಾದ ಅನಿವಾರ್ಯತೆ ಎದುರಾಯಿತು.

 ವೃತ್ತಿಜೀವನದಲ್ಲಿ ಸದಾ ಕಾಲ ಮಂಡಿನೋವಿನ ಸಮಸ್ಯೆ ಎದುರಿಸುತ್ತಾ ಬಂದಿರುವ ವುಡ್ ಕೇವಲ 3.1 ಓವರ್‌ಗಳ ಬೌಲಿಂಗ್ ಮಾಡಿದ ಬಳಿಕ ಗಾಯದ ಸಮಸ್ಯೆ ಕಾಣಿಸಿಕೊಂಡ ಕಾರಣ ಮೈದಾನವನ್ನು ತೊರೆದರು. ವುಡ್ ನಿರ್ಗಮಿಸಿದ ಬಳಿಕ ಬದಲಿ ಆಟಗಾರ ಜೊಫ್ರಾ ಆರ್ಚರ್ ಮೈದಾನಕ್ಕೆ ಇಳಿದಿದ್ದರು. ಆದರೆ ಅವರು ಕೂಡ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಗಾಯಗೊಂಡರು. ಪೆವಿಲಿಯನ್‌ಗೆ ತೆರಳಿದ ಬಳಿಕ ಅವರು ಮತ್ತೆ ವಾಪಸಾಗಲಿಲ್ಲ. ವೇಗದ ಬೌಲರ್ ಲಿಯಾಮ್ ಪ್ಲಂಕೆಟ್ ಡ್ರೆಸ್ಸಿಂಗ್ ರೂಮ್‌ಗೆ ತೆರಳಿದಾಗ 43ರ ಹರೆಯದ ಸಹಾಯಕ ಕೋಚ್ ಕಾಲಿಂಗ್‌ವುಡ್ ಕೆಲವು ಓವರ್ ಫೀಲ್ಡಿಂಗ್ ಮಾಡಿದರು. ಕಾಲಿಂಗ್‌ವುಡ್ 2011ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. 2010ರಲ್ಲಿ ಇಂಗ್ಲೆಂಡ್ ತಂಡ ಟಿ-20 ವಿಶ್ವಕಪ್ ಜಯಿಸಿ ಇತಿಹಾಸ ನಿರ್ಮಿಸಿದ ಸಂದರ್ಭದಲ್ಲಿ ತಂಡದ ನಾಯಕತ್ವವಹಿಸಿಕೊಂಡಿದ್ದರು. ಇಂಗ್ಲೆಂಡ್‌ನ ಪರ 197 ಏಕದಿನ ಪಂದ್ಯಗಳನ್ನು ಆಡಿದ್ದ ಅವರು 5,092 ರನ್ ಹಾಗೂ 111 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News