ಸಂಸತ್ತಿನಲ್ಲಿ ಇರಲೇಬೇಕಾಗಿದ್ದ ಇಬ್ಬರು: ಗೌಡ ಮತ್ತು ಖರ್ಗೆ

Update: 2019-05-26 09:55 GMT

ಇವತ್ತು ಈ ಇಬ್ಬರು ನಾಯಕರು ಸಂಸತ್ತಿನಲ್ಲಿ ಇಲ್ಲದಿರುವುದು ಕರ್ನಾಟಕವಷ್ಟೇ ಅಲ್ಲ, ದಕ್ಷಿಣ ಭಾರತವೇ ನಿರ್ಲಕ್ಷಕ್ಕೊಳಗಾಗಲಿದೆ. ಅವರ ಅಗತ್ಯ ಮತ್ತು ಅನಿವಾರ್ಯತೆ ಮುಂದಿನ ದಿನಗಳಲ್ಲಿ ಇನ್ನಷ್ಟು ನಿಚ್ಚಳವಾಗಿ ಗೋಚರಿಸಲಿದೆ. ಈ ಸೋಲು ಅವರಿಬ್ಬರಿಗೆ ಅಂತಹ ದೊಡ್ಡ ನಷ್ಟವಲ್ಲ, ಆದರೆ ನಾಡಿಗೆ, ದೇಶಕ್ಕೆ, ಬಹುತ್ವಕ್ಕೆ, ಜಾತ್ಯತೀತತೆಗೆ ಬಹುದೊಡ್ಡ ನಷ್ಟ. ಅದನ್ನು ಮುಂದಿನ ದಿನಗಳೇ ಹೇಳಬಲ್ಲವು.


ಮಲ್ಲಿಕಾರ್ಜುನ ಖರ್ಗೆ ಮತ್ತು ದೇವೇಗೌಡರು ಸೋಲಬಾರದಾಗಿತ್ತು ಎನ್ನುವುದು ಈಗ ಎಲ್ಲರ ಮಾತಾಗಿದೆ. ಹೌದು, ಇವರಿಬ್ಬರೂ ಸೋಲಬಾರದಿತ್ತು. ಈ ಇಬ್ಬರ ಲೋಪದೋಷಗಳು ಬೆಟ್ಟದಷ್ಟಿರಬಹುದು; ಭ್ರಷ್ಟರ ಪಟ್ಟಿಗೂ ಸೇರಿರಬಹುದು; ಜಾತಿಯನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿರಲೂಬಹುದು; ನಿವೃತ್ತಿಗೆ ಯೋಗ್ಯವಾದ ವಯಸ್ಸೂ ಆಗಿರಬಹುದು; ಅಧಿಕಾರದ ಸ್ಥಾನಮಾನಗಳನ್ನು ಏರಿಳಿದಿರಲೂಬಹುದು. ಆದರೆ ಸೋಲಬೇಕಾದವರಲ್ಲ. ಗೆದ್ದು ಸಂಸತ್ತಿನಲ್ಲಿ ಇರಲೇಬೇಕಾದ ಅಪರೂಪದ ರಾಜಕೀಯ ಮುತ್ಸದ್ದಿಗಳು.

ಮಲ್ಲಿಕಾರ್ಜುನ ಖರ್ಗೆ

ಬೀದರ್ ಜಿಲ್ಲೆಯ ವರವಟ್ಟಿಯ ಬಡ ದಲಿತ ಕುಟುಂಬದಲ್ಲಿ 1942ರಲ್ಲಿ ಜನಿಸಿದವರು. ಕಷ್ಟದಲ್ಲಿ ಬೆಳೆದು, ಪದವಿ ಪಡೆದು ವಕೀಲಿಕೆ ಮಾಡುತ್ತ, ಬಡ ಕಾರ್ಮಿಕರ ಪರ ಹೋರಾಟಕ್ಕಿಳಿದವರು. ದೇವರಾಜ ಅರಸರಿಂದ ರಾಜಕೀಯ ದೀಕ್ಷೆ ಪಡೆದು, 1969 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ, ಸುಮಾರು ಐದು ದಶಕಗಳ ಕಾಲ, ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಲೋಕಸಭೆಯ ಸಂಸದೀಯ ನಾಯಕನವರೆಗೆ ಬೆಳೆದು ನಿಂತವರು. ಮತ್ತೊಂದು ಪಕ್ಷದತ್ತ ಕಣ್ಣೆತ್ತಿಯೂ ನೋಡದ ಪಕ್ಷ ನಿಷ್ಠರು. 1972ರಿಂದ 2004ರವರೆಗೆ, ನಿರಂತರವಾಗಿ 9 ಬಾರಿ ಶಾಸಕರಾಗಿ ಗೆದ್ದು, ಸೋಲಿಲ್ಲದ ಸರದಾರನೆಂಬ ದಾಖಲೆ ಬರೆದವರು. ಹಾಗೆಯೇ 2009ರಿಂದ 2 ಬಾರಿ ಸಂಸತ್ ಸದಸ್ಯರಾಗಿ, ಕಾಂಗ್ರೆಸ್ ಪಕ್ಷದ ಹಿರಿಯ ಅನುಭವಿ ರಾಜಕಾರಣಿ ಎನಿಸಿಕೊಂಡವರು.

ಎಚ್. ಡಿ. ದೇವೇಗೌಡ
ಹಾಸನ ಜಿಲ್ಲೆಯ ಹರದನಹಳ್ಳಿಯ ಬಡ ಕೃಷಿಕ ಕುಟುಂಬದಲ್ಲಿ 1933ರಲ್ಲಿ ಜನಿಸಿದವರು. 1953ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ, 1962 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ವಿಧಾನಸೌಧದ ಮೆಟ್ಟಿಲು ಹತ್ತಿದವರು. 1962ರಿಂದ 2019ರವರೆಗೆ, ಸುಮಾರು 57 ವರ್ಷಗಳ ಕಾಲ, ರಾಜಕಾರಣದ ಏರಿಳಿತದಲ್ಲಿ ಮುಳುಗೆದ್ದವರು. ಕೃಷಿ, ಕಾವೇರಿ, ನೀರಾವರಿ ಬಗ್ಗೆ ತರ್ಕಬದ್ಧವಾಗಿ ವಿಚಾರ ಮಂಡಿಸಬಲ್ಲವರು. ತಾಲೂಕ್ ಬೋರ್ಡ್ ಮೆಂಬರ್‌ನಿಂದ ದೇಶದ ಅತ್ಯುನ್ನತ ಹುದ್ದೆಯಾದ ಪ್ರಧಾನಮಂತ್ರಿಯವರೆಗಿನ, ಹತ್ತು ಹಲವು ಅಧಿಕಾರದ ಸ್ಥಾನಗಳನ್ನು ಅಲಂಕರಿಸಿದವರು. ಬೆಳೆದು ಭಾರತದ ಮಹಾಪುರುಷರ ಪಟ್ಟಿಯಲ್ಲಿ ದಾಖಲಾದವರು.

ಖರ್ಗೆ ಮತ್ತು ಗೌಡ- ಇವರಿಬ್ಬರೂ ಇದ್ದಕ್ಕಿದ್ದಂತೆ ಎದ್ದುಬಂದ ರಾಜಕೀಯ ನಾಯಕರಲ್ಲ. ಇವರಿಬ್ಬರೂ ಶ್ರೀಮಂತ ರಾಜಕೀಯ ಕುಟುಂಬಗಳ ಹಿನ್ನೆಲೆಯಿಂದ ಬಂದವರೂ ಅಲ್ಲ. ಇಬ್ಬರೂ ಹಳ್ಳಿಯಿಂದ ಬಂದವರು. ಕಡು ಕಷ್ಟದಲ್ಲಿ ಬೆಳೆದವರು. ಹಸಿವು, ಅವಮಾನಗಳನ್ನು ಹೊಟ್ಟೆತುಂಬ ಉಂಡವರು. ಸಾರ್ವಜನಿಕ ಬದುಕಿಗೆ ಬಂದು ಒಂದೊಂದೇ ಮೆಟ್ಟಿಲನ್ನು ಹತ್ತುತ್ತಾ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದವರು. ಜನ ದಯಪಾಲಿಸಿದ ಅಧಿಕಾರವನ್ನು ಜನರ ಹಿತಕ್ಕಾಗಿ ಬಳಸಲು ಸಿಕ್ಕ ಅವಕಾಶ ಎಂದು ಭಾವಿಸಿದವರು. ಪ್ರಜಾಪ್ರಭುತ್ವದ ಸೊಗಸನ್ನು ಸಾಬೀತು ಮಾಡಿದವರು. ಅಧಿಕಾರ ಬಂದಾಗ ಹಿಗ್ಗದೆ, ಕಳೆದುಕೊಂಡಾಗ ಕುಗ್ಗದೆ- ಆರೋಪಗಳು, ಅವಮಾನಗಳು, ಸೋಲುಗಳನ್ನು ಸಮಚಿತ್ತದಿಂದ ಸ್ವೀಕರಿಸಿದವರು. ಆ ಕಾರಣಕ್ಕಾಗಿಯೇ ಇವರಿಬ್ಬರೂ ಇವತ್ತಿನವರೆಗೂ ಮನುಷ್ಯರಾಗಿಯೇ ಉಳಿದಿದ್ದಾರೆ. ಮೌಲ್ಯಯುತ ರಾಜಕಾರಣವನ್ನು ಈ ಕ್ಷಣಕ್ಕೂ ಉಸಿರಾಡುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಈ ಇಬ್ಬರೂ ಗೆಲ್ಲಬೇಕಾಗಿತ್ತು.

ಗೆದ್ದು ಸಂಸತ್ತಿನಲ್ಲಿ ಕರ್ನಾಟಕದ ದನಿಯಾಗಬೇಕಾಗಿತ್ತು. ಏಕೆಂದರೆ, ಯಾವುದೇ ಸರಕಾರಕ್ಕೆ ಪ್ರಬಲ ವಿರೋಧ ಪಕ್ಷವಿದ್ದಾಗಲೇ ಅದಕ್ಕೊಂದು ಬೆಲೆ. ಸಮರ್ಥ ವಿರೋಧ ಪಕ್ಷದ ನಾಯಕರಿದ್ದಾಗಲೇ ಅದಕ್ಕೊಂದು ತೂಕ. ಅದು ಕಾಣುವುದು ಸಂಸತ್ತಿನ ವಿಷಯ ಮಂಡನೆಯಲ್ಲಿ, ವಾದ-ಪ್ರತಿವಾದದಲ್ಲಿ. ಆಳುವ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಬುದ್ಧಿವಂತಿಕೆಯಲ್ಲಿ. ಸಂಸತ್ತಿನಲ್ಲಿ ದೇವೇಗೌಡರು ಮಾತನಾಡಲು ಎದ್ದು ನಿಂತರೆ, ಸ್ಪೀಕರ್ ಆದಿಯಾಗಿ ಇಡೀ ಸದನವೇ ಸ್ತಬ್ಧವಾಗುತ್ತಿತ್ತು. ಅವರ ಅನುಭವ, ವಿದ್ವತ್ತು, ವಯಸ್ಸು, ವರ್ಚಸ್ಸು ಆ ಸ್ಥಾನಕ್ಕೊಂದು ಘನತೆ ಗೌರವವನ್ನು ತರುತ್ತಿತ್ತು. ಗೌಡರು ಕೂಡ ಕೂಲಿ ಕಾರ್ಮಿಕನಿಂದ ಹಿಡಿದು ಕಾವೇರಿವರೆಗೆ; ಕಾಶ್ಮೀರದ ಸಮಸ್ಯೆಯಿಂದ ಹಿಡಿದು ಮಹಾದಾಯಿ ನೀರಿನವರೆಗೆ ತರ್ಕಬದ್ಧವಾಗಿ ವಾದ ಮಂಡಿಸುತ್ತಿದ್ದರು. ಅವರ ಅಂಕಿ ಸಂಖ್ಯೆಗಳುಳ್ಳ ವಿದ್ವತ್ಪೂರ್ಣ ಮಾತಿಗೆ ಇಡೀ ಸದನವೇ ಸೈಲೆಂಟಾಗಿದ್ದು ಗೌರವ ಸೂಚಿಸುತ್ತಿತ್ತು. ಸರಕಾರವೂ ಗಂಭೀರವಾಗಿ ಪರಿಗಣಿಸುತ್ತಿತ್ತು. ಕ್ರಮ ಕೈಗೊಳ್ಳುವ ಮಾರ್ಗದಲ್ಲಿ ಅದರ ಫಲ ಕಾಣುತ್ತಿತ್ತು. ಹಾಗೆಯೇ ಮಲ್ಲಿಕಾರ್ಜುನ ಖರ್ಗೆಯವರು, 2014ರ ಲೋಕಸಭೆಯಲ್ಲಿ 332 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದ ಎನ್‌ಡಿಎ ಸರಕಾರಕ್ಕೆ ನರೇಂದ್ರ ಮೋದಿ ಪ್ರಧಾನಿಯಾದರೆ; ಕೇವಲ 44 ಸ್ಥಾನಗಳನ್ನು ಪಡೆದು ಹೀನಾಯ ಸ್ಥಿತಿಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯ ಪ್ರತಿಪಕ್ಷ ನಾಯಕರಾದರು. ಅಲ್ಲಿಯವರೆಗೆ ಆ ಸ್ಥಾನದಲ್ಲಿ ಕೂತವರು ಉತ್ತರ ಭಾರತದವರು.

ಈ ಬಾರಿ ಕರ್ನಾಟಕದ ಖರ್ಗೆ ಲೋಕಸಭೆಯ ಕಾಂಗ್ರೆಸ್ ನಾಯಕ ಎಂದಾಕ್ಷಣ ಪ್ರಧಾನಿ ಮೋದಿ ಮುಖ ಮುಚ್ಚಿಕೊಂಡು ನಕ್ಕಿದ್ದರು. ಮಂತ್ರಿಗಳು, ಅಧಿಕಾರಿಗಳು ನಿರ್ಲಕ್ಷಿಸಿದರು. ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸಬೇಕಾದ, ಜನಪರ ನಿಲುವು ತಳೆಯಬೇಕಾದ ದೇಶದ ಮಾಧ್ಯಮಗಳು ಕೂಡ ಸ್ವಾರ್ಥಕ್ಕೆ ಬಲಿಬಿದ್ದು ಆಳುವ ಪಕ್ಷದ ತುತ್ತೂರಿಗಳಾದವು. ದಿನ ಕಳೆದಂತೆ, ಮೋದಿಯ ಆಡಳಿತ, ಕಾರ್ಯವೈಖರಿ, ಜಾರಿಗೆ ತಂದ ಕಾಯ್ದೆಗಳ ಮೂಲಕ ಮೋದಿಯ ‘ಬಂಡವಾಳ’ ಬಯಲಾಯಿತು. ಮೋದಿಯ ಅಪಕ್ವ ರಾಜಕೀಯ ನಡೆಗಳನ್ನು, ಅವು ಜನತೆಯ ಮೇಲೆ ಬೀರಿದ ಪರಿಣಾಮಗಳನ್ನು ಪ್ರತಿಪಕ್ಷ ನಾಯಕ ಖರ್ಗೆ ತರ್ಕಬದ್ಧವಾಗಿ ಟೀಕಿಸಿ ತಿರುಗೇಟು ನೀಡತೊಡಗಿದರು. ಮೊದಮೊದಲು ಖರ್ಗೆ ಮಾತಿಗೆ ನಿಂತರೆ ಮೇಜುಕುಟ್ಟಿ ಸದ್ದು ಮಾಡಿ ಸುಮ್ಮನಿರಿಸುತ್ತಿದ್ದ ಬಲಾಢ್ಯ ಬಿಜೆಪಿಗಳು, ನಂತರದ ದಿನಗಳಲ್ಲಿ ಖರ್ಗೆಯ ಖಡಕ್ ಮಾತಿಗೆ ತೆಪ್ಪಗಾದರು. ಮೋದಿ ಭಜನೆಯಲ್ಲಿ ಮುಳುಗಿದ್ದ ಮಾಧ್ಯಮಗಳು, ನಂತರ ಖರ್ಗೆಗೂ ಸ್ಪೇಸ್ ಕೊಡುವುದು ಡೆಮಾಕ್ರಸಿಯಲ್ಲಿ ಬಹಳ ಮುಖ್ಯ ಎನ್ನುವುದನ್ನು ಅರಿತುಕೊಂಡವು.

ಇವತ್ತು ಈ ಇಬ್ಬರು ನಾಯಕರು ಸಂಸತ್ತಿನಲ್ಲಿ ಇಲ್ಲದಿರುವುದು ಕರ್ನಾಟಕವಷ್ಟೇ ಅಲ್ಲ, ದಕ್ಷಿಣ ಭಾರತವೇ ನಿರ್ಲಕ್ಷಕ್ಕೊಳಗಾಗಲಿದೆ. ಅವರ ಅಗತ್ಯ ಮತ್ತು ಅನಿವಾರ್ಯತೆ ಮುಂದಿನ ದಿನಗಳಲ್ಲಿ ಇನ್ನಷ್ಟು ನಿಚ್ಚಳವಾಗಿ ಗೋಚರಿಸಲಿದೆ. ಈ ಸೋಲು ಅವರಿಬ್ಬರಿಗೆ ಅಂತಹ ದೊಡ್ಡ ನಷ್ಟವಲ್ಲ, ಆದರೆ ನಾಡಿಗೆ, ದೇಶಕ್ಕೆ, ಬಹುತ್ವಕ್ಕೆ, ಜಾತ್ಯತೀತತೆಗೆ ಬಹುದೊಡ್ಡ ನಷ್ಟ. ಅದನ್ನು ಮುಂದಿನ ದಿನಗಳೇ ಹೇಳಬಲ್ಲವು.

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News