ವಿಲ್

Update: 2019-05-26 14:01 GMT

ಯಶೋದಕ್ಕನಿಗೆ ಯಾವಾಗಲೂ ಮನೆ ವಾರ್ತೆಯದ್ದೇ ಖಯಾಲಿ. ಬಿಟ್ಟರೆ ಟಿವಿ ಮುಂದೆ ಕುಳಿತುಕೊಂಡು ಸೀರಿಯಲ್ ನೋಡುವುದು. ಅದು ಯಾವುದೇ ಒಂದು ಸೀರಿಯಲ್ ಆದರೂ ಸರಿಯಾಗಿ ನೋಡುವುದಿಲ್ಲ. ಅಲ್ಪ ಸ್ವಲ್ಪ ನೋಡಿ ಪುನಃ ಬಂದು ಅನ್ನ ಬೆಂದಿದಾ ಅಥವಾ ಸಾರಿಗೆ ಸರಿಯಾಗಿ ಉಪ್ಪು ಹಾಕಿದ್ದೇನಾ ಇದೇ ಆಯಿತು. ಮಗ ಬರುವ ಹೊತ್ತಿಗೆ ಸರಿಯಾಗಿ ಅನ್ನ ಪದಾರ್ಥ ರೆಡಿ ಮಾಡಿ, ಅವನ ಆರೈಕೆಯಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಮಗನಿಗಾದರೋ ತಾಯಿಯ ಕೈಯ ಅಡುಗೆಯೇ ಆಗಬೇಕು. ಹೋಟೆಲಿನಲ್ಲಿ ತಿಂದೇ ಗೊತ್ತಿಲ್ಲ. ಈ ಹಿಂದೆ 15 ವರ್ಷ ಮಿಲಿಟರಿಯಲ್ಲಿ ಕೆಲಸ ಮಾಡುವಾಗ ಆ ಮಿಲಿಟರಿಯ ಅಡುಗೆ ರುಚಿ ತಿಂದು, ನಾಲಿಗೆ ಜಡ್ಡು ಗಟ್ಟಿ ಹೋಗಿದೆ. ಯಾವಾಗ ತಾಯಿಯ ಕೈಯ ರುಚಿ ತಿಂದು ಬಿಟ್ಟೆನೋ ಎಂಬ ತರಾತುರಿಯಲ್ಲಿ ಇದ್ದ ರಾಘವ.

ಹೌದು ರಾಘವ ರಾಧಕ್ಕನಿಗೆ ಒಬ್ಬನೇ ಮಗ. ತಂದೆಯು ಮಿಲಿಟರಿಯಲ್ಲಿ ಸೇವೆ ಮಾಡಿ ಬಂದು, ಸ್ವಲ್ಪ ಸಮಯದಲ್ಲಿಯೇ ಹೃದಯಘಾತದಿಂದ ತೀರಿಕೊಂಡರು. ಗಂಡನನ್ನು ಕಳೆದು ಕೊಂಡ ದುಃಖದಲ್ಲಿ ಮಗನ ಮುಖ ನೋಡಿ ಸಮಾಧಾನಗೊಂಡರು. ಮಗನ ಲಾಲನೆ ಪಾಲನೆಯಲ್ಲೇ ತನ್ನ ಸುಖವನ್ನು ಕಂಡರು.

ರಾಘವನು 15 ವರ್ಷ ಮಿಲಿಟರಿಯಲ್ಲಿ ಸೇವೆಗೈದು ಬಂದು, ಈಗ ಒಂದು ಪ್ರೈವೇಟ್ ಕಂಪೆನಿಯಲ್ಲಿ ಕಾರಕೂನನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ರಾಘವನಿಗೆ ಮದುವೆ ಮಾಡಿ ಮುಗಿಸಬೇಕೆಂಬ ಇರಾದೆಯೂ ರಾಧಕ್ಕನಲ್ಲಿದೆ. 20 ವರ್ಷದವನಿದ್ದಾಗ ಮಿಲಿಟರಿಗೆ ಹೋಗಿ ಈಗ 15 ವರ್ಷ ಸರ್ವಿಸ್ ಮಾಡಿ ಬಂದಿದ್ದಾನೆ. ವರ್ಷ ಸರಿದದ್ದೇ ಗೊತ್ತಾಗಲಿಲ್ಲ. ಈಗಲೂ ರಾಧಕ್ಕನಿಗೆ ರಾಘವನು ಮಗುವಿನಂತೆಯೇ ಕಾಣುತ್ತಾನೆ. ದೂರದ ಊರಿನಲ್ಲಿದ್ದರೂ, ತಮ್ಮ ಸಂಬಂಧಿಕರನ್ನೇ ತರಬೇಕು ಎಂಬ ಒಂದು ಸಣ್ಣ ಮನಸ್ಸು ಹೇಳುತ್ತಿದೆ. ಆದರೆ ಸಂಬಂಧದವರು ಗೊತ್ತಿರುವ ಮಟ್ಟಿಗೆ ಯಾರೂ ರಾಘವನಿಗೆ ಹೊಂದುವವರು ಇಲ್ಲ. ಆಗ ಗಂಡನವರು ಮಿಲಿಟರಿ ಬಿಟ್ಟು ಬಂದಾಗ ಸರಕಾರದವರು ಒಂದು ಎಕರೆ ಜಾಗ ಕೊಟ್ಟಿದ್ದರು. ಮೇಲಾಗಿ ಗಂಡನ ಕಡೆಯಿಂದಲೂ ಸಾಕಷ್ಟು ಆಸ್ತಿ ಇದೆ. ನನ್ನ ತಂದೆ ತಾಯಿಗೆ ನಾನೊಬ್ಬಳೇ ಮಗಳಾಗಿದ್ದರಿಂದ ಅವರ ಎಲ್ಲ ಆಸ್ತಿಯು ನನಗೆ ಬಂದಿದೆ. ಆದ್ದರಿಂದ ಎರಡು, ಮೂರು ತಲೆಮಾರು ತಿಂದು ಮುಗಿಸಿದರೂ ಆಸ್ತಿ ಕರಗುವುದಿಲ್ಲ. ಮೇಲಾಗಿ ಗಂಡನ ಪೆನ್ಶನ್, ಮಗನ ಪೆನ್ಶನ್ ಇಷ್ಟು ಆದಾಯ ರಾಧಕ್ಕನಿಗೆ, ಬರುವ ಹೆಣ್ಣಿಗೆ ಯಾವುದೇ ತೊಂದರೆ ಇಲ್ಲದಂತೆ ಮನೆ ನಡೆಸಿಕೊಂಡು ಹೋಗಬಹುದೆಂಬ ದೂರದ ಆಸೆ.

ಹಾಗಾಗಿ ಒಂದು ಸಾಧಾರಣ ಮಟ್ಟಿನ, ಹೆಚ್ಚು ಸಿರಿವಂತರಲ್ಲದ, ಒಳ್ಳೆಯ ಗುಣ ನಡತೆಯ ಹೆಣ್ಣು ಮಗಳನ್ನು ಸೊಸೆಯನ್ನಾಗಿ ತರಬೇಕೆಂದು ಸಂಬಂಧಿಕರನ್ನು, ಮದುವೆ ಬ್ರೋಕರ್‌ಗಳು ಭೇಟಿಯಾಗಿ ಮದುವೆ ಬಗ್ಗೆ ಪ್ರಸ್ತಾಪ ಮಾಡಿದರು. ಕೆಲವೊಂದು ಸಂಬಂಧಗಳು ಬಂದವು. ಕೆಲವೊಂದು ಒಪ್ಪಿಗೆಯಾದರೂ ಜಾತಕ ಸರಿ ಇಲ್ಲವೆಂದು ಬಿಟ್ಟಿದ್ದಾಯಿತು. ಅಂತೂ ಒಂದು ಹುಡುಗಿಯ ಜಾತಕ ರಾಘವನ ಜಾತಕ ಕೂಡಿ ಬಂದಿದ್ದರಿಂದ ಮದುವೆ ನಿಶ್ಚಯವಾಯಿತು. ಮದುವೆ ದಿನವೂ ಹತ್ತಿರ ಬಂತು. ಸುಧಾ -ರಾಘವರ ಮದುವೆಯು ಬಹಳ ವಿಜೃಂಭಣೆಯಿಂದ ನೆರವೇರಿತು. ರಾಧಕ್ಕನು ಬಹಳ ಸಂಭ್ರಮ ಪಟ್ಟರು. ಗಂಡನಿಲ್ಲದಿದ್ದರೂ, ಗಂಡನ ಸ್ಫೂರ್ತಿಯನ್ನೇ ಮೈಗೂಡಿಸಿಕೊಂಡು ಮಗನ ಮದುವೆ ಯಾವುದೇ ವಿಘ್ನಗಳಿಲ್ಲದೆ ಮುಗಿದು ಹೋಯಿತು. ರಾಧಕ್ಕ ನೆಮ್ಮದಿಯ ನಿಟ್ಟುರಿಸು ಬಿಟ್ಟರು. ದೂರದ ಊರಿಗೆ ಹನಿಮೂನಿಗಾಗಿ ಹಾರಿ ಹೋದರು ದಂಪತಿ. ಏನೋ ಒಂದು ಖುಷಿ ರಾಧಕ್ಕನಿಗೆ. ಮಗನಿಗೆ ಮನ ಮೆಚ್ಚಿದ ಹುಡುಗಿ ಸಿಕ್ಕಿದ್ದಾಳೆ. ನಾನಾದರೂ ಇನ್ನು ಎಷ್ಟು ದಿನಾಂತ ಬದುಕುವೆನು? ಮಗ ಸೊಸೆಯರ ಸಂತೋಷದಲ್ಲಿಯೇ ನನ್ನ ಉಳಿದ ಬದುಕನ್ನು ಹಸನು ಗೊಳಿಸಬೇಕೆಂದು ಆಸೆ ಪಟ್ಟರು. ಅದು ಅವರ ತಪ್ಪಲ್ಲ. ಸಹಜವಾಗಿ ಎಲ್ಲ ತಂದೆ - ತಾಯಿಯವರಿಗೂ ಇರುವುದು ಅದೇ ತಾನೇ?.

ಹನಿಮೂನು ಮುಗಿಸಿಕೊಂಡು ಬಂದ ಹೊಸತರಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಗಂಡ ಹೆಂಡತಿಯರಲ್ಲಿ ಏನೋ ಬಿರುಕು ಇದ್ದಂತೆ ಕಂಡು ಬಂದಿತ್ತು ರಾಧಕ್ಕನಿಗೆ. ಯಾಕೋ ಗಂಡ ಕೆಲಸದಿಂದ ಬಂದಾಗ ಸುಧಾ ಸರಿಯಾಗಿ ಗಮನಿಸುವುದಿಲ್ಲವೆಂದು ಗೋಚರಿಸುತ್ತದೆ ರಾಧಕ್ಕನಿಗೆ. ಕೆಲವೊಮ್ಮೆ ತನ್ನ ತವರು ಮನೆಗೆ ಹೋದರೆ ವಾರದ ತನಕವೂ ಬರುತ್ತಿರಲಿಲ್ಲ ಸುಧಾ. ರಾಧಕ್ಕ ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. ಅದು ಗಂಡ - ಹೆಂಡತಿ ಮಧ್ಯೆ ಸಾಮಾನ್ಯವೆಂದು ಮಗನಲ್ಲಿ ವಿಚಾರಿಸುತ್ತಿರಲಿಲ್ಲ. ಕ್ರಮೇಣ ಈ ವ್ಯತ್ಯಾಸ ಜಾಸ್ತಿಯಾಗಿ ಕಂಡು ಬಂದಾಗ ಮಗನೋ ಯಾವುದೇ ಖಿನ್ನತೆಯಲ್ಲಿ ಇರುವಂತೆ ಕಂಡು ಬರುತ್ತಿತ್ತು. ಮದುವೆ ವಿಚಾರದಲ್ಲಿ ನಾನು ಯಾವುದೋ ತಪ್ಪು ಮಾಡಿದಂತೆ ಅನಿಸಿತು ರಾಧಕ್ಕನಿಗೆ. ಇತ್ತೀಚೆಗೆ ಊಟವನ್ನು ಸರಿಯಾಗಿ ಮಾಡುತ್ತಿರಲಿಲ್ಲ ಮಗ, ಕೇಳಿದರೆ ಹಾರಿಕೆಯ ಉತ್ತರ ಕೊಡುತ್ತಿದ್ದ. ಬರುಬರುತ್ತಾ ಈ ವ್ಯತ್ಯಾಸ ಜಾಸ್ತಿಯಾಗಿ ಅತ್ತೆಯನ್ನು ಕಂಡರೆ ಭಯ ಭಕ್ತಿ ತೋರಿಸುತ್ತಿದ್ದ ಸೊಸೆ ಈಗ ಉರಿದು ಬೀಳುತ್ತಿದ್ದಳು. ದಿನವೂ ಗಂಡ ಹೆಂಡಿರ ಮಧ್ಯೆ ಗಲಾಟೆ. ಇದು ಯಾಕೋ ಮಿತಿ ಮೀರಿದಂತೆ ತೋರುತ್ತಿತ್ತು. ಕೊನೆಗೊಂದು ದಿನ ಗೊತ್ತಾಯ್ತು ಸೊಸೆಯ ಹಿಂದಿರುವ ರಹಸ್ಯ. ಅವಳಿಗೆ ಮದುವೆಗೆ ಮುಂಚೆಯೇ ಒಬ್ಬನಲ್ಲಿ ಸಂಬಂಧ ಇತ್ತು. ಅವಳು ಮನೆಯವರ ಒತ್ತಾಯಕ್ಕೆ, ಮೇಲಾಗಿ ಮುಂದೆ ರಾಘವನ ಸಮಸ್ತ ಆಸ್ತಿಯ ಒಡತಿ ತಾನಾಗುವ ಒಂದು ಆಸೆಗಾಗಿ ತನಗಿಂತ 14 - 15 ವರ್ಷ ದೊಡ್ಡವನಾದ ರಾಘವನನ್ನು ಮದುವೆಯಾಗಲು ಒಪ್ಪಿದ್ದಳು. ಇದು ಎಷ್ಟೋ ಸಮಯದ ನಂತರ ರಾಧಕ್ಕ -ರಾಘವರಿಗೆ ಗೊತ್ತಾಯ್ತು. ಮದುವೆ ಬ್ರೋಕರ್ ಇವರಿಗೆ ಹಣ ತೆಗೆದುಕೊಂಡು ಮೋಸ ಮಾಡಿದ್ದ. ಆದರೆ ಏನು ಮಾಡುವುದು? ಎಲ್ಲವೂ ಕೈ ಮೀರಿ ಹೋಗಿತ್ತು. ಇದು ಯಾವ ರೀತಿಯಲ್ಲಿಯೂ ಸರಿ ಮಾಡಲು ಕಷ್ಟ ಸಾಧ್ಯ. ಮಗನಾದರೂ ಒಳ್ಳೆಯ ಮನಸ್ಸಿನವನು. ಮೇಲಾಗಿ ಯಾವುದೇ ಹುಡುಗಿಯ ಸಂಬಂಧವಿರದ ಸಚ್ಚಾರಿತ್ರವುಳ್ಳವನು. ಬೇರೆ ಹುಡುಗಿಯರನ್ನು ಕಣ್ಣೆತ್ತಿಯೂ ನೋಡದವನು. ಇಂತಹ ಮಗನಿಗೆ ಈ ದುರವಸ್ಥೆ ಬಂದಿತ್ತಲ್ಲ ಎಂಬ ಕೊರಗು ರಾಧಕ್ಕನಿಗೆ ಕಾಡಲು ಶುರುವಾಯಿತು. ಮಗನಾದರೂ ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದನು. ಮಗುವಾದರೂ ಒಂದು ಇರುತ್ತಿದ್ದರೆ ಅದರ ಮುಖ ನೋಡಿಯಾದರೂ ಸಂತೋಷಪಡುತ್ತಿದ್ದರು. ಮೊಮ್ಮಕ್ಕಳನ್ನು ಆಡಿಸಿ ಬೆಳೆಸುವ ಭಾಗ್ಯವನ್ನೇ ಪಡೆದುಕೊಂಡಿಲ್ಲ ರಾಧಕ್ಕ. ತುಂಬಾ ವರ್ಷದ ನಂತರ ಮದುವೆಯಾದರೂ ರಾಘವನಿಗೆ ಹೆಂಡತಿಯ ಮೇಲೆ ತುಂಬಾ ಪ್ರೀತಿ ಮೂಡಿತ್ತು. ಅವಳನ್ನು ಮನಸಾರೆ ಪ್ರೀತಿಸುತ್ತಿದ್ದನು. ಮೇಲಾಗಿ ಗೌರವಿಸುತ್ತಿದ್ದನು. ಆದರೆ ಅವಳ ಪ್ರೀತಿ ನಾಟಕವಾಗಿತ್ತು. ಪ್ರೀತಿಯ ನಾಟಕವಾಡಿ ಅವನನ್ನು ಮೋಹದ ಬಲೆಗೆ ಬೀಳಿಸಿದ್ದಳು. ಮಗನ ಈ ಅವಸ್ಥೆ ನೋಡಿ ರಾಧಕ್ಕನೂ ಕೊನೆಗೊಂದು ದಿನ ತನ್ನ ಗಂಡನ ಹಾದಿ ಹಿಡಿದಳು. ಮಗನು ಒಬ್ಬಂಟಿಯಾದನು. ತನ್ನನ್ನು ಪ್ರೀತಿಸುತ್ತಿದ್ದ ಒಂದೇ ಒಂದು ಜೀವ ನನ್ನ ಬಿಟ್ಟು ಅಗಲಿದ ನೋವು ರಾಘವನನ್ನು ತುಂಬಾ ಕಾಡಿತ್ತು. ನಾನು ಒಬ್ಬಂಟಿಯಾದೆ ಎಂದು ಚೀರಿ ಚೀರಿ ಹೇಳುತ್ತಿತ್ತು ಅವನ ಮನಸ್ಸು. ಆದರೂ ತಾಯಿ ಬಾರದ ಲೋಕಕ್ಕೆ ಹೋಗಿದ್ದಳು. ರಾಧಕ್ಕ ಸತ್ತ ನಂತರ ಸುಧಾಳ ವರ್ತನೆಯೇ ಬೇರೆಯಾಗಿತ್ತು. ತನ್ನನ್ನು ಕೇಳುವವರಾರು ಇಲ್ಲ ಎಂಬ ರೀತಿ ವರ್ತಿಸುತ್ತಿದ್ದಳು. ತನ್ನ ಪ್ರಿಯಕರನೊಂದಿಗೆ ಒಡನಾಟ ಜಾಸ್ತಿಯಾಗಿ, ಅವನು ಮನೆಯೊಳಗೂ ಕಾಲಿಡುವಂತೆ ಮಾಡಿತ್ತು. ಇದನ್ನೆಲ್ಲಾ ನೋಡಿ ಸೌಮ್ಯ ಸ್ವಭಾವದ ರಾಘವ ಕಿಡಿಕಿಡಿಯಾದನು. ಇವರಿಬ್ಬರನ್ನು ಕೊಂದು ತಾನು ಜೈಲಿಗೆ ಹೋಗಬೇಕೆಂದು ಎಣಿಸಿದನು. ಈ ಎಲ್ಲ ವಿಚಾರವನ್ನು ತನ್ನ ಆಪ್ತ ಮಿತ್ರ, ನನ್ನ ಬಾಲ್ಯದ ಸ್ನೇಹಿತನಲ್ಲಿ ಹೇಳಿಕೊಂಡನು. ಇವರು ಆಸ್ತಿಗಾಗಿ ನನ್ನನ್ನು ಕೊಲ್ಲುವುದಕ್ಕೆ ಹೇಸುವುದಿಲ್ಲ. ಊಟದಲ್ಲಿ ವಿಷ ಹಾಕುವುದಕ್ಕೂ ಹಿಂಜರಿಯರು ಎಂಬ ಕಟು ಸತ್ಯವನ್ನು ಕಂಡುಕೊಂಡನು. ಈ ವಿಷಯವನ್ನು ತನ್ನ ಸಂಬಂಧಿಕರೆಲ್ಲರ ಗಮನಕ್ಕೂ ತಂದನು. ಒಂದು ಚೆಂದದ ಹಿಂದೆ ಎಷ್ಟೊಂದು ಕಥೆಗಳು ಇವೆಯೆಂದು ಈಗ ಅರ್ಥ ಮಾಡಿಕೊಂಡನು ರಾಘವ. ಏನಾದರಾಗಲಿ ಇವಳಿಗೊಂದು ಸಡ್ಡು ಹೊಡೆಯಬೇಕು. ತನ್ನ ಮತ್ತು ತನ್ನ ಮನೆಯವರಿಗೆ ಮಾಡಿದ ಅನ್ಯಾಯವನ್ನು ಹೇಗಾದರೂ ಮಾಡಿ ತೀರಿಸಬೇಕೆಂಬ ಅಚಲ ನಿರ್ಧಾರಕ್ಕೆ ಬಂದನು. ತಮ್ಮ ಕುಟುಂಬದ ಲಾಯರ್ ಗೊತ್ತು ಮಾಡಿ, ತನಗೆ ಬಂದ ಸಮಸ್ತ ಆಸ್ತಿಯನ್ನು ದೂರದ ಸಂಬಂಧಿಕರ ಅನಾಥ ಹೆಣ್ಣು ಮಗಳ ಹೆಸರಿಗೆ ಬರೆದು, ವಿಲ್ ಮಾಡಿದನು. ಮನಸ್ಸು ಖಾಲಿ ಖಾಲಿಯಾಯಿತು. ಏನೋ ಒಂದು ಮಹತ್ಕಾರ್ಯವನ್ನು ಸಾಧಿಸಿದಂತೆ ಭಾಸವಾಯಿತು. ರಾಘವನಿಗೆ ಜಗತ್ತಿನಲ್ಲಿ ಹೆಣ್ಣು, ಹೊನ್ನು, ಮಣ್ಣಿಗಾಗಿ ಏನೆಲ್ಲ ನಡೆಯುತ್ತದೆ. ಆಸ್ತಿಗಾಗಿ ಹೆತ್ತವರನ್ನು, ಒಡಹುಟ್ಟಿದವರನ್ನು ಕೊನೆಗೆ ಗಂಡನನ್ನು ಮುಕ್ಕಿ ತಿನ್ನುವವರು ಈ ಲೋಕದಲ್ಲಿ ಇದ್ದಾರೆ. ಅವರಿಗಾಗಿ ಸ್ವಲ್ಪ ಹೊತ್ತು ಪಶ್ಚಾತಾಪಪಟ್ಟ ರಾಘವ. ಇದನ್ನು ಯಾವ ರೀತಿಯಲ್ಲಿ ಸರಿ ಮಾಡಲು ಆಗುವುದಿಲ್ಲವೆಂಬ ಕಟು ಸತ್ಯವನ್ನು ಅರಿತುಕೊಂಡನು.

ಒಂದು ಸಂಜೆ ಮನಸ್ಸಿನಲ್ಲಿದ್ದ ದುಗುಡವನ್ನು ಕಳೆಯಲು, ತನ್ನೆಲ್ಲ ದುಃಖ, ಮೈ ಭಾರ ಇಳಿಸಲು ಸಮುದ್ರದತ್ತ ಹೆಜ್ಜೆ ಹಾಕಿದನು. ಒಂದರ ಹಿಂದೆ ಒಂದರಂತೆ ಬರುವ ಅಲೆಗಳ ವೈಚಿತ್ರವನ್ನು ಕಂಡು ಆನಂದಿಸಿದನು. ಬೀಸಿ ಬರುವ ತಂಗಾಳಿಗೆ ಮೈ ಪುಳಕಗೊಂಡಿತು. ಆ ಹಿತವನ್ನು ಮನಸಾರೆ ಆನಂದಿಸಿದನು. ಏನೋ ಒಂದು ಅವ್ಯಕ್ತ ಆನಂದ. ಸೂರ್ಯ ಸಮುದ್ರದಂಚಿನಲ್ಲಿ ಜಾರುತ್ತಿದ್ದ. ಹಕ್ಕಿಗಳು ಗೂಡು ಸೇರುತ್ತಿದ್ದವು. ಆಕಾಶವು ರಂಗೋಲಿಯಾಕಾರವಾಗಿತ್ತು. ಮರುದಿನ ಬೆಳಗ್ಗೆ ದೂರದ ಸಮುದ್ರದ ತೆರೆಗಳ ಮಧ್ಯೆ ಹೆಣ ವೊಂದು ತೇಲಿ ಬರುತಿತ್ತು. ತೀರದಲ್ಲಿ ಆಸೆಯಿಂದ ನಾಯಿಗಳು ಕಾದು ಕುಳಿತ್ತಿದ್ದವು.

Writer - ಯೋಗೀಶ್ ಕಾಂಚನ್ ಬೈಕಂಪಾಡಿ

contributor

Editor - ಯೋಗೀಶ್ ಕಾಂಚನ್ ಬೈಕಂಪಾಡಿ

contributor

Similar News