ಖಾಸಗಿ ಶಾಲೆಗಳಿಂದ ದುಪ್ಪಟ್ಟು ಸಾರಿಗೆ ದರ ವಸೂಲಿ: ಆರೋಪ
ಬೆಂಗಳೂರು, ಮೇ 26: ನಗರದ ಖಾಸಗಿ ಶಾಲೆಗಳು ಮಕ್ಕಳನ್ನು ಕರೆದೊಯ್ಯುವ ವಾಹನಗಳ ಪ್ರಯಾಣ ದರವನ್ನು ಪ್ರತಿ ಕಿ.ಮೀ. 70 ರಿಂದ 80 ರೂ.ವರೆಗೂ ನಿಗದಿ ಮಾಡುತ್ತಿದ್ದು, ಪೋಷಕರಿಂದ ಸಾವಿರಾರು ರೂ.ಗಳು ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಖಾಸಗಿ ಶಾಲೆಗಳು ನಿಗದಿ ಮಾಡಿರುವ ದರವು ಐಟಿ ಕಂಪನಿಗಳಿಗೆ ನೀಡುವ ವಾಹನಗಳಿಗಿಂತ ಅಧಿಕ ಹಣವಾಗಿದೆ. ಶಾಲೆಗಳು ಸಾರಿಗೆ ಸೇವೆ ಕಲ್ಪಿಸುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದಾರೆ. ಇದರಿಂದ ಪ್ರತಿ ವರ್ಷ ಕೋಟ್ಯಂತರ ರೂ. ಸಂಗ್ರಹ ಆಗುತ್ತಿದ್ದು, ಲಕ್ಷಾಂತರ ಪೋಷಕರು ಶೋಷಣೆಗೊಳಗಾಗುತ್ತಿದ್ದಾರೆ. ಈ ಬಗ್ಗೆ ಅರಿವಿದ್ದರೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಸಹಾಯಕರಾಗಿದ್ದಾರೆ. ಬೆಂಗಳೂರಿನಲ್ಲಿ ಅಂದಾಜು 10 ಸಾವಿರ ಖಾಸಗಿ ಹಾಗೂ ಅನುದಾನಿತ ಶಾಲೆಗಳಿವೆ. ಒಂದೊಂದು ಶಾಲೆ ಒಂದೊಂದು ರೀತಿಯಲ್ಲಿ ಶುಲ್ಕ ನಿಗದಿ ಮಾಡುತ್ತಿದ್ದು, ವಾರ್ಷಿಕ 25 ಸಾವಿರದಿಂದ 45 ಸಾವಿರದಷ್ಟು ದರ ವಸೂಲಿ ಮಾಡುತ್ತಿದ್ದಾರೆ. ಆ್ಯಪ್ ಆಧಾರಿತ ವಾಹನಗಳು, ಆಟೋ ದರಗಳಿಗೆ ಹೋಲಿಸಿದರೆ ಇದು ಮೂರು ಪಟ್ಟು ದುಪ್ಪಟ್ಟಾಗುತ್ತದೆ. ಆದರೆ, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅನಿವಾರ್ಯವಾಗಿ ಶಾಲಾ ವಾಹನ ಸೇವೆ ಪಡೆಯಲಾಗುತ್ತದೆ ಎಂದು ಪೋಷಕರೊಬ್ಬರು ಹೇಳಿದ್ದಾರೆ.
ದೇಶದ ಹಲವು ರಾಜ್ಯಗಳಲ್ಲಿ ಸರಕಾರವೇ ದರ ನಿಗದಿ ಮಾಡುತ್ತದೆ. ಜಾರ್ಖಂಡ್‌ನ ರಾಂಚಿಯಲ್ಲಿ ಶಾಲಾ ವಾಹನಗಳಿಗೆ ಸರಕಾರವೇ ದರ ನಿಗದಿಪಡಿಸಿದೆ. ಐದು ಕಿ.ಮೀ. ವ್ಯಾಪ್ತಿಯಲ್ಲಿ ಸೇವೆ ನೀಡುವ ವಾಹನಗಳಿಗೆ 710 ರೂ. ಹಾಗೂ 5-10 ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸುವ ಶಾಲಾ ವಾಹನಗಳಿಗೆ 850 ರೂ. ಹಾಗೂ 10ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿದ್ದರೆ 985 ರೂ. ಮತ್ತು 15 ಕಿ.ಮೀ. ಮೇಲ್ಪಟ್ಟಿದ್ದರೆ 1,050 ರೂ. ಶುಲ್ಕ ವಸೂಲಿ ಮಾಡಬೇಕಿದೆ.
ಅದೇ ವ್ಯವಸ್ಥೆಯು ಪಂಜಾಬ್, ಹಿಮಾಚಲ ಪ್ರದೇಶ, ಚಂಡಿಗಢದಲ್ಲಿಯೂ ಚಾಲ್ತಿಯಲ್ಲಿದೆ. ಹೀಗಾಗಿ, ನಗರದಲ್ಲಿ ದರ ನಿಗದಿ ಸಂಬಂಧ ಒಂದು ತಂಡವನ್ನು ರಚನೆ ಮಾಡಿ ವೈಜ್ಞಾನಿಕ ದರ ನಿಗದಿ ಮಾಡಲು ಮುಂದಾಗಬೇಕು ಎಂದು ಪೋಕಷರು ಆಗ್ರಹಿಸಿದ್ದಾರೆ.
ಪೋಷಕರಿಗೆ ಕಿರುಕುಳ: ಕೆಲವು ಶಾಲಾ ಆಡಳಿತ ಮಂಡಳಿಗಳು ಸಾರಿಗೆ ಸೇವೆಗಾಗಿ ವಾಹನಗಳ ಪೂರೈಸುವ ಸಂಬಂಧ ಹೊರಗುತ್ತಿಗೆ ನೀಡಿವೆ. ಹೀಗೆ ಹೊರಗುತ್ತಿಗೆ ಪಡೆದ ಟ್ರಾವೆಲ್ ಕಂಪನಿಗಳ ಮಾಲಕರು, ಶುಲ್ಕ ಪಾವತಿಸುವಲ್ಲಿ ವಿಳಂಬವಾದರೆ, ಅಂತಹ ಪೋಷಕರ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಮಾನಸಿಕ ಕಿರುಕುಳ ನೀಡುತ್ತಾರೆ ಎಂದೂ ಪೋಷಕರು ಆರೋಪಿಸಿದರು.