ಬಿಸಿನೀರು ಸೇವನೆಯ ಆರೋಗ್ಯ ಲಾಭಗಳ ಬಗ್ಗೆ ತಿಳಿದುಕೊಳ್ಳಿ

Update: 2019-05-27 04:26 GMT

ನೀರು ನಮ್ಮ ಶರೀರಕ್ಕೆ ಅತ್ಯಗತ್ಯವಾಗಿದೆ. ಪ್ರತಿನಿತ್ಯ ಸಾಕಷ್ಟು ನೀರು ಸೇವಿಸದಿದ್ದರೆ ನಿರ್ಜಲೀಕರಣ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನೀರು ನಮ್ಮ ಶರೀರಕ್ಕೆ ಆರೋಗ್ಯಲಾಭಗಳನ್ನು ನೀಡುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಬಿಸಿನೀರಿನ ಸೇವನೆಯು ಇನ್ನಷ್ಟು ಹೆಚ್ಚು ಆರೋಗ್ಯಲಾಭಗಳನ್ನು ನೀಡುತ್ತದೆ,ಈ ಬಗ್ಗೆ ಅಗತ್ಯ ಮಾಹಿತಿಗಳು ಇಲ್ಲಿವೆ. ಬಿಸಿನೀರು ಎಂದರೆ ಕುದಿಸಿ ಆರಿಸಿದ ನೀರಲ್ಲ,ಸೇವಿಸುವಾಗ ಅದು ಬಿಸಿಯಾಗಿಯೇ ಇರಬೇಕು ಎನ್ನುವುದು ನಿಮ್ಮ ಗಮನದಲ್ಲಿರಲಿ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಬಿಸಿನೀರು ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ. ಬಿಸಿನೀರು ಸೇವಿಸಿದಾಗ ನಾವು ಸೇವಿಸಿದ ಆಹಾರವನ್ನು ವಿಭಜಿಸಲು ನಮ್ಮ ಶರೀರಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿಲ್ಲ,ಹೀಗಾಗಿ ಆಹಾರವು ಸುಲಭವಾಗಿ ಜೀರ್ಣಗೊಳ್ಳುತ್ತದೆ ಮತ್ತು ಕರುಳಿನ ಮೂಲಕ ಸುಗಮವಾಗಿ ಹಾದು ಹೋಗುತ್ತದೆ. ಆಹಾರ ಸೇವನೆ ಸಂದರ್ಭ ತಣ್ಣೀರಿನ ಸೇವನೆಯು ವಿರುದ್ಧ ಪರಿಣಾಮವನ್ನು ನೀಡುತ್ತದೆ

ವಿಷವಸ್ತುಗಳನ್ನು ನಿವಾರಿಸುತ್ತದೆ

ಶರೀರವು ಬೆವರು ಮತ್ತು ಮೂತ್ರದ ಮೂಲಕ ವಿಷವಸ್ತುಗಳನ್ನು ಹೊರಕ್ಕೆ ಹಾಕಲು ಬಿಸಿನೀರು ನೆರವಾಗುತ್ತದೆ. ಬಿಸಿಯಾದ ಪಾನೀಯ ಸೇವಿಸಿದಾಗ ಶರೀರದ ಉಷ್ಣತೆಯು ಹೆಚ್ಚುತ್ತದೆ ಮತ್ತು ನಾವು ಬೆವರುವಂತೆ ಮಾಡುತ್ತದೆ.

ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ

ಬಿಸಿನೀರಿನ ಸೇವನೆಯಿಂದ ಕೊಬ್ಬು ಸಂಗ್ರಹಗಳು ಸೇರಿದಂತೆ ನಮ್ಮ ಶರೀರದಲ್ಲಿ ಹರಿದಾಡುತ್ತಿರುವ ವಿಷವಸ್ತುಗಳು ಹೊರಕ್ಕೆ ಹಾಕಲ್ಪಡುತ್ತವೆ ಮತ್ತು ರಕ್ತ ಪರಿಚಲನೆಯು ಉತ್ತಮಗೊಳ್ಳುತ್ತದೆ. ಸ್ನಾಯುಗಳು ಸಡಿಲಗೊಂಡು ರಕ್ತವು ಸುಗಮವಾಗಿ ಹರಿಯುತ್ತದೆ. ಅಲ್ಲದೆ ಬಿಸಿನೀರಿನ ಸ್ನಾನ ಮಾಡಿದ ಸಂದರ್ಭದಂತೆ ಬಿಸಿನೀರಿನ ಸೇವನೆಯಿಂದ ರಕ್ತನಾಳಗಳು ಹಿಗ್ಗುತ್ತವೆ ಮತ್ತು ರಕ್ತವು ಹರಿಯಲು ಹೆಚ್ಚಿನ ಸ್ಥಳಾವಕಾಶ ದೊರೆಯುತ್ತದೆ.

ನೋವನ್ನು ಶಮನಗೊಳಿಸುತ್ತದೆ

ಬಿಸಿನೀರು ಸ್ನಾಯುಗಳನ್ನು ಸಡಿಲಗೊಳಿಸುವ ಮೂಲಕ ನೋವನ್ನು ಶಮನಗೊಳಿಸುತ್ತದೆ. ತಲೆನೋವು ಮತ್ತು ಶರೀರದ ಇತರ ನೋವುಗಳಿಂದ ಪಾರಾಗಲು ಅದು ನೆರವಾಗುತ್ತದೆ.

ದೇಹದ ತೂಕ ಇಳಿಸಲು ನೆರವಾಗುತ್ತದೆ

ಬಿಸಿನೀರು ಸೇವನೆಯ ತಕ್ಷಣದ ಪರಿಣಾಮವೆಂದರೆ ಶರೀರದಲ್ಲಿ ಜಲಸಂಚಯನ. ಇದರಿಂದ ತುಂಬ ಹೊತ್ತಿನವರೆಗೆ ಹೊಟ್ಟೆ ತುಂಬಿರುವ ಅನುಭವವಾಗುವುದರಿಂದ ಕಡಿಮೆ ತಿನ್ನುವಂತೆ ಮಾಡುತ್ತದೆ. ಅಲ್ಲದೆ ಬಿಸಿನೀರು ಶರೀರದ ಉಷ್ಣತೆಯನ್ನು ಹೆಚ್ಚಿಸುವ ಮೂಲಕ ಶರೀರದ ಚಯಾಪಚಯ ದರವನ್ನೂ ಹೆಚ್ಚಿಸುತ್ತದೆ. ಅಂದರೆ ವಿಶ್ರಾಂತಿ ಯಲ್ಲಿರುವಾಗ ಶರೀರದಲ್ಲಿ ಹೆಚ್ಚು ಕ್ಯಾಲರಿಗಳು ದಹಿಸಲ್ಪಡುತ್ತವೆ. ಬಿನೀರಿನ ಸೇವನೆಯಿಂದ ವಿಶೇಷ ಆಹಾರ ಅಥವಾ ವ್ಯಾಯಾಮದ ಅಗತ್ಯವಿಲ್ಲದೆ ದೇಹತೂಕವನ್ನು ಇಳಿಸಲು ನೆರವಾಗುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.

ವಯಸ್ಸಾಗುವುದನ್ನು ನಿಧಾನಗೊಳಿಸುತ್ತದೆ

ಬಿಸಿನೀರಿನ ಸೇವನೆಯಿಂದ ಶರೀರವು ವಿಷವಸ್ತುಗಳಿಂದ ಮುಕ್ತವಾಗುವುದರಿಂದ ನಿಮ್ಮ ತ್ವಚೆಯು ಸೂಕ್ಷ್ಮಜೀವಿಗಳು ಮತ್ತು ಫ್ರೀ ರ್ಯಾಡಿಕಲ್‌ಗಳಿಂದ ಉಂಟಾದ ಹಾನಿಯಿಂದ ಬೇಗನೆ ಚೇತರಿಸಿಕೊಳ್ಳುತ್ತದೆ. ಜೀವಕೋಶಗಳು ತ್ವರಿತವಾಗಿ ದುರಸ್ತಿಗೊಳ್ಳುತ್ತವೆ ಮತ್ತು ಇದರಿಂದಾಗಿ ತ್ವಚೆಯು ಹೊಳಪು ಪಡೆದುಕೊಳ್ಳುತ್ತದೆ. ತ್ವಚೆಯ ಸ್ಥಿತಿಸ್ಥಾಪಕತ್ವ ಗುಣವು ಮರಳುವುದರಿಂದ ಸುಕ್ಕುಗಳು ಉಂಟಾಗುವ ಅಪಾಯವು ಕಡಿಮೆಯಾಗುತ್ತದೆ. ತ್ವಚೆಯಲ್ಲಿನ ರಂಧ್ರಗಳನ್ನು ತೆರೆಯುವ ಮೂಲಕ ಮೊಡವೆಗಳ ಕಾಟದಿಂದ ಪಾರಾಗಲೂ ಬಿಸಿನೀರು ನೆರವಾಗುತ್ತದೆ.

ಮಲಬದ್ಧತೆಯಿಂದ ಮುಕ್ತಿ ನೀಡುತ್ತದೆ

ಮಲಬದ್ಧತೆಯು ನಿರ್ಜಲೀಕರಣದ ಸಾಮಾನ್ಯ ಪರಿಣಾಮವಾಗಿದೆ. ನೀರು ಆಹಾರವನ್ನು ನಮ್ಮ ಕರುಳುಗಳ ಮೂಲಕ ಕೆಳಗಿಳಿಯುವಂತೆ ಮಾಡುತ್ತದೆ. ಶರೀರದಲ್ಲಿ ನಿರ್ಜಲೀಕರಣ ಉಂಟಾದಾಗ ದೊಡ್ಡ ಕರುಳು ನಾವು ಸೇವಿಸಿದ ಆಹಾರದಲ್ಲಿನ ಇದ್ದಬಿದ್ದ ನೀರನ್ನು ಸೆಳೆದುಕೊಳ್ಳುತ್ತದೆ ಮತ್ತು ಇದರಿಂದಾಗಿ ಆಹಾರವು ಗಟ್ಟಿಯಾಗುತ್ತದೆ. ಇದು ನೋವು ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ. ಬಿಸಿನೀರು ಆಹಾರವನ್ನು ತ್ವರಿತವಾಗಿ ವಿಭಜಿಸುತ್ತದೆ ಮತ್ತು ನೋವನ್ನು ಶಮನಗೊಳಿಸಿ ಮಲಬದ್ಧತೆಯಿಂದ ಪಾರು ಮಾಡುತ್ತದೆ.

ತ್ವಚೆಯನ್ನು ಸ್ವಚ್ಛಗೊಳಿಸುತ್ತದೆ

ಬಿಸಿನೀರು ತ್ವಚೆಯಲ್ಲಿನ ರಂಧ್ರಗಳನ್ನು ತೆರೆದು ವಿಷವಸ್ತುಗಳನ್ನು ಹೊರಕ್ಕೆ ಹಾಕುತ್ತದೆ. ತ್ವಚೆಯಲ್ಲಿ ಜಲಸಂಚಯ ಮಾಡುವ ಅದು ನೈಸರ್ಗಿಕ ಮಾಯಿಶ್ಚರೈಸರ್‌ನಂತೆ ಕಾರ್ಯ ನಿರ್ವಹಿಸುತ್ತದೆ.

ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ

ಬಿಸಿನೀರು ತಲೆಗೂದಲ ಬುಡದಲ್ಲಿರುವ ನರಗಳನ್ನು ಕ್ರಿಯಾಶೀಲಗೊಳಿಸುತ್ತದೆ,ತನ್ಮೂಲಕ ಅವುಗಳನ್ನು ಮೃದುವಾಗಿಸಿ ಹೊಳೆಯುವಂತೆ ಮಾಡುತ್ತದೆ. ಕೂದಲಿನ ಬೇರುಗಳು ಸದಾ ಚಟುವಟಿಕೆಯಲ್ಲಿರುವುದರಿಂದ ಕೂದಲು ಬೇಗನೇ ಬೆಳೆಯುತ್ತದೆ. ತಲೆಗೂದಲು ಒಣಗಿ,ಬಿರುಕು ಬಿಡುವುದಕ್ಕೆ ನಿರ್ಜಲೀಕರಣವು ಪ್ರಮು ಕಾರಣಗಳಲ್ಲೊಂದಾಗಿದೆ. ಬಿಸಿನೀರು ತಲೆಹೊಟ್ಟಿನಿಂದಲೂಮುಕ್ತಿ ನೀಡುತ್ತದೆ.

ಸೋಂಕುಗಳ ಅಪಾಯವನ್ನು ತಗ್ಗಿಸುತ್ತದೆ

ಬಿಸಿನೀರು ಸೇರಿದಂತೆ ಎರಡು ಕಪ್ ನೀರನ್ನು ಸೇವಿಸುವದರಿಂದ 40 ನಿಮಿಷಗಳವರೆಗೆ ಶರೀರದ ಚಯಾಪಚಯ ದರವು ಶೇ.30ರಷ್ಟು ಹೆಚ್ಚಾಗುತ್ತದೆ. ಬಿಸಿನೀರು ಶರೀರದ ಉಷ್ಣತೆಯನ್ನು ಹೆಚ್ಚಿಸುವ ಮೂಲಕ ಚಯಾಪಚಯ ಪ್ರಕ್ರಿಯೆಗೆ ವೇಗವನ್ನು ನೀಡುತ್ತದೆ ಮತ್ತು ಸೋಂಕುಗಳ ಅಪಾಯವನ್ನು ತಗ್ಗಿಸುತ್ತದೆ.

ಗಂಟಲಿನ ಕಿರಿಕಿರಿಯನ್ನು ಕಡಿಮೆಗೊಳಿಸುತ್ತದೆ

ಶೀತವಾದಾಗ ಬಿಸಿನೀರಿನ ಸೇವನೆಯು ಪರಿಪೂರ್ಣ ನೈಸರ್ಗಿಕ ಪರಿಹಾರವಾಗಿದೆ. ಬಿಸಿನೀರು ಲೋಳೆಯ ಪದರಗಳು ಸ್ರವಿಸುವ ದಪ್ಪ ಸ್ರಾವವನ್ನು ಕರಗಿಸುತ್ತದೆ ಮತ್ತು ಶ್ವಾಸನಾಳದಿಂದ ಅದನ್ನು ನಿವಾರಿಸಲು ನೆರವಾಗುತ್ತದೆ. ಇದರಿಂದ ಗಂಟಲು ಕೆರೆತ ಅಥವಾ ಕಿರಿಕಿರಿಯು ಕಡಿಮೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News