ಶೂಟಿಂಗ್ ವಿಶ್ವಕಪ್: ಅಪೂರ್ವಿಗೆ ಚಿನ್ನ

Update: 2019-05-26 18:47 GMT

ಹೊಸದಿಲ್ಲಿ, ಮೇ 26: ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆದ ವರ್ಷದ ಮೂರನೇ ಅಂತರ್‌ರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್(ಐಎಸ್‌ಎಸ್‌ಎಫ್)ವರ್ಲ್ಡ್ ಕಪ್ ರೈಫಲ್/ಪಿಸ್ತೂಲ್ ಟೂರ್ನಿಯಲ್ಲಿ ಭಾರತದ ಅಪೂರ್ವಿ ಚಾಂಡೇಲಾ ಚಿನ್ನದ ಪದಕ ಜಯಿಸಿದರು.

ಗೋಲ್ಡನ್ ರನ್ ಮುಂದುವರಿಸಿದ ಅಪೂರ್ವಿ ಮಹಿಳೆಯರ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಚಿನ್ನ ಜಯಿಸಿದರು. ಈ ಮೂಲಕ ಈ ವರ್ಷ ಎರಡನೇ ಬಾರಿ ಚಿನ್ನದ ನಗೆ ಬೀರಿದರು.

ಜೈಪುರದ ಶೂಟರ್ ಅಪೂರ್ವಿ ಫೈನಲ್‌ನಲ್ಲಿ 251 ಸ್ಕೋರ್ ಗಳಿಸಿದರು. ಸಮೀಪ ಪ್ರತಿಸ್ಪರ್ಧಿ ಚೀನಾದ ವಾಂಗ್ ಲುಯಾವೊ 250.8 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದರು.ಚೀನಾದ ಇನ್ನೋರ್ವ ಶೂಟರ್ ಕ್ಸೂ ಹಾಂಗ್(229.4)ಮೂರನೇ ಸ್ಥಾನ ಪಡೆದಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಹೊಸದಿಲ್ಲಿಯಲ್ಲಿ ನಡೆದಿದ್ದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ವಿಶ್ವ ದಾಖಲೆ ಸ್ಕೋರ್ ಗಳಿಸಿ ಚಿನ್ನದ ಪದಕಕ್ಕೆ ಗುರಿ ಇಟ್ಟಿದ್ದರು.

 ಬೀಜಿಂಗ್‌ನಲ್ಲಿ ನಡೆದ ಎರಡನೇ ವಿಶ್ವಕಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ರವಿವಾರ ಅಪೂರ್ವಿ ವೃತ್ತಿಜೀವನದ ನಾಲ್ಕನೇ ವಿಶ್ವಕಪ್ ಪ್ರಶಸ್ತಿ ತನ್ನದಾಗಿಸಿಕೊಂಡರು.

ಇಂದು ಸ್ಪರ್ಧೆಯಲ್ಲಿದ್ದ ಇನ್ನೋರ್ವ ಶೂಟರ್ ಇಲಾವೆನಿಲ್ ವಲಾರಿವಾನ್ ಸಹ ಶೂಟರ್ ಅಪೂರ್ವಿಯೊಂದಿಗೆ ಫೈನಲ್ ಸುತ್ತಿಗೆ ತಲುಪಿದ್ದರು. ಆದರೆ, ನಾಲ್ಕನೇ ಸ್ಥಾನ ಪಡೆಯುವುದರೊಂದಿಗೆ ಪದಕ ವಂಚಿತರಾದರು. ಕಂಚು ಜಯಿಸಿರುವ ಚೀನಾದ ಹಾಂಗ್ ವಿರುದ್ಧ ಕೇವಲ 0.1 ಅಂಕದಿಂದ ಪದಕ ತಪ್ಪಿಸಿಕೊಂಡರು.

149 ಶೂಟರ್‌ಗಳಿದ್ದ ಅರ್ಹತಾ ಸುತ್ತಿನಲ್ಲಿ ಅಪೂರ್ವಿ ಹಾಗೂ ಇಲಾವೆನಿಲ್ ಕ್ರಮವಾಗಿ 633 ಹಾಗೂ 632.7 ಅಂಕ ಗಳಿಸಿ ಅಗ್ರ-2 ಸ್ಥಾನ ಪಡೆದಿದ್ದರು. 628.9 ಅಂಕ ಗಳಿಸಿದ ಅಂಜುಮ್ ವೌದ್ಗಿಲ್ 11ನೇ ಸ್ಥಾನ ಪಡೆದಿದ್ದರು. ಕೇವಲ 1.1 ಅಂಕದಿಂದ ಫೈನಲ್‌ಗೆ ತೇರ್ಗಡೆಯಾಗುವುದರಿಂದ ವಂಚಿತರಾದರು.

ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ರಾಹಿ ಸರ್ನೊಬಾಟ್ 294 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು. ಸೋಮವಾರ ನಡೆಯುವ ರ್ಯಾಪಿಡ್ ಫೈಯರ್ ಸುತ್ತಿನಲ್ಲಿ ಸರ್ನೊಬಾಟ್ ಪದಕ ಗೆಲ್ಲುವ ಅಪೂರ್ವ ಅವಕಾಶವಿದೆ. ಇಲ್ಲಿ ಪದಕ ಗೆದ್ದರೆ ಒಲಿಂಪಿಕ್ ್ಸನಲ್ಲಿ ಸ್ಥಾನ ಪಡೆಯಬಹುದು. ಭಾರತ ರೈಫಲ್ ಹಾಗೂ ಪಿಸ್ತೂಲ್ ಸ್ಪರ್ಧೆಗಳಲ್ಲಿ ಐದು ಕೋಟಾ ಸ್ಥಾನವನ್ನು ಭರ್ತಿ ಮಾಡಿದೆ. ಅಪೂರ್ವಿ, ಅಂಜುಮ್, ಸೌರಭ್ ಚೌಧರಿ, ಅಭಿಷೇಕ್ ವರ್ಮಾ ಹಾಗೂ ದಿವ್ಯಾಂಶ್ ಸಿಂಗ್ ಪವಾರ್ ಈಗಾಗಲೇ ಒಲಿಂಪಿಕ್ಸ್ ನಲ್ಲಿ ಸ್ಥಾನ ಪಡೆದಿದ್ದಾರೆ.

ಸೋಮವಾರ ಮೂರು ಫೈನಲ್ ಪಂದ್ಯಗಳು ನಡೆಯಲಿದ್ದು, ಟೋಕಿಯೋ ಒಲಿಂಪಿಕ್ಸ್‌ಗೆ ಆರು ಕೋಟಾ ಸ್ಥಾನಗಳು ಖಾಲಿಯಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News