ಪೂರ್ವ ಪ್ರಾಥಮಿಕ ಶಾಲೆಗಳು ಅಂಗನವಾಡಿಗಳಲ್ಲಿಯೆ ಮುಂದುವರೆಯಲಿ: ಅಂಗನವಾಡಿ ನೌಕರರ ಸಂಘಟನೆ ರಾಜ್ಯಾಧ್ಯಕ್ಷೆ ವರಲಕ್ಷ್ಮಿ
ಬೆಂಗಳೂರು, ಮೇ 27: ರಾಜ್ಯ ಸರಕಾರ ಸರಕಾರಿ ಶಾಲೆಗಳಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಪೂರ್ವ ಪ್ರಾಥಮಿಕ ಶಾಲೆಗಳನ್ನು ಅಂಗನವಾಡಿಗಳಲ್ಲಿಯೆ ಮುಂದುವರೆಸಬೇಕೆಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಒತ್ತಾಯಿಸಿದ್ದಾರೆ.
ಸೋಮವಾಶರ ಭಾರತ ಜ್ಞಾನ ವಿಜ್ಞಾನ ಸಂಸ್ಥೆ ಶಾಸಕರ ಭವನದಲ್ಲಿ ಆಯೋಜಿಸಿದ್ದ ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳ ಆರಂಭ ಕುರಿತಂತೆ ಎದುರಾಗಿರುವ ಸಾಧಕ-ಬಾಧಕಗಳನ್ನು ಚರ್ಚಿಸಲು ಆಯೋಜಿಸಿದ್ದ ಸಾರ್ವಜನಿಕ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ಮಂಡಿಸಿದರು.
ರಾಜ್ಯ ಸರಕಾರ ಏಕಾಏಕಿ 276 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಆದೇಶಿಸಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಅಂಗನವಾಡಿ ಸಂಘಟನೆಗಳ ಜೊತೆ ಮಾತನಾಡದೆ ಜಾರಿ ಮಾಡಲು ಆದೇಶಿಸಿರುವುದು ಹಲವು ಗೊಂದಲಗಳಿಗೆ, ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅವರು ವಿಷಾದಿಸಿದರು.
ಪೂರ್ವ ಪ್ರಾಥಮಿಕ ಶಾಲೆಗಳಲ್ಲಿಯೆ 3ರಿಂದ 5ವರ್ಷದ ಮಕ್ಕಳ ಹೋದರೆ ಅಂಗನವಾಡಿಗಳ ಗತಿ ಏನು. ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಶಿಕ್ಷಕರು, ಕಾರ್ಯಕರ್ತೆಯರ ಮುಂದಿನ ವೃತ್ತಿ ಬದುಕು ಹೇಗೆ ಎಂಬುದರ ಬಗ್ಗೆ ಯಾವುದೆ ಖಚಿತ ತೀರ್ಮಾನವಿಲ್ಲ. ಸುಮಾರು 45ವರ್ಷಗಳಿಂದ ರೂಪಗೊಂಡಿರುವ ಅಂಗನವಾಡಿಗಳ ಸ್ವರೂಪವನ್ನು ನಿರ್ಲಕ್ಷಿಸಿ, ಹೊಸದೊಂದು ಯೋಜನೆಯನ್ನು ರೂಪಿಸಲು ಹೊರಟಿರುವುದರ ಕುರಿತು ಚರ್ಚೆಗೆ ಒಳಪಡಿಸದೆ ಆದೇಶ ಹೊರಡಿಸಿರುವುದರಿಂದ ಅಂಗನವಾಡಿ ಕಾರ್ಯಕರ್ತರು ಆತಂಕಗೊಂಡಿದ್ದಾರೆ ಎಂದು ಅವರು ಹೇಳಿದರು.
ಪೂರ್ವ ಪ್ರಾಥಮಿಕ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಲಾಗಿದೆ. ಆದರೆ, ಅಂಗನವಾಡಿಗಳಲ್ಲಿಯೆ ಪರಿಣಾಮಕಾರಿಯಾಗಿ ತರಬೇತಿ ಹೊಂದಿರುವಂತಹ ಶಿಕ್ಷಕರು ಇದ್ದಾರೆ. ಅವರಿಗೆ ಮತ್ತಷ್ಟು ಸೂಕ್ತ ತರಬೇತಿ ನೀಡಿ ಇಲ್ಲಿಯೆ ಪ್ರಾರಂಭಿಸಿದರೆ ಮಕ್ಕಳ ಸುರಕ್ಷತೆ, ಮಾನಸಿಕ, ದೈಹಿಕ ಬೆಳವಣಿಗೆಗೆ ಪೂರಕವಾದದ್ದಾಗಿದೆ. ಈ ಕುರಿತು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯುವುದು ವೈಜ್ಞಾನಿಕ ಕ್ರಮವಾಗಿದೆ. ಆದರೆ, ಅದರ ಸ್ವರೂಪ ಹೇಗಿರಬೇಕೆಂಬುದನ್ನು ಶಿಕ್ಷಣ ತಜ್ಞರು, ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಹೋರಾಟಗಾರರನ್ನು ಜೊತೆಗೂಡಿ ಕೂಲಂಕಷವಾಗಿ ಚರ್ಚಿಸಿ ಜಾರಿಗೆ ತರಬೇಕೆಂದು ತಿಳಿಸಿದರು.
ಸರಕಾರಿ ಶಾಲೆಗಳಲ್ಲಿ ತೆರೆಯುತ್ತಿರುವ ಪೂರ್ವ ಪ್ರಾಥಮಿಕ ಶಾಲೆಗಳು ಅಂಗನವಾಡಿ ಕೇಂದ್ರಗಳಿಗೆ ಪೂರಕವಾಗಿರಬೇಕೆ ವಿನಃ ಮಾರಕವಾಗಿರಬಾರದು. ಈ ಸಂಬಂಧ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ಸರಕಾರಕ್ಕೆ ಸಲ್ಲಿಸಿರುವ ಶಿಫಾರಸ್ಸಿನಲ್ಲಿ ಸ್ಪಷ್ಟವಾಗಿ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಈ ವೇಳೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯ ಅಧ್ಯಕ್ಷ ಜಿ.ಆರ್.ಶಿವಶಂಕರ್, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಯಮ್ಮ, ಮಕ್ಕಳ ಹಕ್ಕು ಟ್ರಸ್ಟ್‌ನ ಡಾ.ಪದ್ಮಿನಿ, ಸಾಹಿತಿ ಎಲ್.ಎನ್.ಮುಕುಂದರಾಜು, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಂಬರೀಶ್, ಬಿಜಿವಿಎಸ್‌ನ ರಾಜ್ಯ ಜಂಟಿ ಕಾರ್ಯದರ್ಶಿ ಆರ್.ರಾಮಕೃಷ್ಣ, ಎಸ್.ಚಿಕ್ಕರಾಜು, ಗುರುರಾಜು ದೇಸಾಯಿ ಮತ್ತಿತರರಿದ್ದರು.